ಮಹಿಳೆಯರ, ಮಕ್ಕಳ ಸಾಗಣೆ ತಡೆಗೆ ಎಲ್ಲರ ಸಹಕಾರ ಅಗತ್ಯ: ಬೆಟದಪ್ಪ ಮಾಳೇಕೊಪ್ಪ

KannadaprabhaNewsNetwork | Published : Nov 30, 2024 12:48 AM

ಸಾರಾಂಶ

ಮಹಿಳೆಯರು ಮತ್ತು ಮಕ್ಕಳು ಸಮಾಜದ ಬಹುದೊಡ್ಡ ಆಸ್ತಿ. ಅವರೆಲ್ಲರ ಹಕ್ಕುಗಳ ರಕ್ಷಣೆಗೆ ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟದಪ್ಪ ಮಾಳೇಕೊಪ್ಪ ಹೇಳಿದರು.

ಯಲಬುರ್ಗಾ: ಮಹಿಳೆಯರ ಮತ್ತು ಮಕ್ಕಳ ಸಾಗಣೆ ತಡೆಗಟ್ಟುವಲ್ಲಿ ಕಾನೂನಿನ ಜತೆಗೆ ಎಲ್ಲರ ಸಹಭಾಗಿತ್ವ ಅಗತ್ಯವಾಗಿದೆ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟದಪ್ಪ ಮಾಳೇಕೊಪ್ಪ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯಡಿ ಗ್ರಾಪಂ ಮಟ್ಟದ ಕಾವಲು ಸಮಿತಿ ಸದಸ್ಯರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಮಹಿಳೆಯರ ಮತ್ತು ಮಕ್ಕಳ ಮೇಲೆ ದೌರ್ಜನ್ಯ, ಹಲ್ಲೆ, ಕೊಲೆಗಳಂತಹ ಘಟನೆಗಳು ನಡೆಯುತ್ತಿರುವುದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಹಿಳೆಯರು ಮತ್ತು ಮಕ್ಕಳು ಸಮಾಜದ ಬಹುದೊಡ್ಡ ಆಸ್ತಿ. ಅವರೆಲ್ಲರ ಹಕ್ಕುಗಳ ರಕ್ಷಣೆಗೆ ಪ್ರಾಮಾಣಿಕವಾಗಿ ಶ್ರಮಿಸಬೇಕಿದೆ. ಸಮಾಜದಲ್ಲಿ ಮಹಿಳೆಯರ ಮತ್ತು ಮಕ್ಕಳ ಸಾಗಣೆ ತಡೆಗಟ್ಟುವ ಕುರಿತಂತೆ ಪೂರ್ವಭಾವಿ ವಿಧಾನ ಕುರಿತು ತಿಳಿದುಕೊಳ್ಳುವ ಅನಿವಾರ್ಯತೆ ಮತ್ತು ಅಗತ್ಯತೆ ಇದೆ. ಮಹಿಳೆಯರ ಮತ್ತು ಮಕ್ಕಳ ಸಾಗಣೆ ತಡೆಗಟ್ಟುವಲ್ಲಿ ಗ್ರಾಪಂ ಮಟ್ಟದ ಕಾವಲು ಸಮಿತಿಯ ಸದಸ್ಯರ ಪಾತ್ರ ದೊಡ್ಡದು. ಈ ನಿಟ್ಟಿನಲ್ಲಿ ಸಮಿತಿಯ ಸದಸ್ಯರು, ಕಾರ್ಯಾಗಾರ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ಮಹಿಳೆಯರ ಸಾಗಾಟ ಮತ್ತು ಮಕ್ಕಳ ಮೇಲೆ ಬೀರುವ ದುಷ್ಟಪರಿಣಾಮ ಕುರಿತು ವಿವರಿಸಿದರು. ಇಂತಹ ಘಟನೆಗಳು ನಡೆಯದಂತೆ ಪೂರ್ವಭಾವಿಯಾಗಿ ಕಾರ್ಯಾಗಾರದ ಮೂಲಕ ಗ್ರಾಪಂ ಮಟ್ಟದ ಸಮಿತಿ ಸದಸ್ಯರಿಗೆ ತಿಳಿಸಲಾಗುತ್ತಿದೆ ಎಂದು ಹೇಳಿದರು.

ಪಿಡಿಒ ಫಕೀರಪ್ಪ ಕಟ್ಟಿಮನಿ ಮಾತನಾಡಿ, ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ನಿರಂತರ ಜಾಗೃತಿ ಮತ್ತು ನಿಗಾ ಅಗತ್ಯ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವ ಮೂಲಕವೂ ಅವರನ್ನು ಎಲ್ಲ ರೀತಿಯಲ್ಲಿ ಬಲಿಷ್ಠರನ್ನಾಗಿಸಬೇಕಿದೆ. ಮಕ್ಕಳ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಪೊಲೀಸ್ ಇಲಾಖೆ ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಎಲ್ಲ ಅರಿವು ಹೊಂದಿರುವ ನೀಚ ಮನಸ್ಸಿನ ವ್ಯಕ್ತಿಗಳೇ ಇಂತಹ ಕೃತ್ಯದಲ್ಲಿ ತೊಡಗುತ್ತಿದ್ದು, ಇಡೀ ಸಮಾಜ ಜಾಗೃತರಾಗಿ ನಿಲ್ಲಬೇಕಿದೆ ಎಂದರು.

ಮಕ್ಕಳನ್ನು ಸಮಾಜದ ಆಸ್ತಿಯಾಗಿ ರೂಪಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಎಲ್ಲರೂ ಅದನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂದರು.

ಸಂಯೋಜಕ ಶಿವರಾಜ, ತರಬೇತುದಾರರಾದ ಪುಂಡಲಿ, ಶಾರದಾ, ತಾಲೂಕಿನ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒಗಳು, ಅಂಗನವಾಡಿ ಮೇಲ್ವಿಚಾರಕಿಯರು, ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

Share this article