ಹೊಸಪೇಟೆಯಲ್ಲಿ ಪ್ರಮುಖ ಪಾಲುದಾರರ ಸಮಗ್ರ ಸಮಾಲೋಚನಾ ಸಭೆಯಲ್ಲಿ ಯುನೆಸ್ಕೋ ತಂಡದ ಪ್ರೊ. ಜಾರ್ಜ್ ಅಬುಂಗ್
ಕನ್ನಡಪ್ರಭ ವಾರ್ತೆ ಹೊಸಪೇಟೆ
ಹಂಪಿಯ ಸಮಗ್ರ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯೂ ಪ್ರಮುಖವಾಗಿದೆ ಎಂದು ಯುನೆಸ್ಕೊ ಅಂತಾರಾಷ್ಟ್ರೀಯ ಪಾರಂಪರಿಕ ಪರಿಣಿತ ಕಿನ್ಯಾದ ಪ್ರೊ.ಜಾರ್ಜ್ ಅಬುಂಗ್ ಅಭಿಪ್ರಾಯಪಟ್ಟರು.ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಸಂಜೆ ಯುನೆಸ್ಕೋ ತಂಡ ಹಾಗೂ ಐಕೋಮೋಸ್ ರಿಯಾಕ್ಟಿವ್ ಮಾನಿಟರಿಂಗ್ ಮಿಷನ್ ತಂಡದ ಹಂಪಿ ಪ್ರವಾಸದ ಭಾಗವಾಗಿ ವಿಜಯನಗರ ಮತ್ತು ಕೊಪ್ಪಳ ಜಿಲ್ಲಾಡಳಿತಗಳ ಜಂಟಿ ಆಶ್ರಯದಲ್ಲಿ ನಡೆದ ಪ್ರಮುಖ ಪಾಲುದಾರರ ಸಮಗ್ರ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಜಪಾನ್‌ನ ಇಚಿಡಾ ಶಿಮೋಡಾ ಮಾತನಾಡಿ, ಸ್ಥಳೀಯರನ್ನು ಪಾರಂಪರಿಕ ತಾಣಗಳಿಂದ ಹೊರ ಹಾಕಿದರೆ "ಜೀವಂತ ಪಾರಂಪರಿಕ ತಾಣ’ಗಳು ‘ಮೃತ ತಾಣ’ಗಳಾಗಿ ಬದಲಾಗುತ್ತವೆ, ಸ್ಥಳೀಯರ ಸುಸ್ಥಿರ ಅಭಿವೃದ್ಧಿಯೇ ಪಾರಂಪರಿಕ ಮೌಲ್ಯಗಳನ್ನು ರಕ್ಷಿಸಲು ಇರುವ ಏಕೈಕ ಮಾರ್ಗ ಎಂದರು.
ಎಎಸ್ಐ ಹೆಚ್ಚುವರಿ ಮಹಾನಿರ್ದೇಶಕ ಜಾನ್ವಿಜ್ ಶರ್ಮಾ ಮಾತನಾಡಿ, 1986ರಲ್ಲಿ ಹಂಪಿಯನ್ನು ವಿಶ್ವ ಪಾರಂಪರಿಕ ತಾಣವೆಂದು ಘೋಷಿಸಲಾಯಿತು. 2006ರಲ್ಲಿ ಮೊದಲ ಸಮಗ್ರ ನಿರ್ವಹಣಾ ಯೋಜನೆ (ಐಎಂಪಿ) ತಯಾರಾಗಿತ್ತು. ಪ್ರಸ್ತುತ 1972ರ ಸಮಾವೇಶದ ಆಧಾರದ ಮೇಲೆ ಹೊಸ ಐಎಂಪಿ ಸಿದ್ಧಪಡಿಸಲಾಗುತ್ತಿದ್ದು, ಹಂಪಿಯನ್ನು ಜೀವಂತ ಸಂಸ್ಕೃತಿಯ ತಾಣವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಸಭೆಯಲ್ಲಿದ್ದ ಎಲ್ಲಾ ಪಾಲುದಾರರು ಹಂಪಿಯ ಪಾರಂಪರಿಕ ಸಂರಕ್ಷಣೆ ಮತ್ತು ಜವಾಬ್ದಾರಿಯುತ ಪ್ರವಾಸೋದ್ಯಮದ ಬೆಳವಣಿಗೆಗೆ ಒಮ್ಮತದ ಬೆಂಬಲ ಸೂಚಿಸಿದರು.
ಯುನೆಸ್ಕೊ ಮುಂದೆ ಪ್ರಮುಖ ಬೇಡಿಕೆಗಳು:
-ಅಂಜನಾದ್ರಿಯಲ್ಲಿ ಹಿರಿಯ ನಾಗರಿಕರಿಗೆ ಅನುಕೂಲವಾಗಲು ರೋಪ್ ವೇ ಮತ್ತು ತುರ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು. ಕಮಲಾಪುರ ಕೆರೆಯ ಪುನಃರುಜ್ಜೀವನ ಆಗಬೇಕು.
_ಮಹಿಳಾ ಸ್ವಸಹಾಯ ಗುಂಪುಗಳು, ಆಟೊ ಚಾಲಕರು ಮತ್ತು ಗೈಡ್‌ಗಳಿಗೆ ನಿರ್ದಿಷ್ಟ ಸ್ಥಳಗಳು ಹಾಗೂ ಸ್ಪಷ್ಟ ಕಾರ್ಯಾಚರಣೆಯ ಮಾರ್ಗಸೂಚಿಗಳನ್ನು ಒದಗಿಸಬೇಕು.
-ಹಂಪಿ ಹಾಗೂ ಸುತ್ತಮುತ್ತಲಿನ ಕಡಿಮೆ ಪ್ರಸಿದ್ಧ ದೇವಾಲಯಗಳಿಗೆ ಸಂಪರ್ಕ ರಸ್ತೆಗಳನ್ನು ಉತ್ತಮಪಡಿಸಬೇಕು.ಸಭೆಯಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್, ವಿಜಯನಗರ ಜಿ.ಪಂ. ಸಿಇಒ ಗರಿಮಾ ಪನ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಎಸ್. ಜಾಹ್ನವಿ, ಕೊಪ್ಪಳ ಎಸ್ಪಿ ಸಾಹಿಲ್ ಸೇರಿದಂತೆ ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.