ಹೊನ್ನಾಳಿ: ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳು ತುಂಬಾ ಚೆನ್ನಾಗಿ ಮಾದರಿಗಳನ್ನು ತಯಾರು ಮಾಡಿದ್ದಾರೆ ಇದು ಮಕ್ಕಳಲ್ಲಿನ ಕ್ರಿಯಾಶೀಲತೆಗೆ ಸಾಕ್ಷಿಯಾಗಿದೆ ಎಂದು ಬಿಇಒ ಎಸ್.ಸಿ.ನಂಜರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಂತ್ರಿಕ ಜಗತ್ತಿಗೆ ಮಕ್ಕಳನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಶಾಲೆಯ ಆಡಳಿತ ಮಂಡಳಿಯವರು ಪ್ರಥಮ ಹೆಜ್ಜೆಯಾಗಿ ವಿಜ್ಞಾನ ವಸ್ತುಪ್ರದರ್ಶನವನ್ನು ಹಮ್ಮಿಕೊಂಡಿದ್ದು ಶ್ಲಾಘನೀಯ ಕಾರ್ಯವೆಂದರು. ಖಾಸಗಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡಿ ದೇಶಕ್ಕೆ ಉತ್ತಮ ಪ್ರಜೆಗಳನ್ನು ಕೊಡುಗೆಯಾಗಿ ಕೊಡುವ ನಿಟ್ಟಿನಲ್ಲಿ ಶಿಕ್ಷಣ ನೀಡಬೇಕೆಂದು ಸೂಚಿಸಿದರು.
ಮೈಸೂರಿನ ಗ್ರಾವಿಟಿ ಸೈನ್ಸ್ ಫೌಂಡೇಶನ್‍ನ ವಿಜ್ಞಾನಿ ಎ.ಎಸ್.ಅಭಿಷೇಕ್ ಮಾತನಾಡಿ, ಚಟುವಿಟಿಕೆಯಾಧಾರಿತ ಕಲಿಕೆ ಬಹಳಷ್ಟು ಪರಿಣಾಮಕಾರಿಯಾಗಿರುತ್ತದೆ. ಪೋಷಕರು-ಶಿಕ್ಷಕರು ಮಕ್ಕಳಲ್ಲಿ ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಬೇಕು. ಮಕ್ಕಳಿಗೆ ಕ್ರಿಯಾತ್ಮಕವಾಗಿ ಕಲಿಸುವುದರ ಜೊತೆಗೆ ವಿಭಿನ್ನವಾಗಿ ಯೋಚಿಸುವುದನ್ನು ಕಲಿಸಬೇಕಿದೆ ಎಂದರು.ವಿಜ್ಞಾನ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾತ್ರವೇ ಸೀಮಿತವಾಗಿರಿದೆ ಅದರ ಬದಲಾಗಿ ವಿಜ್ಞಾನವನ್ನು ಜನಸಾಮಾನ್ಯರಿಗೂ ತಲುಪಿಸುವುದರ ಜೊತೆಗೆ ಸಮಾಜದಲ್ಲಿ ವೈಜ್ಞಾನಿಕ ಮನೋಭಾವವನ್ನು ಹೆಚ್ಚಿಸುವ ಕೆಲಸವಾಗಬೇಕಿದೆ ಎಂದು ತಿಳಿಸಿದರು.
ಐ ಮಾಸ್ಟರ್ ಸಂಸ್ಥೆಯ ವಿರೇಶ್ ಮಾತನಾಡಿ, ಜಿಲ್ಲೆಯಲ್ಲಿಯೇ ವಿಂಪನ ಸೆಂಟ್ರಲ್ ಶಾಲೆಯಲ್ಲಿ ಇನ್ನೋವೇಟಿವ್ ಶಿಕ್ಷಣವನ್ನು ನೀಡುವ ಮೂಲಕ ಹೊಸ ಶಿಕ್ಷಣ ವ್ಯವಸ್ಥೆಗೆ ಭದ್ರ ಬುನಾದಿ ಹಾಕಲಾಗುತ್ತಿದೆ. ಇದಕ್ಕೆ ಪೋಷಕರ ಸಲಹೆ-ಸಹಕಾರ ಅತ್ಯಗತ್ಯವಾಗಿಬೇಕಿದ್ದು, ಮಕ್ಕಳು ಮುಕ್ತವಾಗಿ ಕಲಿಯುವ ವಾತಾವರಣವನ್ನು ಶಾಲೆಯಲ್ಲಿ ಸೃಷ್ಟಿಸಲಾಗಿದೆ ಎಂದು ವಿವರಿಸಿದರು.