ಕನ್ನಡಪ್ರಭ ವಾರ್ತೆ ತುಮಕೂರು
ನಗರದ ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸ್ಟ್ರಾಂಗ್ ರೂಂಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಚುನಾವಣೆ ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ನಡೆಯಲು ಕಾರಣಕರ್ತರಾದ ಪೊಲೀಸ್ ಅಧಿಕಾರಿ, ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಅಧಿಕಾರಿ, ಸಿಬ್ಬಂದಿ ಹಾಗೂ 22 ಲಕ್ಷ ಮತದಾರರು, ಸಾರ್ವಜನಿಕರು, ಮಾಧ್ಯಮದವರಿಗೆ ಜಿಲ್ಲಾಡಳಿತ ಪರವಾಗಿ ಧನ್ಯವಾದ ಎಂದರು.
ಎಲ್ಲ ರಾಜಕೀಯ ಪಕ್ಷಗಳು ಸಹ ಚುನಾವಣೆಯ ಯಶಸ್ವಿಗೆ ಸಹಕಾರ ನೀಡಿದ್ದಾರೆ. ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಸ್ವೀಪ್ ಸಮಿತಿ ಚಟುವಟಿಕೆ, ಪಾಲಿಕೆ ಅಧಿಕಾರಿಗಳು ನಡೆಸಿದ ಜಾಗೃತಿ ಜಾಥಾಗಳು ಸಹ ಪ್ರಮುಖ ಕಾರಣವಾಗಿದ್ದು, ಅವರಿಗೂ ಸಹ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಎಫ್‌ಎಸ್‌ಟಿ ತಂಡ ಕಾರ್ಯನಿರ್ವಹಿಸುತ್ತಿರುತ್ತದೆ. ರಾಜ್ಯದ ಉಳಿದ 14 ಕ್ಷೇತ್ರಗಳಿಗೆ ಮೇ 7 ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತವೆ ಎಂದು ಮಾಹಿತಿ ನೀಡಿದರು.
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಆಗಿದೆ. 2ನೇ ಅತಿ ಹೆಚ್ಚು ಮತದಾನ ತುಮಕೂರು ಗ್ರಾಮಾಂತರದಲ್ಲಿ ಆಗಿದೆ. ತುಮಕೂರು ನಗರದಲ್ಲಿ 2019 ಕ್ಕೆ ಹೋಲಿಸಿದಾಗ ಈ ಬಾರಿ ಶೇ. 2 ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಿದ್ದು, ಈ ಬಾರಿ ಶೇ. 67.38 ರಷ್ಟು ಮತದಾನವಾಗಿದೆ. 8 ಮತಗಟ್ಟೆಯಲ್ಲಿ ಮತಯಂತ್ರಗಳ ಲೋಪದೋಷ ಕಂಡು ಬಂದಿತ್ತು. ತಕ್ಷಣ ಅದನ್ನು ಬದಲಾಯಿಸಿ ಮತದಾನ ಮುಂದುವರೆಸಲಾಯಿತು ಎಂದು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ, ಮಧುಗಿರಿ ಹಾಗೂ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಇವಿಎಂ ಯಂತ್ರಗಳು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ ಹಾಗೂ ಗುಬ್ಬಿ ವಿಧಾನಸಭಾ ಕ್ಷೇತ್ರಗಳ ಇವಿಎಂ ಯಂತ್ರಗಳನ್ನು ಇರಿಸಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಮಾತನಾಡಿ, ತುಮಕೂರು ಲೋಕಸಭೆ ಸಾರ್ವತ್ರಿಕ ಚುನಾವಣೆ ಯಶಸ್ವಿಯಾಗಿ ಮುಗಿದಿದ್ದು, ತುಮಕೂರು ವಿವಿ ವಿಜ್ಞಾನ ಕಾಲೇಜಿನಲ್ಲಿ 4 ಕ್ಷೇತ್ರಗಳು ಹಾಗೂ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ 4 ಕ್ಷೇತ್ರಗಳ ಇವಿಎಂ ಯಂತ್ರಗಳನ್ನು ಇಡಲಾಗಿದ್ದು, ಈ ಸ್ಟ್ರಾಂಗ್ ರೂಂಗಳಿಗೆ ಸಿವಿಲ್ ಪೊಲೀಸರು ಹಾಗೂ ಸಿಆರ್‌ಪಿಎಫ್ ಯೋಧರ ಭದ್ರತೆ ಒದಗಿಸಲಾಗಿದೆ. ಸಿವಿಲ್ ಪೊಲೀಸರು ಮತ್ತು ಸಿಆರ್‌ಪಿಎಫ್ ಪೊಲೀಸರು ಜೂ. 4ರ ವರೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.