ಕನ್ನಡಪ್ರಭ ವಾರ್ತೆ ಸವಣೂರು
ಎಲ್ಲ ಸಮಾಜದ ಜನರನ್ನು ಒಗ್ಗೂಡಿಸಿಕೊಂಡು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಳುವ ಮೂಲಕ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಾತ್ಯತೀತ ನಾಯಕರಾಗಿದ್ದಾರೆ. ಕ್ಷೇತ್ರದ ಇನ್ನಷ್ಟು ಅಭಿವೃದ್ಧಿಗಾಗಿ ಭರತ್ ಬೊಮ್ಮಾಯಿ ಆಶೀರ್ವದಿಸಬೇಕು ಎಂದು ಮಾಜಿ ಸಚಿವ ಬೈರತಿ ಬಸವರಾಜ ಮತದಾರರಲ್ಲಿ ಮನವಿ ಮಾಡಿದರು.ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಭರತ ಬೊಮ್ಮಾಯಿ ಪರ ಮತ ಯಾಚಿಸಿ ಮಾತನಾಡಿದರು, ಬಾಡದಲ್ಲಿ ಕನಕದಾಸರ ಐತಿಹ್ಯವನ್ನು ಸಾರುವ ಕನಕನ ಅರಮನೆಯನ್ನು ನಿರ್ಮಿಸಿ ಪ್ರವಾಸಿ ತಾಣವನ್ನು ಮಾಡುವ ಮೂಲಕ ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿಯನ್ನಾಗಿಸಿದ್ದಾರೆ. ಸವಣೂರು ಪಟ್ಟಣದಲ್ಲಿ ನೀರಿನ ಹಾಹಾಕಾರ ಎದುರಾಗಿ ಇಲ್ಲಿನ ಜನರು ಪರಿತಪಿಸುವ ಸಂದರ್ಭದಲ್ಲಿ ವರದಾ ನದಿಯಿಂದ ನೀರು ತಂದು ಶಾಶ್ವತ ಕುಡಿಯುವ ನೀರಿನ ಯೋಜನೆಯ ಮೂಲಕ ಪಟ್ಟಣದ ಜನರ ಬಹುದಿನದ ಬೇಡಿಕೆಯನ್ನು ಶಾಶ್ವತವಾಗಿ ಪರಿಹರಿಸಿದ್ದಾರೆ. ಅವರ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಲು ಒಂದು ಸಭೆ ಸಾಲದು. ಅವರು ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿ ಮಾಡಲು ಕಂಡ ಕನಸುನ್ನು ಹುಸಿಯಾಗಿಸದೇ ಈ ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಅವರು ಪುತ್ರ ಭರತನನ್ನು ಅಭ್ಯರ್ಥಿಯಾಗಿಸಿದ್ದಾರೆ. ರಾಜ್ಯಕ್ಕೆ ಈ ಕ್ಷೇತ್ರ ಮಾದರಿಯಾಗಲು ಭರತ ಬೊಮ್ಮಾಯಿ ಅವರಿಗೆ ನ. ೧೩ರಂದು ನಿಮ್ಮ ಮತದ ಆಶೀರ್ವಾದದ ಮೂಲಕ ಜಯಶಾಲಿಯನ್ನಾಗಿಸಬೇಕು ಎಂದು ಮನವಿ ಮಾಡಿದರು.
ಚುನಾವಣೆಯ ನಂತರ ಪುನಃ ಭರತ ಬೊಮ್ಮಾಯಿ ಅವರೊಂದಿಗೆ ಆಗಮಿಸಿ ನಿಮ್ಮ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇನೆ. ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.ಭೋಜರಾಜ ಕರೋದಿ, ಜಿಪಂ ಮಾಜಿ ಅಧ್ಯಕ್ಷ ರಾಜೇಂದ್ರ ಹಾವೇರಣ್ಣವರ, ಕುರುಬ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಹರಿಹರ, ತಾಪಂ ಮಾಜಿ ಅಧ್ಯಕ್ಷ ಮಾಲತೇಶ ಬಿಜ್ಜೂರ, ಪುರಸಭೆ ಸದಸ್ಯೆ ರೇಖಾ ಬಂಕಾಪುರ, ಮುಖಂಡರಾದ ಮೈಲಾರಪ್ಪ ತಳಿಹಳ್ಳಿ, ನಿಂಗಪ್ಪ ಬಂಕಾಪುರ, ಶಿವಾನಂದ ಮ್ಯಾಗೇರಿ, ಮೈಲಾರಪ್ಪ ಬಂಕಾಪುರ, ಹನಮಂತ ಕಲಘಟಗಿ, ಮಹೇಶ ಜಡಿ ಹಾಗೂ ಇತರರು ಇದ್ದರು.
ಭರತ್ ಬೊಮ್ಮಾಯಿ ಮುಂದಿನ ಶಾಸಕ: ಬಿ.ಸಿ. ಪಾಟೀಲಹಾವೇರಿ: ಭರತ್ ಬೊಮ್ಮಾಯಿ ಮುಂದಿನ ಶಾಸಕ ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.ಸವಣೂರು ಪಟ್ಟಣದಲ್ಲಿ ಬಿಜೆಪಿ ರೋಡ್ ಶೋದಲ್ಲಿ ಮಾತನಾಡಿದರು. ಭರತ್ ಗೆಲ್ಲಿಸಲು ಕಾರ್ಯಕರ್ತರು ಮನೆ ಮನೆಗೆ ಹೋಗಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ, ಹಗರಣ, ಅಧಿಕಾರಿಗಳ ಆತ್ಮಹತ್ಯೆಗಳ ಕುರಿತು ತಿಳಿಸಿ ಮತ ಹಾಕಿಸಬೇಕಿದೆ ಎಂದರು.ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಎಲ್ಲ ಕಡೆ ಮಳೆ ಆಗುತ್ತಿತ್ತು. ನಾವು ಬೆಳೆ ವಿಮೆ, ವಿದ್ಯಾನಿಧಿ ಕೊಡುತ್ತಿದ್ದೆವು. ಮನೆ ಕಳೆದುಕೊಂಡವರಿಗೆ ₹5 ಲಕ್ಷ ಕೊಡುತ್ತಿದ್ದೇವು. ಈಗ ಬರಿ ₹1.20 ಲಕ್ಷ ಕೊಡ್ತಿದಾರೆ ಎಂದರು.
ಹೆಂಡ್ತಿಗೆ ಫ್ರೀ, ಗಂಡನಿಗೆ ಡಬಲ್ ಚಾರ್ಜ್ಶಕ್ತಿ ಯೋಜನೆಯಲ್ಲಿ ಉಚಿತ ಬಸ್ ಪ್ರಯಾಣ ಎಂದು ಹೇಳ್ತಾರೆ, ಆದರೆ, ಬಸ್ ಚಾರ್ಜ್ ಈಗ ಡಬಲ್ ಆಗ್ತಿದೆ. ಹಣ ಎಲ್ಲಿ ಹೋಯ್ತು ಅಂದರೆ ಗೃಹಲಕ್ಷ್ಮಿಗೆ ಕೊಟ್ಟಿದಿವಿ ಅಂತಾರೆ. ಗೃಹಲಕ್ಷ್ಮಿ ಹಣ ಎಲೆಕ್ಷನ್ ಬಂದಿದೆ ಅಂತ ಹಾವೇರಿ ಜಿಲ್ಲೆಗೆ ಹಾಕಿದ್ದಾರೆ. ರಾಜ್ಯದಲ್ಲಿ ಒಂದೇ ಒಂದು ರುಪಾಯಿ ಅಭಿವೃದ್ಧಿ ಆಗಿಲ್ಲ. ಭ್ರಷ್ಟಾಚಾರ, ಹಗರಣಗಳು ನಡೆಯುತ್ತಿವೆ ಎಂದು ವಾಗ್ದಾಳಿ ನಡೆಸಿದರು.ಸಿಎಂ ಸಿದ್ದರಾಮಯ್ಯ ನೀವು ಸತ್ಯ ಹರಿಶ್ಚಂದ್ರ ಆಗಿದ್ರೆ, ಆ ಸೈಟ್ ನಂದೇ ಅಂತ ಕೋರ್ಟ್‌ನಲ್ಲಿ ಫೈಟ್ ಮಾಡಬಹುದಿತ್ತು. ನನ್ ಮೇಲೆ ಕಪ್ಪು ಚುಕ್ಕೆ ಇಲ್ಲ ಅಂತೀರಿ. ಈಗ ಸಿದ್ದರಾಮಯ್ಯ ಕಪ್ಪು ಬಟ್ಟೆನೇ ಹಾಕಿಕೊಂಡಿದ್ದಾರೆ. ಬೈ ಎಲೆಕ್ಷನ್ ಆದ ಮೇಲೆ ಸಿಎಂ ರಾಜೀನಾಮೆ ನೀಡಿ ಹೋಗಬೇಕಾಗುತ್ತದೆ ಎಂದರು.