ಕನ್ನಡಪ್ರಭ ವಾರ್ತೆ ಪಾಂಡವಪುರತಾಲೂಕಿನ ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಭಾರೀ ದನಗಳ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ರಾತ್ರಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಮ್ಮ ಎತ್ತುಗಳ ಜತೆ ಮೆರವಣಿಗೆ ನಡೆಸಿದರು.
ಜಾತ್ರೆಯಲ್ಲಿ 6 ಲಕ್ಷದ ಹೋರಿ, 3.50 ಲಕ್ಷ ಹಾಗೂ 3 ಲಕ್ಷದ ಎರಡು ಜೋತೆಗೆ ಎತ್ತುಗಳನ್ನು ಕಟ್ಟಿರುವ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಪತ್ನಿ ನಾಗಮ್ಮ, ಮೊಮ್ಮಗ ಹಾಗೂ ಅಣ್ಣನ ಪುತ್ರ ಡೇರಿ ಅಧ್ಯಕ್ಷ ಸಿ.ಶಿವಕುಮಾರ್ ಜೊತೆ ಎತ್ತುಗಳನ್ನು ಹಿಡಿದುಕೊಂಡು ಜಾತ್ರಾ ಆವರಣದಲ್ಲಿ ಮೆರವಣಿಗೆ ನಡೆಸಿದರು.ನಾಲ್ಕು ಹಲ್ಲು 6.50 ಲಕ್ಷ ರು., ಆರು ಹಲ್ಲಿನ ಹಳ್ಳಿಕಾರ್ ತಳಿಯ ಜೋಡಿ ಎತ್ತು 3.50 ಲಕ್ಷ ರು., ಮಗಧೀರ ಹೋರಿ 3 ಲಕ್ಷ ರು. ಬೆಲೆ ಬಾಳು ತಮ್ಮ ಎತ್ತುಗಳನ್ನು ಮೆರವಣಿಗೆ ನಡೆಸಿ ಬಳಿಕ ಜಾತ್ರಾ ಮೈದಾನದಲ್ಲಿ ಪ್ರದರ್ಶನಕ್ಕಾಗಿ ಕಟ್ಟಿದರು.
ಜಾತ್ರೆಗೆ ಮರು ಜೀವ ನೀಡಿದ ಸಿಎಸ್ಪಿ:ಸಿ.ಎಸ್.ಪುಟ್ಟರಾಜು ಅವರು 2006ರಲ್ಲಿ ಶಾಸಕರಾಗಿದ್ದ ವೇಳೆ ಸ್ಥಗಿತಗೊಂಡಿದ್ದ ಬೇಬಿಬೆಟ್ಟದ ಭಾರೀ ದನಗಳ ಜಾತ್ರೆಯನ್ನು ಆರಂಭಿಸುವ ಮೂಲಕ ಜಾತ್ರೆಗೆ ಮರು ಜೀವನ ನೀಡಿದರು. ಜತೆಗೆ ಜಾತ್ರೆಯಲ್ಲಿ ಸರಳ ವಿವಾಹ ಮಹೋತ್ಸವಕ್ಕೂ ಕಾರಣರಾದರು.
ಮೊದಲ ಬಾರಿಗೆ ನಡೆದ ಸರಳ ವಿವಾಹ ಮಹೋತ್ಸವದಲ್ಲಿ 150ಕ್ಕೂ ಅಧಿಕ ಜೋಡಿಗಳ ಸರಳ ವಿವಾಹದೊಂದಿಗೆ ತಮ್ಮ ಮಗಳನ್ನು ಸಹ ಸರಳ ವಿವಾಹ ನಡೆಸಿ ಸರಳತೆ ಮೆರೆದಿದ್ದರು.ಜತೆಗೆ 2008-2013 ಹಾಗೂ 2018 ರಿಂದ 2023ರ ಕಾಲಾವಧಿಯಲ್ಲಿ ಬೇಬಿಬೆಟ್ಟದಲ್ಲಿ ಭಾರೀ ದನಗಳ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಣೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದರು. ಇದೀಗ ಪ್ರಭುದ್ದ ರಾಜಕಾರಣಿಯಾಗಿರುವ ಸಿ.ಎಸ್.ಪುಟ್ಟರಾಜು ಅವರು ತಾವೇ ಸ್ವತಃ ಹಳ್ಳಿಕಾರ್ ತಳಿ ಜೋಡಿ ಎತ್ತುಗಳು, ಹೋರಿಗಳನ್ನು ಸಾಕುವ ಮೂಲಕ ಬೇಬಿಬೆಟ್ಟದ ಜಾತ್ರೆಯಲ್ಲಿ ಪ್ರದರ್ಶನಕ್ಕಿಡುವ ಮೂಲಕ ರೈತರಿಗೆ ಮಾದರಿಯಾಗಿದ್ದಾರೆ.ಅಯೋಧ್ಯೆಯಲ್ಲಿ ಬಾಲರಾಮನ ದರ್ಶನ ಪಡೆದ ಸಿಎಸ್ಪಿ ದಂಪತಿ
ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಜೆಡಿಎಸ್-ಬಿಜೆಪಿ ಮೈತ್ರಿ ಆಕಾಂಕ್ಷಿತ ಅಭ್ಯರ್ಥಿಯಾಗಿ ಸಿ.ಎಸ್. ಪುಟ್ಟರಾಜು ಆಯ್ಕೆ ಖಚಿತವಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮರ್ಯಾದೆ ಪುರುಷ ಅಯೋಧ್ಯೆ ಶ್ರೀರಾಮನ ದರ್ಶನ ಪಡೆದು ಆ ಮೂಲಕ ಚುನಾವಣಾ ಪ್ರಚಾರಕ್ಕೆ ಸಿದ್ಧತೆ ನಡೆಸಿಕೊಂಡಿದ್ದಾರೆ.ಮಂಡ್ಯ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಾಕಷ್ಟು ತಿಕ್ಕಾಟಗಳು ನಡೆಯುತ್ತಿರುವ ನಡುವೆ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೆಸರು ಅಂತಿಮವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.