ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಮಾಜಿ ಸಚಿವ ಕೆ.ಸಿ. ನಾರಾಯಣಗೌಡರ ಜೊತೆಗೆ ಗುರುತಿಸಿಕೊಂಡಿದ್ದ ಜಿಪಂ ಮಾಜಿ ಉಪಾಧ್ಯಕ್ಷ ಶೀಳನೆರೆ ಅಂಬರೀಶ್ ನೇತೃತ್ವದಲ್ಲಿ ಹಲವು ಮುಖಂಡರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗುತ್ತಿದ್ದಾರೆ.ತಾಲೂಕಿನ ಬಣ್ಣೆನಹಳ್ಳಿಯಲ್ಲಿ ಬಿಜೆಪಿ ಮುಖಂಡ ಶ್ರೀನಿವಾಸ್ ಅವರ ತೋಟದಲ್ಲಿ ಸಭೆ ನಡೆಸಿದ ಮಾಜಿ ಸ್ಪೀಕರ್ ಕೃಷ್ಣ ಅಭಿಮಾನಿಗಳು, ಮಾಜಿ ಸಚಿವ ನಾರಾಯಣಗೌಡ ಅವರ ನಡೆ ಹಾಗೂ ಬಿಜೆಪಿ ಜೆಡಿಎಸ್ ಅಪವಿತ್ರ ಮೈತ್ರಿ ವಿರೋಧಿಸಿ ಕಾಂಗ್ರೆಸ್ ಬೆಂಬಲಿಸುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು.
ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಮೈತ್ರಿ ಧರ್ಮ ಪಾಲಿಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೆ ಕೆ.ಸಿ.ನಾರಾಯಣಗೌಡ ಬೆಂಬಲಿಗರ ಪಡೆಯ ದಿ.ಕೆ.ಆರ್.ಪೇಟೆ ಕೃಷ್ಣ ಬೆಂಬಲಿಗರು ಸಭೆ ನಡೆಸಿದರು.ಈ ವೇಳೆ ಮಾತನಾಡಿದ ಶೀಳನೆರೆ ಅಂಬರೀಷ್ , ನಾನು ಜೆಡಿಎಸ್ ವಿರೋಧಿಸಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ರಾಜಕೀಯ ಮಾಡಿದವನು. ನಾನು ಕಾಂಗ್ರೆಸ್ ಸೇರುವ ಮೂಲಕ ಜೆಡಿಎಸ್ ಬಿಜೆಪಿ ಅಪವಿತ್ರ ಮೈತ್ರಿ ವಿರುದ್ಧ ಹೋರಾಡುವ ಚಿಂತನೆಯಲ್ಲಿದ್ದೇನೆ ಎಂದರು.
ಜೆಡಿಎಸ್ ತ್ಯಜಿಸಿ ಬಿಜೆಪಿ ಸೇರಿದ ಕೆ.ಸಿ.ನಾರಾಯಣಗೌಡ ಇದೀಗ ಮೈತ್ರಿ ಧರ್ಮದ ಹೆಸರಿನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸಲು ನಿರ್ಧರಿಸಿರುವುದು ನಮಗೆ ನೋವು ತಂದಿದೆ. ಕೆಸಿಎನ್ ಗೆ ಕ್ಷೇತ್ರದಲ್ಲಿ ರಾಜಕೀಯ ಶಕ್ತಿ ತುಂಬಿದ್ದವರು ಮಾಜಿ ಸ್ಪೀಕರ್ ಕೃಷ್ಣ ಬೆಂಬಲಿಗರು. ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿಸುವ ತಮ್ಮ ನಿರ್ಧಾರವನ್ನು ಮರು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.ಈಗಾಗಲೇ ತಾಲೂಕಿನಲ್ಲಿ ಮಾಜಿ ಸ್ಪೀಕರ್ ಕೃಷ್ಣ ಅಭಿಮಾನಿಗಳು, ಮುಖಂಡರು ಮತ್ತು ಬೆಂಬಲಿಗರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಮುಂದೆ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರುರನ್ನು ಬೆಂಬಲಿಸುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು. ಇದೇ ವೇಳೆ ಸಭೆಯಲ್ಲಿ ಬಹುತೇಕ ಕೃಷ್ಣ ಅಭಿಮಾನಿಗಳು ಕಾಂಗ್ರೆಸ್ ಪರ ಒಲವು ವ್ಯಕ್ತಪಡಿಸಿದರು.
ಈ ವೇಳೆ ಮುಖಂಡರಾದ ಗೂಡೆಹೊಸಳ್ಳಿ ಜವರಾಯಿಗೌಡ, ಐಚನಹಳ್ಳಿ ಶಿವಣ್ಣ, ಶೀಳನೆರೆ ಗ್ರಾಪಂ ಅಧ್ಯಕ್ಷ ಯುವರಾಜ್, ಪುರಸಭೆ ಸದಸ್ಯರಾದ ಶುಭಾ ಗಿರೀಶ್, ಶೋಭಾ ದಿನೇಶ್, ಮಾಜಿ ಶಾಸಕ ಎಂ. ಪುಟ್ಟಸ್ವಾಮಿ ಗೌಡರ ಪುತ್ರ ಪ್ರವೀಣ್, ಎಪಿಎಂಸಿ ಮಾಜಿ ಅಧ್ಯಕ್ಷ ಸೋಮಶೇಖರ್, ಪರಮೇಶ್‌ಗೌಡ, ಪಿ.ಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಾಮೇಗೌಡ ಸೇರಿದಂತೆ ಹಲವು ಮುಖಂಡರುಗಳು ಭಾಗವಹಿಸಿದ್ದರು.