ಮಾಜಿ ಸಚಿವ ನಾಗೇಂದ್ರ ಮನೆಗೆ ಇಡಿ ದಾಳಿ

KannadaprabhaNewsNetwork |  
Published : Jul 11, 2024, 01:32 AM ISTUpdated : Jul 11, 2024, 06:41 AM IST
ಮಾಜಿ ಸಚಿವ ನಾಗೇಂದ್ರ ಮನೆ | Kannada Prabha

ಸಾರಾಂಶ

ಜಾರಿ ನಿರ್ದೇಶನಾಲಯದ ಎಂಟು ಅಧಿಕಾರಿಗಳ ತಂಡ ಬೆಳ್ಳಂಬೆಳಿಗ್ಗೆ ದಾಳಿಗಿಳಿದು ಸುಮಾರು 13 ತಾಸುಗಳ ಕಾಲ ಪರಿಶೀಲನೆ ನಡೆಸಿದರು.

ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ನೆಹರು ಕಾಲನಿಯಲ್ಲಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರ ನಿವಾಸಕ್ಕೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದರು.

ಜಾರಿ ನಿರ್ದೇಶನಾಲಯದ ಎಂಟು ಅಧಿಕಾರಿಗಳ ತಂಡ ಬೆಳ್ಳಂಬೆಳಿಗ್ಗೆ ದಾಳಿಗಿಳಿದು ಸುಮಾರು 13 ತಾಸುಗಳ ಕಾಲ ಪರಿಶೀಲನೆ ನಡೆಸಿದರು. ದಾಳಿ ವೇಳೆ ನಾಗೇಂದ್ರ ಮನೆಯಲ್ಲಿ ಇರಲಿಲ್ಲ. ‌ನಾಗೇಂದ್ರ ಮನೆಯ ಕಚೇರಿ ಸಿಬ್ಬಂದಿ ಹಾಗೂ ಆಪ್ತರನ್ನು ವಿಚಾರಣೆಗೆ ಒಳಪಡಿಸಿ‌ ಮಾಹಿತಿ ಸಂಗ್ರಹಿಸಿದರು.

ಮಂಗಳವಾರ ರಾತ್ರಿಯೇ ಬಳ್ಳಾರಿಗೆ ಬಂದಿಳಿದಿದ್ದ ಇಡಿ ಅಧಿಕಾರಿಗಳು ಹಾಗೂ ಸಿಬ್ಬಂದಿ, ನಾಗೇಂದ್ರ ‌ಆಪ್ತರ ಮಾಹಿತಿಯನ್ನು ಕಲೆ ಹಾಕಿದ್ದರು.

ಮಧ್ಯಾಹ್ನದ ವೇಳೆಗೆ ಆಪ್ತರನ್ನು ಶಾಸಕರ ಗೃಹ ಕಚೇರಿಗೆ ಕರೆ ತಂದು ವಿಚಾರಣೆ ನಡೆಸಿದರು. ನಾಗೇಂದ್ರ ಅವರ ಮನೆಯಲ್ಲಿದ್ದ ದಾಖಲೆಗಳನ್ನು ಪರಿಶೀಲಿಸಿದರು.

ಮಾಜಿ ಸಚಿವ ನಾಗೇಂದ್ರ ಮನೆ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು, ಅವರ ಸರ್ಕಾರಿ ಆಪ್ತ ಸಹಾಯಕ ಚೇತನ್‌ ಎಂಬವರನ್ನು ಸಂಪರ್ಕಿಸಿ ಗೃಹ ಕಚೇರಿಗೆ ಕರೆ ತಂದರು. ಬಳಿಕ ಆಪ್ತ ಸಹಾಯಕನ ಮೂಲಕ ಕೆಲ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದ್ದು, ಹಲವರ ಸಹಿ ಇರುವ ದಾಖಲೆ ಪತ್ರಗಳು ಎನ್ನಲಾಗುತ್ತಿದೆ. ಬಳಿಕ, ಮಾಜಿ ಸಚಿವರ ಮಾದ್ಯಮ ಸಲಹೆಗಾರರನ್ನು ಅವರ ನಿವಾಸದಿಂದ ಕರೆತಂದು ವಿಚಾರಣೆ ನಡೆಸಿ ಮಾಹಿತಿ ಪಡೆದರು.

ಶಾಸಕ ನಾಗೇಂದ್ರ ಅವರ ಗೃಹ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಮಾಹಿತಿ ಕಲೆ ಹಾಕುತ್ತಿದ್ದಂತೆ ಮಾಜಿ ಸಚಿವರ ಆಪ್ತ ವಲಯದ ಕೆಲವರಲ್ಲಿ ಆತಂಕ ಸೃಷ್ಟಿಗೆ ಕಾರಣವಾಗಿತ್ತು. ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಮಾಜಿ ಸಚಿವರ ಆಪ್ತರ ಮಾಹಿತಿ ಸಂಗ್ರಹಿಸಿ ಒಬ್ಬೊಬ್ಬರಿಗೆ ಕರೆ ಮಾಡಿದ ಪ್ರಸಂಗ ಸಹ ನಡೆಯಿತು.

ಈ ವೇಳೆ ಕೆಲ ಆಪ್ತರು ಬೆಂಗಳೂರಿಗೆ ತೆರಳಿರುವ ಬಗ್ಗೆ, ಇನ್ನು ಕೆಲವರು ಊರಲ್ಲಿ ಇರದ ಬಗ್ಗೆ ಉತ್ತರ ನೀಡಿದ್ದಾರೆ ಎನ್ನಲಾಗಿದೆ. ವಿಚಾರಣೆಗೆ ಹಾಜರಾಗದಿದ್ದಲ್ಲಿ ನೋಟಿಸ್‌ ಕೊಟ್ಟು ಬೆಂಗಳೂರಿಗೆ ಕರೆಸುವ ಎಚ್ಚರಿಕೆಯನ್ನು ಕೆಲ ಆಪ್ತರಿಗೆ ಇಡಿ ಅಧಿಕಾರಿಗಳು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ದಾಳಿ ವೇಳೆ ಮಾಜಿ ಸಚಿವರು ಇರದ ಕಾರಣ ಆಪ್ತರ ಮಾಹಿತಿ ಪಡೆದ ಅಧಿಕಾರಿಗಳು ಎರಡು ತಂಡಗಳಾಗಿ ವಿಂಗಡಣೆಗೊಂಡು ಒಂದು ತಂಡ ಮಾಜಿ ಸಚಿವರ ನಿವಾಸದಲ್ಲಿ ಶೋಧ ಮುಂದುವರಿಸಿದರು. ಇನ್ನೊಂದು ತಂಡ ನಗರದಲ್ಲಿರುವ ಮಾಜಿ ಸಚಿವರ ಆಪ್ತರನ್ನು ಕರೆತಂದು ವಿಚಾರಣೆ ನಡೆಸಿತು.

ಸಿಆರ್ ಪಿಎಫ್ ಯೋಧರ ಭದ್ರತೆಯಲ್ಲಿ ಆಗಮಿಸಿದ್ದ ಇಡಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಜೆ ಏಳುಗಂಟೆ ವೇಳೆಗೆ ವಿಚಾರಣೆ ‌ಪೂರ್ಣಗೊಳಿಸಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ