ಕನ್ನಡಪ್ರಭ ವಾರ್ತೆ ಕಲಬುರಗಿ
ಸಂಸದ ಉಮೇಶ ಜಾಧವ್‌ರನ್ನು ಬಿಜೆಪಿಗೆ ತರಲು ಪ್ರಮುಖ ಪಾತ್ರ ವಹಿಸಿದ್ದೆ. ಆದರೆ, ಅವರು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯ ವ್ಯಕ್ತಿ ಅಲ್ಲ. ಅವರ ಬಗ್ಗೆ ಜಾಸ್ತಿ ಹೇಳಿದರೆ ನನ್ನ ಗೌರವ ಕಡಿಮೆಯಾಗುತ್ತದೆ. ಬಿಜೆಪಿಯಂತ ಭ್ರಷ್ಟ ಪಕ್ಷ ಮತ್ತೊಂದಿಲ್ಲ. ಹಾಗಾಗಿ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದೆ. ಪ್ರಜಾಪ್ರಭುತ್ವ ಬೇಕಿದ್ದರೆ ನೀವೆಲ್ಲ ಕಾಂಗ್ರೆಸ್‌ಗೆ ಮತ ನೀಡಿ, ಇಲ್ಲದಿದ್ದರೆ ಸರ್ವಾಧಿಕಾರದ ಸರ್ಕಾರ ಬರುತ್ತದೆ ಎಂದು ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಎಚ್ಚರಿಸಿದರು.ಹೆಬ್ಬಾಳ ಗ್ರಾಮದಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಯಲ್ಲಿ ರಾಧಾಕೃಷ್ಣ ದೊಡ್ಡಮನಿ ಪರ ಮತಯಾಚಿಸಿ ಅವರು ಮಾತನಾಡುತ್ತಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರ್ಹ ವ್ಯಕ್ತಿಗೆ ಟಿಕೆಟ್ ನೀಡಿ ಎಂದು ಬಿಜೆಪಿಯವರಿಗೆ ಹೇಳಿದ್ದೆ. ಆದರೆ ಮಣಿಕಂಠ ರಾಠೋಡನಿಗೆ ಟಿಕೆಟ್ ಕೊಟ್ಟರು. ಅವರು ಆಶೀರ್ವಾದ ಬೇಡಲು ನನ್ನ ಮನೆಗೆ ಬಂದಿದ್ದರು. ನಿನ್ನಂತ ಕ್ರಿಮಿನಲ್‌ಗಳು ನನ್ನ ಮನೆಗೆ ಬರಬಾರದು ಎಂದು ಹೇಳಿ ಹೊರಗೆ ಕಳಿಸಿದ್ದೆ ಎಂದು ಪಾಟೀಲ್ ಹೇಳಿದರು.ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಜೂಜು, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ಆರೋಪಿಯಾಗಿದ್ದ ಕ್ರಿಮಿನಲ್‌ಗಳಿಗೆ ಕೂಡಾ ಮತ ಚಲಾವಣೆಯಾಗಿವೆ ಎಂದರೆ ಅಚ್ಚರಿಯಾಗುತ್ತದೆ ಎಂದರು.
ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ. ಅದಕ್ಕೆ ಈಗ ಮತ್ತೆ ಮತ ಕೇಳಲು ಬಂದಿದ್ದೇವೆ. ನಾವು ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಮನವಿ ಮಾಡುತ್ತಿದ್ದೇವೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣಗೆ ಮತ ಹಾಕಿ ಎಂದು ಮನವಿ ಮಾಡಿದರು.ಮಾಜಿ ಜಿಪಂ ಸದಸ್ಯ ರಮೇಶ್ ಮರಗೋಳ ಮಾತನಾಡಿ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಕಳೆದ ಚುನಾವಣೆಯಲ್ಲಿ ಸೋಲಾಯಿತು. ಹಿರಿಯ ಜೀವ ಬಹಳ ನೊಂದಿದ್ದಾರೆ. ಈ ಬಾರಿ ಅವರ ಕೈ ಬಲಪಡಿಸೋಣ ಎಂದರು.ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರು ಮಾತನಾಡಿದರು. ವೇದಿಕೆಯ ಮೇಲೆ ಭೀಮಣ್ಣ ಸಾಲಿ, ರಮೇಶ್ ಮರಗೋಳ, ರಾಜೇಶ್ ಗುತ್ತೇದಾರ, ಸುನೀಲ್ ದೊಡ್ಡಮನಿ, ಡಾ ಕಾಂತಾ , ಶಂಭುಲಿಂಗ ಗುಂಡಗುರ್ತಿ, ಜಯಪ್ರಕಾಶ ಕಮಕನೂರು, ನಬೀ ಸಾಬ್ ಕೋಡ್ಲಿ, ಪವನ್ ಪಾಟೀಲ್ ಇದ್ದರು.ಚಿತ್ತಾಪುರದ ಅಪರಂಜಿ ಮಣಿಕಂಠಗೆ ಕಿಚಾಯಿಸಿದ ಖರ್ಗೆ
ತಮ್ಮವಿರುದ್ಧ ಅಸೆಂಬ್ಲಿಯಲ್ಲಿ ಸ್ಪರ್ಧಿಸಿದ್ದ ಬಿಜೆಪಿಯ ಮಣಿಕಂಠ ರಾಠಡರನ್ನು ಅಪರಂಜಿ ಎಂದು ಹೇಳುತ್ತ ಅವರೆಲ್ಲಿ? ಚಿತ್ತಾಪುರದ "ಅಪರಂಜಿ " ಈಗ ನಾಪತ್ತೆಯಾಗಿ ವಿದೇಶದಲ್ಲಿ ನೆಲೆಸಿದ್ದಾನೆ. ದುಡ್ಡಿಗಾಗಿ ಅವನನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರಕ್ಕೆ ಅಭ್ಯರ್ಥಿಯನ್ನಾಗಿ ಮಾಡಿರುವುದಕ್ಕೆ ಬಿಜೆಪಿಯವರು ಕ್ಷಮೆ ಕೇಳಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಕೋರವಾರದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಸಂಸದ ಉಮೇಶ್ ಜಾಧವ ಜಿಲ್ಲೆಗೆ, ಚಿತ್ತಾಪುರಕ್ಕೆ ಹಾಗೂ ನಿಮ್ಮ ಗ್ರಾಮಕ್ಕೆ ಏನು ಮಾಡಿದ್ದಾರೆ? ವಂದೆ ಭಾರತ್ ರೈಲು ಬಿಟ್ಟಿದ್ದನ್ನೇ ದೊಡ್ಡದಾಗಿ ಬಿಂಬಿಸುವ ಅವರು, ಶ್ರೀಮಂತರೇ ಹೆಚ್ಚಾಗಿ ಓಡಾಡುವ ರೈಲು ಪ್ರಾರಂಭಿಸಿದ್ದಾರೆಂದರು.