ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಗೆ 79 ದಿನಗಳು ಬಾಕಿ ಇವೆ. ಪ್ರತಿದಿನವೂ ಅತೀ ಅಮೂಲ್ಯವಾಗಿದೆ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳ ಗಳಿಕೆಗೆ ಅಧ್ಯಯನದ ವೈಯಕ್ತಿಕ ವೇಳಾಪತ್ರಿಕೆ ಹಾಗೂ ಸಮಯಪಾಲನೆ ಪ್ರತಿ ವಿದ್ಯಾರ್ಥಿಗೆ ಅಗತ್ಯವಾಗಿದೆ ಎಂದು ಬಾಗಲಕೋಟೆಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಬಿ.ಕೆ.ನಂದನೂರ ಹೇಳಿದರು.ಅವರು ಶುಕ್ರವಾರ ಪಟ್ಟಣದ ಬಾಲಕರ ಸರಕಾರಿ ಪ್ರೌಢ ಶಾಲೆಗೆ ಅನಿರೀಕ್ಷಿತ ಭೇಟಿ ಮುಖ್ಯೋಪಾಧ್ಯಾಯರ ಹಾಗೂ ಶಿಕ್ಷಕರ ಸಮ್ಮುಖದಲ್ಲಿ ವಿಷಯವಾರು ಮಕ್ಕಳ ಕಲಿಕಾ ಗುಣಮಟ್ಟ ಹೆಚ್ಚಿಸಲು ಪೂರಕವಾದ ಮಾರ್ಗದರ್ಶನ ನೀಡಿ, ಮಕ್ಕಳ ಶೈಕ್ಷಣಿಕ ಪ್ರಗತಿ ಮತ್ತು ಶಾಲೆಯ ಕುಂದುಕೊರತೆಗಳ ಬಗ್ಗೆ ಪರಿಶೀಲಿಸಿ ಮಾತನಾಡಿ, 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಿಗೆ ಕಠಿಣ ಶ್ರಮ, ದೃಢ ಸಂಕಲ್ಪ ಮತ್ತು ನಿರಂತರ ಅಭ್ಯಾಸ ಈ ಮೂರು ಸೂತ್ರಗಳು ಪ್ರತಿ ವಿದ್ಯಾರ್ಥಿಯ ಯಶಸ್ಸಿನ ಸೂತ್ರಗಳು. ವಾರ್ಷಿಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಿ. ಸಮಯಕ್ಕೆ ಮಹತ್ವ ನೀಡಿ, ಅಭ್ಯಾಸಕ್ಕೆ ವೇಳಾಪತ್ರಿಕೆ ಮಾಡಿಕೊಳ್ಳುವುದು ಅಗತ್ಯ. ಪರೀಕ್ಷಾ ಭಯ ಹೋಗಲು ಸಿದ್ಧತೆ, ದೃಢತೆ ಇವುಗಳನ್ನು ಮೈಗೂಡಿಸಿಕೊಳ್ಳಬೇಕು. ನಿಯಮಿತ ಆಹಾರ ಸೇವಿಸುವುದು ಮತ್ತು ನಿಯನಿತ ನಿದ್ದೆಗೂ ಅಷ್ಟೇ ಮಹತ್ವ ನೀಡಬೇಕು. ಪ್ರತಿ ವಿದ್ಯಾರ್ಥಿಯ ಪರೀಕ್ಷಾ ಯಶಸ್ಸಿನ ಹಿಂದಿರುವ ಅಭ್ಯಾಸ ಕ್ರಮದ ಗುಟ್ಟನ್ನು ಹೇಳಿಕೊಟ್ಟು, ವಿದ್ಯಾರ್ಥಿಗೆ ಪರೀಕ್ಷಾ ತೊಂದರೆಗಳಿಗೆ ಸಂಬಂಧಿಸಿದ ಪರಿಹಾರವನ್ನು ಚರ್ಚೆಯ ಮೂಲಕ ತಿಳಿಸಿ, ಸಮಯ ಪಾಲನೆ ವಿದ್ಯಾರ್ಥಿ ಬದುಕಿನಲ್ಲಿ ಅತೀ ಮಹತ್ವದ್ದಾಗಿದೆ. ಪರೀಕ್ಷೆ ಸಮೀಪಸಿದಂತೆ ಹೆಚ್ಚಿನ ಸಮಯವನ್ನು ಪಠ್ಯಕ್ರಮದ ಬಗ್ಗೆ ಕಾಳಜಿವಹಿಸಬೇಕು. ನಿರಂತರ ಅಧ್ಯಯನ, ಚರ್ಚೆ ಇವು ವಿದ್ಯಾರ್ಥಿಗಳಲ್ಲಿ ದೃಢತೆಯನ್ನು ಹೆಚ್ಚಿಸುತ್ತವೆ ಎಂದರು.
ಶಿಕ್ಷಕರ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. ನಂತರ ಶಾಲೆಯ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಮಾಗಿ ಡಿಡಿಪಿಐ ಅವರ ಭೇಟಿಗೆ ಅಭಿನಂದನೆ ಸಲ್ಲಿಸಿ, ಉನ್ನತ ಅಧಿಕಾರಿಗಳ ಭೇಟಿ ಶಿಕ್ಷಕರಲ್ಲಿ ಕಾರ್ಯದಕ್ಷತೆ ಹೆಚ್ಚಿಸುತ್ತದೆ ಮತ್ತು ವಿದ್ಯಾರ್ಥಿಗಳಲ್ಲಿ ಅಧ್ಯಯನಕ್ಕೆ ಪೂರಕವಾಗಿ ಸ್ಪೂರ್ತಿ ನೀಡುತ್ತದೆ ಎಂದರು. ಶಾಲೆಯ ಎಲ್ಲ ಶಿಕ್ಷಕರು ಸಭೆಯಲ್ಲಿ ಉಪಸ್ಥಿತರಿದ್ದರು.