ಹಾನಗಲ್ಲ: ಪರೀಕ್ಷೆ ಎದುರಿಸುವುದೆಂದರೆ ಯುದ್ಧಕಾಲದಲ್ಲಿ ಸಮರಾಭ್ಯಾಸ ಎಂಬಂತಾಗಬಾರದು. ಶಾಲಾರಂಭದಿಂದಲೇ ಪರೀಕ್ಷೆಗಾಗಿ ಕಾಳಜಿಯಿಂದ ಸಿದ್ಧತೆ ನಡೆಸಿದರೆ ಪರೀಕ್ಷೆಯನ್ನು ಒಂದು ಹಬ್ಬವಾಗಿ ಸ್ವೀಕರಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಚಿನ್ನೀಕಟ್ಟಿ ಹೇಳಿದರು.
ತರಬೇತುದಾರ, ಶಿಕ್ಷಕ ಸಿ. ಪ್ರದೀಪಕುಮಾರ ಮಾತನಾಡಿ, ಇದು ಮಕ್ಕಳ ಮನಸ್ಸನ್ನು ಅರಳಿಸಿ ಅಧ್ಯಯನಶೀಲತೆಯನ್ನು ಜಾಗ್ರತ ಮಾಡುವ ಕಾರ್ಯವಾಗಿದೆ. ಗಣಿತ ಕಬ್ಬಿಣದ ಕಡಲೆ ಎಂದು ವಿಷಯವನ್ನು ದೂರಿಟ್ಟರೆ ಆಗದು. ಸರಿಯಾದ ತಿಳಿವಳಿಕೆಗೆ ಮುಂದಾಗಬೇಕು. ಕಲಿಕೆ ಯಾಂತ್ರಿಕವಾಗಬಾರದು. ಇತ್ತೀಚಿನ ದಿನಗಳಲ್ಲಿ ಶಿಕ್ಷಣ ವ್ಯವಹಾರವಾಗಿ ಪರಿವರ್ತನೆಯಾಗುತ್ತಿರುವುದು ವಿಷಾದದ ಸಂಗತಿ. ಗ್ರಾಮೀಣ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿದಲ್ಲಿ ರಾಜ್ಯಕ್ಕೆ ಉನ್ನತ ಸ್ಥಾನ ತಂದುಕೊಡುವ ಶಕ್ತಿ ಅವರಲ್ಲಿದೆ. ವಿದ್ಯಾರ್ಥಿಗಳಲ್ಲಿ ಇಚ್ಛಾಶಕ್ತಿ ಇದ್ದರೆ ಸಾಧಕರಾಗಿ ಹೊರಹೊಮ್ಮಲು ಸಾಧ್ಯ ಎಂದರು.
ಶಿಕ್ಷಕರಾದ ಶಂಭುಲಿಂಗ ನೀಲಗುಂದ, ಸಂತೋಷ ಬೆಳವತ್ತಿ ಮಾತನಾಡಿ, ಗುರು ಶಿಷ್ಯರಲ್ಲಿ ಶೈಕ್ಷಣಿಕ ಸಾಮರಸ್ಯ ಬೇಕು. ಮನಃಶುದ್ಧಿಯಿಂದ ಸಕಾರಾತ್ಮಕ ಚಿಂತನೆ ವಿದ್ಯಾರ್ಥಿಗಳಲ್ಲಿರುಬೇಕು. ಒಳ್ಳೆಯದನ್ನು ಅನುಸರಿಸೋಣ. ನಾಳೆಗಾಗಿ ಇಂದೇ ಸಿದ್ಧರಾಗೋಣ. ನಮ್ಮ ಹವ್ಯಾಸ, ಆಸಕ್ತಿಗಳು ನಮ್ಮ ಒಳಿತಿಗಾಗಿಯೇ ಇರಲಿ. ಇದು ಸ್ಪರ್ಧಾತ್ಮಕ ಯುಗ ಎಂಬ ಎಚ್ಚರಿಕೆಯೂ ಬೇಕು ಎಂದರು.ಪರಿವರ್ತನ ಕಲಿಕಾ ಕೇಂದ್ರದ ಆಡಳಿತಾಧಿಕಾರಿ ಪ್ರೊ. ಮಾರುತಿ ಶಿಡ್ಲಾಪೂರ ಅಧ್ಯಕ್ಷತೆವಹಿಸಿದ್ದರು. ಶಿಕ್ಷಣಾರ್ಥಿಗಳಾದ ಎಂ.ವಿ. ಪೂಜಾ, ಚೈತ್ರಾ ವಡ್ಡರ, ದೀಪಾ ವೀರಾಪುರ, ತನುಜಾಕ್ಷಿ ನೆಗಳೂರ, ಕೋಮಲಾ ಲಮಾಣಿ, ಯುವರಾಜ ತಳವಾರ, ಅಕ್ಷಯ ಭಜಂತ್ರಿ ಮಾತನಾಡಿದರು. ಗಿರೀಶ ಅಂಬಿಗೇರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.