ಪ್ರಾಮಾಣಿಕ ರೀತಿಯಲ್ಲಿ ತಮ್ಮ ಶ್ರೀಮಂತ ಮತ್ತು ವಿಶಿಷ್ಟವಾದ ಮೂಲ ಸಂಸ್ಕೃತಿ ಸಂರಕ್ಷಿಸಿಕೊಂಡು ಹೋಗುವ ಮೂಲಕ ಕೊಡವ ಸಮುದಾಯವರು ಮಾದರಿಯಾಗಿದ್ದಾರೆ. ಈ ಮೂಲಕ ಪ್ರಪಂಚದಲ್ಲಿಯೇ ಕೊಡವರು ತನ್ನತನವನ್ನು ಮೆರೆಯುತ್ತಿದ್ದಾರೆ ಎಂದು ಹಾವೇರಿ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ ಪ್ರಾಮಾಣಿಕ ರೀತಿಯಲ್ಲಿ ತಮ್ಮ ಶ್ರೀಮಂತ ಮತ್ತು ವಿಶಿಷ್ಟವಾದ ಮೂಲ ಸಂಸ್ಕೃತಿ ಸಂರಕ್ಷಿಸಿಕೊಂಡು ಹೋಗುವ ಮೂಲಕ ಕೊಡವ ಸಮುದಾಯವರು ಮಾದರಿಯಾಗಿದ್ದಾರೆ. ಈ ಮೂಲಕ ಪ್ರಪಂಚದಲ್ಲಿಯೇ ಕೊಡವರು ತನ್ನತನವನ್ನು ಮೆರೆಯುತ್ತಿದ್ದಾರೆ ಎಂದು ಹಾವೇರಿ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದ್ದಾರೆ. ಮಾದಾಪುರದಲ್ಲಿ ಮಂಗಳವಾರ ಕೊಡವ ಸಮಾಜದ ನೂತನ ಭವನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.ಎಲ್ಲರೂ ಆಧುನಿಕತೆಯತ್ತ ನಾಗಾಲೋಟದಲ್ಲಿ ಸಾಗುತ್ತಿರುವಾಗ ಕೊಡವರು ಮಾತ್ರ ತಮ್ಮ ಹಳೇ ಸಂಸ್ಕೃತಿಯ ಬುನಾದಿಯೊಂದಿಗೆ ಆಧುನೀಕತೆಯನ್ನೂ ಅಳವಡಿಸಿಕೊಂಡು ಪ್ರಬಲ ಮತ್ತು ಶ್ರೀಮಂತ ಸಂಸ್ಕೃತಿ ಹೊಂದಿದ ಜನಾಂಗವಾಗಿದ್ದಾರೆ ಎಂದು ಶ್ಲಾಘಿಸಿದರು.
ತೀವ್ರ ರೀತಿಯಲ್ಲಿ ಬೆಳೆಯುತ್ತಾ ಸಾಗಿರುವ ನಮ್ಮ ನಾಗರಿಕತೆಯಲ್ಲಿ ಯಾವಾಗ ನಾವು ಸಂಸ್ಕೃತಿಯನ್ನೂ ಒಳಗೊಳ್ಳುತ್ತೆವೆಯೋ ಅಂಥ ಸಂದರ್ಭ ನಮ್ಮ ನಾಗರಿಕತೆ ಎಂದಿಗೂ ನಶಿಸಲು ಸಾಧ್ಯವಿಲ್ಲ ಎಂದು ಬೊಮ್ಮಾಯಿ ಹೇಳಿದರು.ಕೊಡಗಿನ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಾಕಷ್ಟು ಅನುದಾನ ನೀಡಿದ್ದನ್ನು ಸ್ಮರಿಸಿಕೊಂಡ ಬಸವರಾಜ ಬೊಮ್ಮಾಯಿ, ಅನುದಾನ ನೀಡಿದ್ದು ಖಂಡಿತಾ ಸಾಧನೆಯಲ್ಲ. ಕೊಡಗಿನ ಜನರು ಸರ್ಕಾರಕ್ಕೆ ನೀಡಿದ್ದ ಆಥಿ೯ಕ ಸಂಪನ್ಮೂಲವನ್ನು ಮತ್ತೆ ಕೊಡಗಿನ ಜನತೆಗೇ ನೀಡುವ ಮೂಲಕ ಪುಣ್ಯ ಸಂಪಾದನೆಯ ಅವಕಾಶ ಮಾತ್ರ ತನ್ನದಾಯಿತು ಎಂದರು.ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕ್ಷೇತ್ರದ ಸಂಸದ ಯದುವೀರ್ ಒಡೆಯರ್, ಮಾದಾಪುರ ಕೊಡವ ಸಮಾಜದ ಭವನಕ್ಕೆ ಸಂಸದರ ಅನುದಾನದಲ್ಲಿ 25 ಲಕ್ಷ ರು. ನೀಡುವುದಾಗಿ ಘೋಷಿಸಿ, ಇದು ಕೊಡವರಿಗೆ ಸಲ್ಲಬೇಕಾದ ಗೌರವದ ಅನುದಾನ ಎಂದರಲ್ಲದೇ, ಕೊಡವ ಸಂಸ್ಕೃತಿ ಸಂರಕ್ಷಣೆಗೆ ಈ ಭವನ ಸೂಕ್ತ ವೇದಿಕೆಯಾಗಲಿ ಎಂದು ಹಾರೈಸಿದರು.ವಿಧಾನಪರಿಷತ್ ಶಾಸಕ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ಕೊಡವರ ಸಂಸ್ಕೃತಿಯ ಹಿರಿಮೆಯ ಸಂರಕ್ಷಣೆಗಾಗಿ ಕೊಡವ ಸಮಾಜಗಳು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಿವೆ ಎಂದರಲ್ಲದೆ, ಮಾದಾಪುರ ಕೊಡವ ಸಮಾಜದ ಕಟ್ಟಡದ ಉಳಿದ ಕಾಮಗಾರಿಗಳಿಗೆ ಶಾಸಕರ ಅನುದಾನದಿಂದ 10 ಲಕ್ಷ ರುಪಾಯಿ ನೀಡುವುದಾಗಿ ಘೋಷಿಸಿದರು.ಮಾಜಿ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್ ಮಾತನಾಡಿ, ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೊಡವರ ಮೇಲಿನ ವಿಶೇಷ ಅಭಿಮಾನದಿಂದ ಬಸವರಾಜ ಬೊಮ್ಮಾಯಿವರು ಮಾದಾಪುರ ಕೊಡವ ಸಮಾಜದ ಭವನ ನಿರ್ಮಾಣಕ್ಕಾಗಿ 1 ಕೋಟಿ ರು. ಅನುದಾನವನ್ನು ಸಮಸ್ಯೆಯಿಲ್ಲದಂತೆ ಬಿಡುಗಡೆ ಮಾಡಿದ್ದರು. ಅಂತೆಯೇ ಕೊಡವ ಸಮುದಾಯದ ಅಭಿವೃದ್ಧಿಗಾಗಿ ಬೊಮ್ಮಾಯಿಯವರು ನೀಡಿದ್ದ 10 ಕೋಟಿ ರು. ಅನುದಾನದಲ್ಲಿ 5 ಕೋಟಿ ರು.ಗಳನ್ನು ಕೊಡವ ಸಮಾಜ ಒಕ್ಕೂಟಕ್ಕೆ ನೀಡಲಾಗಿದ್ದು ಉಳಿದ 6 ಕೋಟಿ ರು. ಅನುದಾನವನ್ನು ಎಲ್ಲಾ ಕೊಡವ ಸಮಾಜಗಳಿಗೆ ತಲಾ 10 ಲಕ್ಷ ರು.ಗಳಂತೆ ನೀಡಲಾಗಿತ್ತು ಎಂದು ಮಾಹಿತಿ ನೀಡಿದರು. ವಿಧಾನಪರಿಷತ್ ಮಾಜಿ ಶಾಸಕಿ ಶಾಂತೆಯಂಡ ವೀಣಾ ಅಚ್ಚಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಎಸ್ ಎಲ್ ಎನ್ ಸಂಸ್ಥೆಯ ಉದ್ಯಮಿ ಸಾತಪ್ಪನ್ ಮಾದಾಪುರ ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಮನುಮೇದಪ್ಪ ಮಾತನಾಡಿದರು.ವಿಧಾನಪರಿಷತ್ ಮಾಜಿ ಶಾಸಕ ಮಂಡೇಪಂಡ ಸುನೀಲ್ ಸುಬ್ರಹ್ಮಣಿ, ಉದ್ಯಮಿಗಳಾದ ವಿಶ್ವನಾಥನ್, ನಾಪಂಡ ಮುತ್ತಪ್ಪ, ತೆರಿಗೆ ಇಲಾಖೆಯ ಆಯುಕ್ತ ಜಯರಾಮ್, ಪದ್ಮಶ್ರೀ ಮಚ್ಚಂಡ ರೋಹನ್ ಬೋಪಣ್ಣ ಅವರ ತಂದೆ ಮಚ್ಚಂಡ ಬೋಪಣ್ಣ, ಸಮಾಜದ ಉಪಾಧ್ಯಕ್ಷ ಪಾಸುರ ಎನ್. ಉತ್ತಪ್ಪ, ಆಡಳಿತ ಮಂಡಳಿಯ ನಿರ್ದೇಶಕರು ಹಾಜರಿದ್ದರು.ಅಜ್ಜಿಕುಟ್ಟೀರ ಗಿರೀಶ್ ಮತ್ತು ಸುನೀತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಮಾದಾಪುರ ಕೊಡವ ಸಮಾಜದ ಕಾರ್ಯದರ್ಶಿ ನಾಗಂಡ ಸಿ. ಕಾಳಪ್ಪ ವಂದಿಸಿದರು. ಕೊಡವ ಸಮಾಜ ಭವನ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳು, ತಾಂತ್ರಿಕ ಸಿಬ್ಬಂದಿಗಳನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ತಂಡಗಳಿಂದ ಕೊಡವ ಸಾಂಪ್ರದಾಯಿಕ ನೖತ್ಯಗಳ ಪ್ರದರ್ಶನವೂ ಕಾರ್ಯಕ್ರಮದ ಆಕರ್ಷಣೆಯಾಗಿತ್ತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.