ಗ್ರಾಮಸ್ಥರಿಗೆ ತೊಂದರೆಯಾಗದಂತೆ ಲಕ್ಕುಂಡಿಯಲ್ಲಿ ಉತ್ಖನನ ನಡೆಯಲಿ: ಸಿ.ಸಿ. ಪಾಟೀಲ್

KannadaprabhaNewsNetwork |  
Published : Jan 27, 2026, 03:30 AM IST
ಗದಗ ತಾಲೂಕಿನ ಲಕ್ಕುಂಡಿಯಲ್ಲಿ ಸೇತುವೆ ಮತ್ತು ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಸಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು. | Kannada Prabha

ಸಾರಾಂಶ

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಕದಾಂಪುರ ರಸ್ತೆ ಮತ್ತು ಚುರ್ಚಿಹಾಳ ರಸ್ತೆಯಲ್ಲಿ ಸೇತುವೆ ಮತ್ತು ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಸಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು.

ಗದಗ: ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಗ್ರಾಮದಲ್ಲಿ ನಡೆಸುತ್ತಿರುವ ಉತ್ಖನನ ಕಾರ್ಯಕ್ಕೆ ಗ್ರಾಮಸ್ಥರ ಸಲಹೆಗಳನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ತಾಲೂಕಿನ ಲಕ್ಕುಂಡಿ ಗ್ರಾಮದ ಕದಾಂಪುರ ರಸ್ತೆ ಮತ್ತು ಚುರ್ಚಿಹಾಳ ರಸ್ತೆಯಲ್ಲಿ ಸೇತುವೆ ಮತ್ತು ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು. ಕದಾಂಪುರ ರಸ್ತೆಯಲ್ಲಿ ಸೇತುವೆ ನಿರ್ಮಾಣಕ್ಕಾಗಿ ಲೋಕೋಪಯೋಗಿ ಇಲಾಖೆಯ ₹1.50 ಕೋಟಿ ಮತ್ತು ಚುರ್ಚಿಹಾಳ ರಸ್ತೆಯಲ್ಲಿ ಸೇತುವೆ ಮತ್ತು ಅಣೆಕಟ್ಟು ನಿರ್ಮಾಣಕ್ಕಾಗಿ ₹2.50 ಕೋಟಿ ವೆಚ್ಚದಲ್ಲಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದರು. ಉತ್ತಮ ಗುಣಮಟ್ಟದ ಕಾಮಗಾರಿಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮಸ್ಥರಿಗೆ ತೊಂದರೆಯಾಗದಂತೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಉತ್ಖನನ ಕಾರ್ಯ ನಡೆಯಬೇಕು. ಈ ದಿಸೆಯಲ್ಲಿ ಗ್ರಾಮಸ್ಥರ ಸಹಕಾರಕ್ಕಾಗಿ ದಿನಾಂಕ ನಿಗದಿ ಮಾಡಿ ಸಚಿವರ, ಸಮ್ಮುಖದಲ್ಲಿ ಗ್ರಾಮಸಭೆಯನ್ನು ಕರೆದು ಲಕ್ಕುಂಡಿಯ ಗತವೈಭವವನ್ನು ಜಗತ್ತಿಗೆ ತೋರಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಎರಡು ವರ್ಷಗಳ ಹಿಂದೆ ನಮ್ಮ ಸರ್ಕಾರ ಲಕ್ಕುಂಡಿ ಉತ್ಸವವನ್ನು ಅದ್ಧೂರಿಯಾಗಿ ನಡೆಸಿತ್ತು. ಈ ವರ್ಷ ಸಹ ಪ್ರಸ್ತಾವನೆ ಕಳುಹಿಸಲಾಗುವುದು. ಲಕ್ಕುಂಡಿ ಅಭಿವೃದ್ಧಿ ಮತ್ತು ಉತ್ಸವ ಕುರಿತು ಸಚಿವ ಎಚ್‌.ಕೆ. ಪಾಟೀಲ್‌ ಜತೆ ಚರ್ಚಿಸಿದ್ದು, ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ಇನ್ನು ಸರ್ಕಾರಕ್ಕೆ ನಿಧಿ ನೀಡಿದ ಪ್ರಜ್ವಲ್ ರಿತ್ತಿ ಕುಟುಂಬಕ್ಕೆ ಗ್ರಾಪಂ ನಿವೇಶನ ನೀಡಿದ್ದು, ಅಧಿಕೃತ ದಾಖಲೆಪತ್ರಗಳನ್ನು ಒದಗಿಸಿದ ಆನಂತರ ವೈಯಕ್ತಿವಾಗಿ ಆ ಕುಟುಂಬಕ್ಕೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಸಚಿವ ಎಚ್.ಕೆ. ಪಾಟೀಲ ಮತ್ತು ಶಾಸಕ ಸಿ.ಸಿ. ಪಾಟೀಲ ಅವರು ಕಾಳಜಿ ವಹಿಸಿ ಎರಡು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದು ಸ್ವಾಗತಾರ್ಹ. ಈ ದಿಸೆಯಲ್ಲಿ ಗ್ರಾಮದ ಮೂರು ಭಾಗದಲ್ಲಿ ಚರಂಡಿ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.

ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ ಮಾತನಾಡಿ, ಜಾತ್ಯತೀತ ಮತ್ತು ಪಕ್ಷಾತೀತವಾಗಿ ಲಕ್ಕುಂಡಿ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಮಾಜಿ ಯೋಧ ದತ್ತಾತ್ರೇಯ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಎಸ್.ಬಿ. ಕಲಕೇರಿ, ವಸಂತ ಮೇಟಿ, ಗ್ರಾಪಂ ಸದಸ್ಯರಾದ ರುದ್ರಪ್ಪ ಮುಸ್ಕಿನಭಾವಿ, ಪೀರಸಾಬ್‌ ನದಾಫ, ವಿರೂಪಾಕ್ಷಿ ಬೆಟಗೇರಿ, ಪ್ರೇಮಾ ಮಟ್ಟಿ, ತಾಪಂ ಇಒ ಮಲ್ಲಯ್ಯ ಕೊರವನವರ, ಪಿಡಿಒ ಅಮೀರನಾಯಕ ಇದ್ದರು. ಪ್ರಕಾಶ ಅರಹುಣಶಿ ಸ್ವಾಗತಿಸಿದರು. ವೆಂಕಟೇಶ ದೊಂಗಡೆ ಕಾರ್ಯಕ್ರಮ ನಿರೂಪಿಸಿದರು. ಮಹಮ್ಮದ್‌ ರಫೀಕ ಹುಬ್ಬಳ್ಳಿ ವಂದಿಸಿದರು.

ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರವು ನಡೆಸುತ್ತಿರುವ ಉತ್ಖನನ ಕಾರ್ಯ ಗ್ರಾಮಸ್ಥರನ್ನು ವಿಶ್ವಾಸಕ್ಕೆ ಪಡೆಯದೇ ನಡೆಸುತ್ತಿದ್ದು, ಗ್ರಾಮಸಭೆ ಕರೆದು ಅಭಿಪ್ರಾಯ ಪಡೆಯಬೇಕು ಎಂದು ತಾಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಬಾವಿ ಹೇಳಿದರು.ಲಕ್ಕುಂಡಿಯು ವಿಶ್ವ ಪರಂಪರೆ ಪಟ್ಟಿಗೆ ಸೇರಬೇಕೆನ್ನುವ ನಿಟ್ಟಿನಲ್ಲಿ 2018ರಲ್ಲಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಯಿತು. 2020ರಲ್ಲಿ ಶಾಸಕ ಸಿ.ಸಿ. ಪಾಟೀಲ ಅವರ ನೇತೃತ್ವದಲ್ಲಿ ಅಧಿಸೂಚನೆಯಾಗಿದ್ದು, ಶಾಸಕರ ಸೂಚನೆಯಂತೆ ಗ್ರಾಮಸಭೆ ಕರೆಯಲಾಗುವುದು ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ಶರಣು ಗೋಗೇರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

₹400 ಕೋಟಿ ದರೋಡೆ ಕೇಸ್‌ನ ಸಂಭಾಷಣೆ ಆಡಿಯೋ ವೈರಲ್‌!
ಇಂದಿನಿಂದ ಮತ್ತೆ ಕಲಾಪ : ಭಾರೀ ಕೋಲಾಹಲ ನಿರೀಕ್ಷೆ