ಡಿಸೆಂಬರ್ ಅಂತ್ಯಕ್ಕೆ ಲಕ್ಕುಂಡಿಯಲ್ಲಿ ಉತ್ಖನನ ಪ್ರಾರಂಭ: ಎಚ್.ಕೆ. ಪಾಟೀಲ

KannadaprabhaNewsNetwork |  
Published : Nov 25, 2024, 01:04 AM IST
ಪ್ರಾಚ್ಯಾವಶೇಷಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ, ಮಾಜಿ ಸಚಿವ ಸಿ.ಸಿ.ಪಾಟೀಲ ವೀಕ್ಷಿಸಿದರು.  | Kannada Prabha

ಸಾರಾಂಶ

ಸತತ 3 ಗಂಟೆಗಳ ಕಾಲ ಸಂಗ್ರಹಣಾ ಕಾರ್ಯ ನಡೆದಿದೆ. ಲಕ್ಕುಂಡಿಯನ್ನು ಸುಪ್ರಸಿದ್ಧ ಪ್ರವಾಸಿ ತಾಣ ಮಾಡುವ ದೊಡ್ಡ ಹೆಜ್ಜೆ ಇದಾಗಿದೆ.

ಗದಗ: ಸರ್ಕಾರ ಪ್ರವಾಸೋದ್ಯಮ ಇಲಾಖೆಗೆ ವಿಶೇಷ ಗಮನ ನೀಡಿದ್ದು, ನಾಡಿನ ಐತಿಹಾಸಿಕ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಉತ್ಖನನ ಪ್ರಾರಂಭವಾಗಲಿದೆ. ಆ ಮೂಲಕ ಲಕ್ಕುಂಡಿ ಗತವೈಭವದ ಮರುಸೃಷ್ಟಿಯಾಗಲಿದೆ ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಭಾನುವಾರ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಪ್ರಾಚ್ಯಾನ್ವೇಷಣೆ ಕಾರ್ಯಕ್ರಮದ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಭಾನುವಾರ ಬೆಳಗ್ಗೆಯಿಂದ ಸಂಗ್ರಹ ಕಾರ್ಯ ಪ್ರಾರಂಭಿಸಿದ್ದು, ಸತತ 3 ಗಂಟೆಗಳ ಕಾಲ ಸಂಗ್ರಹಣಾ ಕಾರ್ಯ ನಡೆದಿದೆ. ಲಕ್ಕುಂಡಿಯನ್ನು ಸುಪ್ರಸಿದ್ಧ ಪ್ರವಾಸಿ ತಾಣ ಮಾಡುವ ದೊಡ್ಡ ಹೆಜ್ಜೆ ಇದಾಗಿದೆ. ಇದು ಒಂದು ವಿಶೇಷ ಪ್ರಯತ್ನ, ಐತಿಹಾಸಿಕ ಕ್ರಾಂತಿಕಾರಿ ಹೆಜ್ಜೆಯಾಗಿದೆ. ಲಕ್ಕುಂಡಿ ಗ್ರಾಮದಲ್ಲಿ ಒಂದಷ್ಟು ದೇವಾಲಯಗಳು ಕಾಣೆಯಾಗಿವೆ, ಅವುಗಳನ್ನು ಸಹ ಗುರುತಿಸುವ ಬಹು ದೊಡ್ಡ ಕೆಲಸ ನಡೆಯುತ್ತಿದೆ. ಹುದುಗಿ ಹೋಗಿರುವ ದೇಗುಲಗಳ ಮಾಹಿತಿ ಈಗೀಗ ಲಭ್ಯ ಆಗುತ್ತಿದೆ. ಇನ್ನು ಒಂದಷ್ಟು ದೇಗುಲ ಮರು ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಭಾನುವಾರ ಬೆಳಗ್ಗೆಯಿಂದ ನಡೆಸಿದ ಅನ್ವೇಷಣಾ ಕಾರ್ಯದಲ್ಲಿ 5 ಶಾಸನಗಳು ನಮಗೆ ಲಭ್ಯವಾಗಿವೆ. ಇಲ್ಲಿ ಸಿಕ್ಕಿರುವುದು ಮೆದು ಕಲ್ಲು ಅಲ್ಲ, ಗ್ರಾನೈಟ್ ಕಲ್ಲುಗಳಿಂದ ನಿರ್ಮಿತವಾಗಿವೆ ಎನ್ನುವುದು ಸ್ಪಷ್ಟವಾಗುತ್ತದೆ. ನಮ್ಮ ಸರ್ಕಾರ ಏನೆಲ್ಲ ಹೊಸ ಪ್ರಯತ್ನ ಮಾಡಬಹುದು ಎಂಬುದಕ್ಕೆ ಭಾನುವಾರ ಲಕ್ಕುಂಡಿ ಗ್ರಾಮದಲ್ಲಿ ನಡೆದಿರುವ ಈ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಜನರು ಸ್ವಯಂ ಪ್ರೇರಿತರಾಗಿ ಪ್ರಾಚ್ಯ ವಸ್ತುಗಳನ್ನು ಕೊಡುತ್ತಿದ್ದಾರೆ. ಒಂದು ಮಠವನ್ನು ಮಾಲೀಕರು ಈಗಾಗಲೇ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದಾರೆ. ಉಳಿದ ನಾಲ್ಕು ದೇಗುಲ ವಾಪಸ್ ತರಲು ಸಹ ಎಲ್ಲ ಕೆಲಸ ನಡೆಯುತ್ತಿದೆ. ಲಕ್ಕುಂಡಿ ಪುನರುತ್ಥಾನಕ್ಕೆ ಇಂದು ಬಹು ದೊಡ್ಡ ಯಶಸ್ಸು ಸಿಕ್ಕಿದೆ. ಲಕ್ಕುಂಡಿಯಲ್ಲಿ ಒಂದು ಕೋಟೆ ಸಹ ಇದೆ, ಅದು ಹಲವಾರು ಜನರಿಗೆ ಗೊತ್ತಿಲ್ಲ, ಅದನ್ನು ಕೂಡಾ ನಮ್ಮ ಸರ್ಕಾರ ಸುಧಾರಣೆ ಮಾಡಲಿದೆ ಎಂದರು.

ರಾಷ್ಟ್ರಕೂಟರ ಕಾಲದಲ್ಲಿ ಕಟ್ಟಿರುವ ಅಪರೂಪದ ತಾಣಗಳಿವು, ಕಲ್ಯಾಣ ಚಾಲುಕ್ಯರ ಕಾಲದಲ್ಲಿ ವಿಶೇಷ ಅಭಿವೃದ್ಧಿಯೂ ಆಗಿವೆ. ವಿಜಯನಗರ ಹಾಗೂ ಇತ್ಯಾದಿ ರಾಜರು ಸಹ ಲಕ್ಕುಂಡಿಯಲ್ಲಿ ಆಳ್ವಿಕೆ ಮಾಡಿದ್ದಾರೆ. ಈ ಶಿಲ್ಪಕಲೆ ನೋಡಿದ ಪ್ರತಿಯೊಬ್ಬರೂ ಖುಷಿ ಪಡುತ್ತಾರೆ. ಅದರಲ್ಲಿಯೂ ಭಾನುವಾರ ನಡೆಸಿದ ಪ್ರಾಚ್ಯಾವಶೇಷಗಳ ಅನ್ವೇಷಣೆ ತುಂಬಾ ಖುಷಿ ಕೊಟ್ಟಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಬಾಡಿಗೆ ತಾಯ್ತನ’ದಿಂದ ಮಗು : ವೃದ್ಧ ದಂಪತಿಯಿಂದ ಕೋರ್ಟ್‌ ಮೊರೆ
ನೆಚ್ಚಿನ ಗುರುಗೆ ಶಿಷ್ಯರಿಂದ ‘ರಕ್ತ’ ತುಲಾಭಾರ!