ಹಂಪಿಯಲ್ಲಿ ಮತ್ತೆ ಉತ್ಖನನ ಕಾರ್ಯಕ್ಕೆ ಚಾಲನೆ

KannadaprabhaNewsNetwork | Published : Dec 20, 2024 12:45 AM

ಸಾರಾಂಶ

ವಿಶ್ವವಿಖ್ಯಾತ ಹಂಪಿಯಲ್ಲಿ ಮತ್ತೆ ಭಾರತೀಯ ಪುರಾತತ್ವ ಇಲಾಖೆಯ ಹಂಪಿ ವಲಯದಿಂದ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಮತ್ತೆ ಭಾರತೀಯ ಪುರಾತತ್ವ ಇಲಾಖೆಯ ಹಂಪಿ ವಲಯದಿಂದ ಉತ್ಖನನ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಹಂಪಿಯ ಪಾನ್‌ ಸುಪಾರಿ ಬಜಾರ್ ನಲ್ಲಿ ಉತ್ಖನನ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯು ಸಂಶೋಧಕರ ಸ್ವರ್ಗವಾಗಿದೆ. ಜೊತೆಗೆ ದಕ್ಷಿಣ ಭಾರತದಲ್ಲಿ ಅತಿ ದೊಡ್ಡ ಉತ್ಖನನ ಸ್ಥಳ ಎಂದು ಪ್ರಸಿದ್ಧಿಯಾಗಿದೆ. ಹಂಪಿಯಲ್ಲಿ ಈ ಹಿಂದೆ ಇಲಾಖೆಯಿಂದಲೇ ಉತ್ಖನನ ಕಾರ್ಯ ನಡೆದಿದೆ. ಹಂಪಿಯಲ್ಲಿ 70ರ ದಶಕದಿಂದಲೂ ಉತ್ಖನನ ಕಾರ್ಯ ನಡೆದಿದೆ. ಪುರಾತತ್ವ ಇಲಾಖೆ ಆಸ್ಥೆಯಿಂದ ಹಂಪಿ ಈಗ ದೇಶ, ವಿದೇಶಿ ಪ್ರವಾಸಿಗರನ್ನು ಕೂಡ ಸೆಳೆಯುತ್ತಿದೆ.ಹಂಪಿ ಸ್ಮಾರಕಗಳ ಗುಚ್ಛವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಲು ಪುರಾತತ್ವ ಇಲಾಖೆ ಶ್ರಮ ವಹಿಸಿದ ಪರಿಣಾಮ 1986ರಲ್ಲಿ ಯುನೆಸ್ಕೊ ಪಟ್ಟಿಯಲ್ಲಿ ಹಂಪಿ ಸ್ಮಾರಕಗಳಿಗೆ ಜಾಗ ದೊರೆತಿದೆ. ಹಂಪಿಯ ಸ್ಮಾರಕಗಳ ವೀಕ್ಷಣೆಗೆ ವಾರ್ಷಿಕ 2 ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಹಾಗೂ 30 ಲಕ್ಷಕ್ಕೂ ಅಧಿಕ ದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹಂಪಿಯಲ್ಲಿ ಇನ್ನಷ್ಟು ಶೋಧ ಕಾರ್ಯ ನಡೆಸಲು ಉತ್ಖನನ ನಡೆದಿದೆ. ಇದರಿಂದ ಇತಿಹಾಸಕಾರರು, ಸಂಶೋಧಕರು ವಿಜಯನಗರ ಸಾಮ್ರಾಜ್ಯ ಹಾಗೂ ಈ ನೆಲದ ಚರಿತ್ರೆ ಬಗ್ಗೆ ಬೆಳಕು ಚೆಲ್ಲಲಿದ್ದಾರೆ.

ಈ ಹಿಂದೆ ನಡೆದ ಉತ್ಖನನ ವೇಳೆ ಹಂಪಿಯಲ್ಲಿ ಹಲವು ಐತಿಹಾಸಿಕ ವಸ್ತುಗಳು ದೊರೆತಿವೆ. ಪ್ರಾಚ್ಯವಸ್ತುಗಳನ್ನು ಕಮಲಾಪುರದ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಹಂಪಿಯಲ್ಲಿ ಮಹತ್ವದ ವಸ್ತುಗಳು ದೊರೆಯುವ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆ ಈಗ ಉತ್ಖನನಕ್ಕೆ ಒತ್ತು ನೀಡಿದೆ. ಇದರಿಂದ ಹಂಪಿ, ವಿಜಯನಗರ ನೆಲದ ಮೇಲೆ ಇನ್ನಷ್ಟು ಬೆಳಕು ಚೆಲ್ಲಬಹುದು. ಈ ಮೂಲಕ ಮುಂದಿನ ಪೀಳಿಗೆಗೆ ಈ ನೆಲದ ಮಹತ್ವ ಸಾರಬಹುದಾಗಿದೆ.

ಕೇಂದ್ರ ಪುರಾತತ್ವ ಇಲಾಖೆಯ ಅಧೀಕ್ಷಕ ನಿಹಿಲ್ ದಾಸ್, ಉಪ ಅಧೀಕ್ಷಕಿ ಪ್ರೇಮಾ, ಅಧೀಕ್ಷಕ ಎಂಜಿನಿಯರ್ ಭರಣಿಧರ ಇವರ ಮಾರ್ಗದರ್ಶನದಲ್ಲಿ ಉತ್ಖನನ ಕಾರ್ಯ ನಡೆದಿದೆ. ಇಲಾಖೆಯ ಅನಿರುದ್ಧ ದೇಸಾಯಿ, ಸುನಿಲ್, ಅಬ್ದುಲ್‌, ಕುಮಾರ್ ಮತ್ತು ಸಿಬ್ಬಂದಿ ಉತ್ಖನನ ಕಾರ್ಯದಲ್ಲಿ ತೊಡಗಿದ್ದು, ನಾಜೂಕಾಗಿ ಉತ್ಖನನ ನಡೆಸಲಾಗುತ್ತಿದೆ.

ಕೊಟ್‌..1

ಹಂಪಿಯಲ್ಲಿ ಪುರಾತತ್ವ ಇಲಾಖೆಯಿಂದ ನಡೆಸಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ಇನ್ನಷ್ಟು ಸಂಶೋಧನೆ ನಡೆಯಬೇಕಿದೆ. ಇದರಿಂದ ಮುಂದಿನ ಪೀಳಿಗೆಗೆ ಇತಿಹಾಸ ಕಟ್ಟಿಕೊಡಬಹುದು ಎನ್ನುತ್ತಾರೆ ಜಿಲ್ಲಾಧಿಕಾರಿ ಎಂ.ಎಸ್‌. ದಿವಾಕರ್‌.

ಹಂಪಿಯಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಪ್ರಸ್ತುತ ಉತ್ಖನನ ಮಾಡುತ್ತಿರುವುದು ಅತ್ಯಂತ ಮಹತ್ವವಾಗಿದೆ. ಇದರಿಂದ ಇನ್ನಷ್ಟು ಹೆಚ್ಚು ವಿಜಯನಗರ ಸಾಮ್ರಾಜ್ಯದ ಮಾಹಿತಿ ತಿಳಿದುಕೊಳ್ಳಬಹುದು ಎನ್ನುತ್ತಾರೆ ರಾಜ್ಯ ಪ್ರವಾಸಿ ಮಾರ್ಗದರ್ಶಿಗಳ ಸಂಘದ ಪ್ರಧಾನ ಕಾರ್ಯದರ್ಶಿ ವಿರುಪಾಕ್ಷಿ ವಿ. ಹಂಪಿ.

Share this article