ಮುನಿರಾಬಾದ್: ತುಂಗಭದ್ರಾ ಜಲಾಶಯದ ನೂತನ ಗೇಟ್‌ಗಳ ಅಳವಡಿಕೆ ವಿಷಯದಲ್ಲಿ ಕರ್ನಾಟಕ ಸರ್ಕಾರ ಉತ್ತಮ ಸಹಕಾರ ನೀಡುತ್ತಿದೆ ಎಂದು ಆಂಧ್ರಪ್ರದೇಶದ ಹಣಕಾಸು ಸಚಿವ ಪಾ. ಕೇಶವ ಹೇಳಿದರು.
ಆಂಧ್ರಪ್ರದೇಶದ ಹಣಕಾಸು ಸಚಿವ ಪಾ. ಕೇಶವ ಹಾಗೂ ವಿಧಾನಸಭೆಯ ಸರ್ಕಾರದ ಮುಖ್ಯ ಸಚೇತಕ ಶ್ರೀನಿವಾಸಲು ಜಂಟಿಯಾಗಿ ಸುಮಾರು 2 ಗಂಟೆಗೂ ಅಧಿಕ ತುಂಗಭದ್ರಾ ಜಲಾಶಯದ ನೂತನ ಗೇಟ್‌ಗಳ ಅಳವಡಿಕೆ ಕಾರ್ಯ ವೀಕ್ಷಿಸಿದರು.
ತುಂಗಭದ್ರಾ ಜಲಾಶಯವು ಅಂತರ ರಾಜ್ಯ ಜಲಾಶಯವಾಗಿದ್ದು, ಜಲಾಶಯದ ನೀರನ್ನು ಕರ್ನಾಟಕ ಮತ್ತು ಆಂಧ್ರ, ತೆಲಂಗಾಣ ರಾಜ್ಯಗಳು ಹಂಚಿಕೊಳ್ಳುತ್ತದೆ. ಜಲಾಶಯದ ನೂತನ ಗೇಟ್ ಅಳವಡಿಕೆ ಕಾರ್ಯದಲ್ಲಿ ಕರ್ನಾಟಕ ಹಾಗೂ ಆಂಧ್ರ ಸರ್ಕಾರವು ತಮ್ಮ ಪಾಲಿನ ಹಣ ಒದಗಿಸಿದ್ದು, ಇನ್ನೂ ತಾಂತ್ರಿಕ ವಿಷಯಕ್ಕೆ ಸಂಬಂಧಿಸಿದಂತೆ ತುಂಗಭದ್ರಾ ಮಂಡಳಿ ನೋಡಿಕೊಳ್ಳುತ್ತಿದೆ ಎಂದರು.ಜಲಾಶಯದ ನೂತನ ಗೇಟ್‌ಗಳ ಅಳವಡಿಕೆ ಕಾರ್ಯದಲ್ಲಿ ತುಂಗಭದ್ರಾ ಮಂಡಳಿ ಅಧಿಕಾರಿಗಳು, ಆಂಧ್ರ ಹಾಗೂ ಕರ್ನಾಟಕ ನೀರಾವರಿ ಇಲಾಖೆ ಅಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಜಲಾಶಯದ ಗೇಟ್‌ಗಳು ಶಿಥಿಲಗೊಂಡ ಕಾರಣ ಎಲ್ಲ 33 ಗೇಟ್‌ಗಳನ್ನು ತೆರವುಗೊಳಿಸಿ ನೂತನ ಗೇಟ್‌ಗಳ ಅಳವಡಿಕೆ ಕಾರ್ಯ ಮಾಡಲಾಗುತ್ತಿದೆ. ಕಾಮಗಾರಿ ಉತ್ತಮ ರೀತಿಯಲ್ಲಿ ಸಾಗಿದೆ. ಇದುವರೆಗೆ ಸುಮಾರು 21 ನೂತನ ಗೇಟ್‌ಗಳ ಅಳವಡಿಕೆ ಮಾಡಲಾಗಿದ್ದು, ಏಳು ಗೇಟ್ ಅಳವಡಿಕೆ ಕಾರ್ಯ ಪ್ರಗತಿಯಲಿದೆ. ಇನ್ನುಳಿದ ಗೇಟ್ ಶೀಘ್ರದಲ್ಲಿ ಅಳವಡಿಕೆ ಮಾಡಲಾಗುವುದು ಎಂದರು.
ನೂತನ ಗೇಟ್ ಅಳವಡಿಕೆ ವಿಷಯದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ಕರ್ನಾಟಕ ಹಾಗೂ ಆಂಧ್ರಪ್ರದೇಶದ ಸರ್ಕಾರಕ್ಕೆ ಸಹಕಾರ ನೀಡಿದ್ದಕ್ಕೆ ಈ ಸಂದರ್ಭದಲ್ಲಿ ರೈತರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಓ.ಆರ್.ಕೆ. ರೆಡ್ಡಿ, ಅಧೀಕ್ಷಕ ಅಭಿಯಂತರ ನಾರಾಯಣ ನಾಯಕ್, ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್, ಶಾಖಾಧಿಕಾರಿ ಕಿರಣ್, ಧರ್ಮರಾಜ್ ಉಪಸ್ಥಿತರಿದ್ದರು.