ಕುಷ್ಟಗಿ: ಪ್ರಶಸ್ತಿ ಪಡೆದವರು ಮಾತ್ರ ಉತ್ತಮ ಶಿಕ್ಷಕರಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯ ಮನಸ್ಸಿನಲ್ಲಿ ‘ಇವರು ಉತ್ತಮ’ ಎಂಬ ಭಾವನೆ ಮೂಡಿಸುವ ಶಿಕ್ಷಕರೇ ನಿಜವಾದ ಉತ್ತಮ ಶಿಕ್ಷಕರು ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಶಿಕ್ಷಕರ ನಡೆ-ನುಡಿ ವಿದ್ಯಾರ್ಥಿಗಳ ವ್ಯಕ್ತಿತ್ವದ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ, ಶಿಕ್ಷಕರು ತಮ್ಮ ವೃತ್ತಿಯ ಘನತೆ ಹಾಗೂ ಸಮಾಜದಲ್ಲಿರುವ ಗೌರವವನ್ನು ಉಳಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಶಿಕ್ಷಕರು ಕೇವಲ ಪಠ್ಯ ಬೋಧನೆಗೆ ಸೀಮಿತವಾಗದೆ ಮಕ್ಕಳಲ್ಲಿ ಸಂಸ್ಕಾರ, ದೇಶದ ಅರಿವು, ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಮಕ್ಕಳ ಪ್ರತಿಭೆ ಗುರುತಿಸಿ, ಅವರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕು. ಒಬ್ಬ ವಿದ್ಯಾರ್ಥಿಯ ಬದುಕಿನಲ್ಲಿ ಉತ್ತಮ ಬದಲಾವಣೆ ತರುವುದೇ ಶಿಕ್ಷಕ ವೃತ್ತಿಯ ನಿಜವಾದ ಸಾರ್ಥಕತೆ ಎಂದು ಹೇಳಿದರು.
ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್ ದೋಟಿಹಾಳ ಮಾತನಾಡಿ, ಶಿಕ್ಷಕರ ಸ್ಥಾನಮಾನ ಸಮಾಜದಲ್ಲಿ ಅತ್ಯಂತ ಗೌರವಯುತವಾದುದು. ಶಿಕ್ಷಕ ವೃತ್ತಿಯ ಘನತೆಗೆ ಧಕ್ಕೆ ತರುವ ಯಾವುದೇ ನಡೆಗೆ ಅವಕಾಶ ನೀಡದೆ, ವೃತ್ತಿಯ ಜವಾಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಬೇಕು. ಮಕ್ಕಳ ಭವಿಷ್ಯ ರೂಪಿಸುವ ಮಹತ್ತರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಸಂಸ್ಕಾರ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಕೊಡುಗೆ ನೀಡಬೇಕು ಎಂದರು.ಬಿಇಒ ಉಮಾದೇವಿ ಬಸಾಪುರ ಮಾತನಾಡಿ, ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ‘ಗುರು ಮತ್ತು ಅರಿವು’ ಜೀವನದ ಎರಡು ಪ್ರಮುಖ ಅಂಶಗಳು. ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾರ, ಮೌಲ್ಯ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸಬೇಕು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಗುರಪ್ಪ ಕುರಿ, ಮಹಾದೇವಪ್ಪ ಗೊಣ್ಣಾಗರ, ನೀಲನಗೌಡ ಹೊಸಗೌಡ್ರು, ಸಿದ್ರಾಮಪ್ಪ ಅಮರಾವತಿ, ಬೀರಪ್ಪ ಕುರಿ, ಮಹಾಂತೇಶ್ ಜಾಲಿಗಿಡದ, ಗ್ಯಾನಪ್ಪ ರಾಂಪುರ, ನಾಗರಾಜ ನಿಡಗುಂದಿ, ಆರ್.ಟಿ. ನಾಯಕ, ಯಮನಪ್ಪ ಚೂರಿ, ಮಲ್ಲಪ್ಪ ಕುದರಿ, ಶಿವಾನಂದ ಪಂಪಣ್ಣವರ, ರಾಘಪ್ಪ ಶ್ರೀರಾಮ್, ನಾಗಪ್ಪ ಬಿಳಿಯಪ್ಪನವರ, ವಿಶ್ವನಾಥ ಅಂಬಲಿಕೊಪ್ಪಮಠ, ಲೆಂಕಪ್ಪ ವಾಲಿಕಾರ, ನಿಂಗಪ್ಪ ಗುನ್ನಾಳ, ಬಸವರಾಜ ಕುಂಬಳಾವತಿ, ಅಯ್ಯಪ್ಪ ಸುರುಳ, ಶರಣಪ್ಪ ತೆಮ್ಮಿನಾಳ, ಸೇರಿದಂತೆ ಶಿಕ್ಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಕ್ರೀಡೆ, ಸಂಗೀತ, ಸಾಹಿತ್ಯ ಹಾಗೂ ಸಾಮಾನ್ಯ ಜ್ಞಾನ ಬೆಳೆಸಬೇಕು. ‘ಮಮ್ಮಿ–ಡ್ಯಾಡಿ’ ಸಂಸ್ಕೃತಿಗಿಂತ ಮಾತೃಭಾಷೆ, ಭಾರತೀಯ ಸಂಸ್ಕೃತಿ ಮತ್ತು ಮೌಲ್ಯಗಳ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಿಸಬೇಕು. ಶಿಕ್ಷಕರು ಪಠ್ಯಪುಸ್ತಕದಾಚೆ ಕಥೆ, ಕಾದಂಬರಿ ಹಾಗೂ ಸಾಹಿತ್ಯದ ಪರಿಚಯ ಮಾಡಿಸಿ, ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಬೇಕು. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಹಾಸ್ಯ ಕಲಾವಿದ ಕೆ. ಪ್ರಾಣೇಶ ಹೇಳಿದರು.ೃ