ಅತಿಯಾದ ದೂರದರ್ಶನ, ಮೊಬೈಲ್‌ ಬಳಕೆ ಸರಿಯಲ್ಲ: ಜಿ.ವಿ. ಹೆಗಡೆ

KannadaprabhaNewsNetwork | Published : May 11, 2024 12:01 AM

ಸಾರಾಂಶ

ಯಲ್ಲಾಪುರ ತಾಲೂಕಿನ ಹಿತ್ಲಳ್ಳಿಯಲ್ಲಿ ಪ್ರೇರಣಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.

ಯಲ್ಲಾಪುರ: ವಿದ್ಯಾರ್ಥಿಗಳಿಗೆ ಅತಿಯಾದ ದೂರದರ್ಶನ ವೀಕ್ಷಣೆ ಮತ್ತು ಮೊಬೈಲ್ ಕುರಿತಾದ ವ್ಯಾಮೋಹ ಪಿಡುಗಾಗಿದ್ದು, ಇದು ಭವಿಷ್ಯದ ಒಳಿತಿಗೆ ಪೂರಕವಲ್ಲ ಎಂದು ಸ್ಥಳೀಯ ಸೇ.ಸ. ಸಂಘದ ಅಧ್ಯಕ್ಷ ಜಿ.ವಿ. ಹೆಗಡೆ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕಸಾಪ ಘಟಕ ಯಲ್ಲಾಪುರ, ಶಾಲಾಭಿವೃದ್ಧಿ ಸಮಿತಿ ಸಹಿಪ್ರಾ ಶಾಲೆ ಹಿತ್ಲಳ್ಳಿ, ಗ್ರಾಪಂ ಹಿತ್ಲಳ್ಳಿಯ ಅರಿವು ಕೇಂದ್ರ ಹಾಗೂ ಗೀತಾಜ್ಞಾನ ಯಜ್ಞದ ಯಲ್ಲಾಪುರ ಘಟಕಗಳ ಹಿತ್ಲಳ್ಳಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆದ ಪ್ರೇರಣಾ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳ ಸೃಜನಾತ್ಮಕ ಚಟುವಟಿಕೆಗೆ ಬೇಸಿಗೆ ಶಿಬಿರಗಳು ಅತಿ ಉಪಯುಕ್ತವಾಗಿವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ಗೌಡ ಮಾತನಾಡಿ, ಈ ಶಿಬಿರವು ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಮಕ್ಕಳ ಭವಿಷ್ಯದ ಒಳಿತಿಗೆ ಇದು ಪೂರಕ ಮಾರ್ಗದರ್ಶನ ನೀಡುವಂತಾಗಿದೆ ಎಂದರು.

ಕಲಾಗುಚ್ಛವನ್ನು ಅನಾವರಣಗೊಳಿಸಿದ ಪಿಡಿಒ ನಾರಾಯಣ ಗೌಡ ಮಾತನಾಡಿ, ಮಕ್ಕಳ ಬೌದ್ಧಿಕ ವಿಕಾಸಕ್ಕೆ ಇಂತಹ ಕಾರ್ಯಕ್ರಮಗಳು ಅತ್ಯುಪಯುಕ್ತ ಎಂದರು.

ಸೇ.ಸ. ಸಂಘದ ಉಪಾಧ್ಯಕ್ಷ ಕಾಶಿ ಗಜಾನನ ಭಟ್ಟ ಮಾತನಾಡಿ, ರಜಾ ಅವಧಿಯಲ್ಲಿ ಮಕ್ಕಳಿಗೆ ಉತ್ತಮ ಕಲಿಕೆಯ ಮೂಲಕ ವೈವಿಧ್ಯಮಯ ಶಿಕ್ಷಣ ಬೋಧಿಸಿದ ಇಂತಹ ಶಿಬಿರಗಳು ವರ್ಷಕ್ಕೊಮ್ಮೆ ನಡೆಯುವಂತಾಗಲಿ ಎಂದು ಆಶಿಸಿದರು.

ಸಿಆರ್‌ಪಿ ಕೆ.ಆರ್. ನಾಯ್ಕ ಮಾತನಾಡಿ, ಮಕ್ಕಳು ತಮ್ಮ ರಜಾಕಾಲದ ಸದುಪಯೋಗ ಪಡಿಸಿಕೊಳ್ಳಲು ಇಂತಹ ಶಿಬಿರಗಳು ಸಹಕಾರಿಯಾಗಿದ್ದು, ಸಂಘಟನೆಗಳೇ ಕಷ್ಟದಾಯಕವಾದ ಇಂದಿನ ದಿನಗಳಲ್ಲಿ ಮೌಲ್ಯವರ್ಧಿತ ಶಿಕ್ಷಣಕ್ಕೆ ಆದ್ಯತೆ ನೀಡಿದ ಶಿಬಿರವು ಶ್ಲಾಘನೀಯ ಕಾರ್ಯ ಮಾಡಿದೆ ಎಂದರು.

ಕಸಾಪ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಬೇಸಿಗೆ ಶಿಬಿರಗಳು ವಿದ್ಯಾರ್ಥಿಗಳ ಬದುಕಿನ ಉಲ್ಲಾಸಕ್ಕೆ ಮತ್ತು ಜ್ಞಾನವಿಕಾಸಕ್ಕೆ ಸಹಾಯಕವಾಗಿವೆ ಎಂದರು.

ಗೀತಾಜ್ಞಾನ ಯಜ್ಞದ ತಾಲೂಕು ಸಂಚಾಲಕಿ ಭಾರತಿ ಹೆಗಡೆ, ಶೇಖರ ಸಿದ್ದಿ ಮಾತನಾಡಿದರು. ಶಿಬಿರದ ಕುರಿತಾಗಿ ವಿದ್ಯಾರ್ಥಿಗಳಾದ ಪುನರ್ವಿ ಮತ್ತು ಮೇಘನಾ ಅನಿಸಿಕೆ ವ್ಯಕ್ತಪಡಿಸಿದರು.

ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಸತೀಶ ಯಲ್ಲಾಪುರ, ನಾರಾಯಣ ಶೇರುಗಾರ, ಆದಿತ್ಯ ಶಂಕರ, ರಾಘವೇಂದ್ರ ಹೆಗಡೆ, ವಿ. ಮಂಜುನಾಥ ಭಟ್ಟ, ವೆಂಕಣ್ಣ ಜಾಲೀಮನೆ, ಶೇಖರ ಸಿದ್ದಿ, ನಾಗಪ್ಪ ನಾಗನೂರು, ಚಂದ್ರಶೇಖರ ನಾಯ್ಕ, ಚಂದ್ರಕಾಂತ ಗಾಂವ್ಕರ, ವಿನಾಯಕ ನಾಯ್ಕ, ರವಿ ನಾಯ್ಕ, ತುಳಸಿದಾಸ ನಾಯ್ಕ, ಭಾರತಿ ಹೆಗಡೆ, ನಾಗರತ್ನಾ ಪೂಜಾರಿ ಮುಂತಾದ ೧೬ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಶಿಬಿರದ ನಿರ್ದೇಶಕ ಎನ್.ವಿ. ಹೆಗಡೆ ಸ್ವಾಗತಿಸಿದರು. ಸಹಿಪ್ರಾ ಶಾಲಾ ಮುಖ್ಯಾಧ್ಯಾಪಕಿ ಯಮುನಾ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ಭಾಗ್ವತ ನಿರ್ವಹಿಸಿದರು. ಶೈಲಾ ಭಂಡಾರಿ ವಂದಿಸಿದರು. ಸನ್ಮಾನ ಕಾರ್ಯಕ್ರಮವನ್ನು ಲಕ್ಷ್ಮೀ ಹೆಗಡೆ ನಿರ್ವಹಿಸಿದರು.

Share this article