ಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಹುಲುಸೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮಾಂತರ ಬಸವ ಜಯಂತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಆಧುನಿಕತೆಯ ಧಾವಂತದಲ್ಲಿ ಜನರಿಗೆ ಅತಿ ಸುಲಭದಲ್ಲಿ ಹಣ ಸಂಪಾದನೆ ಯಾಗುತ್ತದೆಯಾದರೂ ಆಂತರಿಕವಾದ ಸುಖ, ಸಂತೋಷ, ಶಾಂತಿ ಹಾಗೂ ನೆಮ್ಮದಿಗಳನ್ನು ನಾವು ನಮ್ಮೊಳಗೆಯೇ ಕಂಡುಕೊಳ್ಳಬೇಕು. ಹಾಗಾಗಿ ಅರ್ಪಣೆ, ಅರ್ಚನೆ ಹಾಗೂ ಅನುಭಾವಗಳ ಮೂಲಕ ವಚನ ಸಾಹಿತ್ಯದ ಸಾರವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ರಾಮರಾಜ್ಯದ ಪರಿಕಲ್ಪನೆ ಸಾಕಾರವಾಗುತ್ತದೆ ಎಂದು ಶ್ರೀಗಳು ಹೇಳಿದರು.
ಬಸವ ಜಯಂತಿ ಅಂಗವಾಗಿ ಪ್ರವಚನ ನೀಡಿದ ಹೆಬ್ಬಾಲೆ ಪ್ರೌಢಶಾಲೆ ಕನ್ನಡ ಉಪನ್ಯಾಸಕ ಮೆ.ನಾ. ವೆಂಕಟನಾಯಕ್, ಮಕ್ಕಳಿಗೆ ಎಳೆಯ ಪ್ರಾಯದಿಂದಲೇ ತಾಯಂದಿರು ವಚನಗಳನ್ನು ಕಡ್ಡಾಯವಾಗಿ ಕಲಿಸುವ ಮೂಲಕ ಈ ನೆಲದ ಸಂಸ್ಕಾರಗಳನ್ನು ಕಲಿಸಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ನಾವಿದ್ದೇವೆ. ತಾಯಂದಿರು ಮಕ್ಕಳಿಗೆ ವಚನಗಳನ್ನು ಕಲಿಸದ ಕಾರಣ ಇಂದು ಮಕ್ಕಳು ಮೊಬೈಲ್‌ಗಳ ದಾಸರಾದರೆ, ತಾಯಂದಿರು ಟವಿ ಧಾರಾವಾಹಿಗಳಿಗೆ ಶರಣಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಷಾದಿಸಿದರು.ಸಾಹಿತಿ ಕಣಿವೆ ಭಾರದ್ವಾಜ್ ಮಾತನಾಡಿ, ಮಕ್ಕಳೊಂದಿಗೆ ಪ್ರತಿಯೊಂದು ಮಂದಿಯೂ ಬಸವಾದಿ ಶರಣರ ರಚನೆಯ ಕಲಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ ಎಂಬ ಅಷ್ಟ ಸಾಲುಗಳನ್ನು ಬಾಯಿಪಾಠ ಮಾಡಿ ಅದರ ಸಾರವನ್ನು ನಡೆ ನುಡಿಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್. ಮೂರ್ತಿ ಆಶಯ ನುಡಿಗಳಾಡಿದರು. ಪರಿಸರವಾದಿ ಶಿಕ್ಷಕ ಟಿ.ಜಿ. ಪ್ರೇಮಕುಮಾರ್, ಹಿರಿಯ ನಿವಾಸಿ ಕಾಳಪ್ಪ, ಹುಲುಸೆಯ ಕೃಷಿಕ ಸಂಪತ್ ಇದ್ದರು. ವಿದ್ಯಾರ್ಥಿನಿ ಐಶ್ವರ್ಯ ವಚನಗಳನ್ನು ಹಾಡಿದರು.