ಹರೇಕಳ ಹಾಜಬ್ಬರ ಶಾಲೆಯಲ್ಲಿ ಜೂನ್‌ 1 ರಿಂದಲೇ ಪಿಯುಸಿ ತರಗತಿ ಆರಂಭ

KannadaprabhaNewsNetwork |  
Published : May 11, 2024, 12:00 AM ISTUpdated : May 11, 2024, 12:32 PM IST
Harekala Hajabba

ಸಾರಾಂಶ

ಹಾಜಬ್ಬ ಅವರು ನ್ಯೂಪಡ್ಪುವಿನಲ್ಲಿ ಸರ್ಕಾರಿ ಪ್ರೌಢ ಶಾಲೆ ಪ್ರಾರಂಭವಾದ ಬಳಿಕ ಪಿಯುಸಿ ಆರಂಭಿಸುವಂತೆ ಜನಪ್ರತಿನಿಧಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ನಿರಂತರ ಒತ್ತಡ ಹಾಕುತ್ತಿದ್ದರು. ಕೊನೆಗೂ ಇದೇ ಜೂನ್‌ 1ರಿಂದ ನ್ಯೂಪಡ್ಪು ಪ್ರೌಢ ಶಾಲೆಯಲ್ಲೇ ಪಿಯುಸಿ ತರಗತಿ ಶುರುವಾಗಲಿದೆ.

 ಮಂಗಳೂರು :  ಪದ್ಮಶ್ರೀ ಪುರಸ್ಕೃತ, ಅಕ್ಷರ ಸಂತ ಹರೇಕಳ ಹಾಜಬ್ಬರ ಪಿಯುಸಿ ಕಾಲೇಜು ತೆರೆಯುವ ಕನಸು ಈಗ ನನಸಾಗಿದೆ. ಮಂಗಳೂರು ಮಾರುಕಟ್ಟೆಯಲ್ಲಿ ಕಿತ್ತಳೆ ಮಾರಾಟ ಮಾಡಿ ಹರೇಕಳ ನ್ಯೂಪಡ್ಪುವಿನಲ್ಲಿ ತಲೆಎತ್ತಿದ ಪ್ರಾಥಮಿಕ ಶಾಲೆ, ಹೈಸ್ಕೂಲ್‌ ಆಗಿ ಈಗ ಪಿಯುಸಿ ಹಂತಕ್ಕೆ ತಲುಪಿದೆ. ಹಾಜಬ್ಬರ ಅವಿರತ ಪ್ರಯತ್ನದ ಫಲವಾಗಿ ಈ ಶೈಕ್ಷಣಿಕ ವರ್ಷದಿಂದ ಪಿಯುಸಿ ತರಗತಿ ಆರಂಭವಾಗುತ್ತಿದೆ. ಪ್ರಸಕ್ತ ಪಿಯುಸಿಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ.

ಹಾಜಬ್ಬ ಅವರು ನ್ಯೂಪಡ್ಪುವಿನಲ್ಲಿ ಸರ್ಕಾರಿ ಪ್ರೌಢ ಶಾಲೆ ಪ್ರಾರಂಭವಾದ ಬಳಿಕ ಪಿಯುಸಿ ಆರಂಭಿಸುವಂತೆ ಜನಪ್ರತಿನಿಧಿಗಳಿಗೆ ಹಾಗೂ ರಾಜ್ಯ ಸರ್ಕಾರಕ್ಕೆ ನಿರಂತರ ಒತ್ತಡ ಹಾಕುತ್ತಿದ್ದರು. ಕೊನೆಗೂ ಇದೇ ಜೂನ್‌ 1ರಿಂದ ನ್ಯೂಪಡ್ಪು ಪ್ರೌಢ ಶಾಲೆಯಲ್ಲೇ ಪಿಯುಸಿ ತರಗತಿ ಶುರುವಾಗಲಿದೆ. 

ಪ್ರಭಾರ ಪ್ರಾಂಶುಪಾಲರ ನಿಯೋಜನೆ:

ಈ ಸಾಲಿನಲ್ಲಿ ಕಲಾ ಮತ್ತು ವಾಣಿಜ್ಯ ವಿಭಾಗದ ತರಗತಿಗಳು ಆರಂಭವಾಗಲಿದೆ. ಈಗಾಗಲೇ ಪ್ರಭಾರ ಪ್ರಾಂಶುಪಾಲರ ನೇಮಕವೂ ನಡೆದಿದೆ. ನಾಯಿಲಪದವು ಸರ್ಕಾರಿ ಪಿಯು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕ ಅಬ್ದುಲ್‌ ರಜಾಕ್‌ ಅವರನ್ನು ಪ್ರಭಾರ ಪ್ರಾಂಶುಪಾಲರಾಗಿ ನಿಯೋಜನೆ ಮಾಡಲಾಗಿದೆ. ಅವರು ನ್ಯೂಪಡ್ಪುವಿಗೆ ಆಗಮಿಸಿ ಪಿಯುಸಿ ಪ್ರವೇಶ ಪ್ರಕ್ರಿಯೆ ಆರಂಭಿಸಿದ್ದಾರೆ.

ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಗತ್ಯ ಉಪನ್ಯಾಸಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಾರ್ಯದ ಒತ್ತಡ ಕಡಿಮೆ ಇರುವ ಪಿಯು ಕಾಲೇಜುಗಳಿಂದ ಉಪನ್ಯಾಸಕರನ್ನು ನಿಯೋಜಿಸಲಾಗುವುದು, ಇಲ್ಲವೇ ಅತಿಥಿ ಉಪನ್ಯಾಸಕರ ನೇಮಕಕ್ಕೂ ಕ್ರಮ ವಹಿಸಲಾಗುವುದು ಎಂದು ಪಿಯು ಇಲಾಖೆ ಉಪ ನಿರ್ದೇಶಕ ಜಯಣ್ಣ ತಿಳಿಸಿದ್ದಾರೆ.

ನ್ಯೂಪಡ್ಪು ಪ್ರಮುಖ ರಸ್ತೆಯ ಬಳಿ ಸರ್ಕಾರಿ ಜಾಗವನ್ನು ಶಾಲೆಯ ಹೆಸರಿಗೆ ನೋಂದಾಯಿಸಲಾಗಿದೆ. ಅಲ್ಲಿ ಅನುದಾನ ಲಭಿಸಿದರೆ ಸುಸಜ್ಜಿತ ಕಟ್ಟಡ ನಿರ್ಮಾಣ ಸಾಧ್ಯವಾಗಲಿದೆ.

ಈ ವರ್ಷದಿಂದಲೇ ಪಿಯು ಕಾಲೇಜು ಆರಂಭಕ್ಕೆ ಮುಂದಾಗಿರುವುದಕ್ಕೆ ಹರೇಕಳ ಹಾಜಬ್ಬ ಸರ್ಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ