ರವೀಂದ್ರನಾಥ ಠಾಕೂರ್‌ ಸಾಂಸ್ಕೃತಿಕ ಪುನರುಜ್ಜೀವನದ ವ್ಯಕ್ತಿ

KannadaprabhaNewsNetwork |  
Published : May 11, 2024, 12:00 AM IST
9ಡಿಡಬ್ಲೂಡಿ10ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರಹ್ಲಾದ ನರೇಗಲ್ ಮಾಸ್ತರರ ದತ್ತಿ ನಿಮಿತ್ತ ಆಯೋಜಿಸಿದ್ದ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಕವಿ ರವೀಂದ್ರನಾಥ ಠಾಕೂರರು ನೊಬೆಲ್ ಪುರಸ್ಕಾರ ಪಡೆದ ಏಷ್ಯಾದ ಮೊದಲಿಗರು. ಬಾಂಗ್ಲಾ ಹಾಗೂ ಶ್ರೀಲಂಕಾ ದೇಶಕ್ಕೂ ರಾಷ್ಟçಗೀತೆ ರಚಿಸಿಕೊಟ್ಟ ಕೀರ್ತಿಗೆ ಭಾಜನರಾಗಿದ್ದಾರೆ ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಎಂದರು.

ಕನ್ನಡಪ್ರಭ ವಾರ್ತೆ ಧಾರವಾಡರವೀಂದ್ರನಾಥ ಠಾಕೂರ್ ಭಾರತದ ಸಾಂಸ್ಕೃತಿಕ ಪುನರುಜ್ಜೀವನದ ಮಹಾನ್ ವ್ಯಕ್ತಿ. ಅವರು ದೇಶ, ಕಾಲ ಮೀರಿದ ಸೃಜನಶೀಲ ಕವಿಗಳು ಎಂದು ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರಹ್ಲಾದ ನರೇಗಲ್ ಮಾಸ್ತರರ ದತ್ತಿ ನಿಮಿತ್ತ ಆಯೋಜಿಸಿದ್ದ ‘ಗುರುದೇವ ರವೀಂದ್ರನಾಥ ಠಾಕೂರ್ ಜನ್ಮದಿನಾಚರಣೆ ಹಾಗೂ ಉಪನ್ಯಾಸ’ ಕಾರ್ಯಕ್ರಮದಲ್ಲಿ ‘ರವೀಂದ್ರನಾಥ ಠಾಕೂರ ದಾರ್ಶನಿಕ ಲೇಖಕರು’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಕವಿ ರವೀಂದ್ರನಾಥರು ಬಹುಮುಖ ವ್ಯಕ್ತಿತ್ವ ಉಳ್ಳ ಮೇರು ಕವಿಗಳು. ಸಾಹಿತಿಗಳಾಗಿ, ತತ್ವಜ್ಞಾನಿಗಳಾಗಿ, ಶಿಕ್ಷಣ ತಜ್ಞರಾಗಿ, ಕಲಾವಿದರಾಗಿ, ಕಥೆಗಾರರಾಗಿ ಮಾತ್ರವಲ್ಲ ಓರ್ವ ಪ್ರಸಿದ್ಧ ಸಂಗೀತ ಸಂಯೋಜಕರೂ ಆಗಿದ್ದರು. ಅವರ ಗೀತಾಂಜಲಿ ಕೃತಿಗೆ 1913 ರಲ್ಲಿ ನೊಬೆಲ್ ಪುರಸ್ಕಾರ ದೊರೆಯಿತು. ಕವಿ ರವೀಂದ್ರನಾಥ ಠಾಕೂರರು ನೊಬೆಲ್ ಪುರಸ್ಕಾರ ಪಡೆದ ಏಷ್ಯಾದ ಮೊದಲಿಗರು. ಬಾಂಗ್ಲಾ ಹಾಗೂ ಶ್ರೀಲಂಕಾ ದೇಶಕ್ಕೂ ರಾಷ್ಟçಗೀತೆ ರಚಿಸಿಕೊಟ್ಟ ಕೀರ್ತಿಗೆ ಭಾಜನರಾಗಿದ್ದಾರೆ ಎಂದರು.

ಅವರ ‘ಗೋರಾ’ ಕಾದಂಬರಿ ಹಾಗೂ ‘ಕಾಬೂಲಿವಾಲಾ’ ಕಥೆಯಲ್ಲಿ ದೈನಂದಿನ ಜೀವನ ಹಾಗೂ ಭಾವನೆಗಳನ್ನು ಮನೋಜ್ಞವಾಗಿ ಸೆರೆ ಹಿಡಿದಿದ್ದಾರೆ. ಅವರ ಎಲ್ಲಾ ಕೃತಿಗಳಲ್ಲಿ ಭಾರತದ ಸಾಂಸ್ಕೃತಿಕ ಪ್ರತಿಬಿಂಬ ಕಾಣಬಹುದು. ಅಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿದ ಅವರು ಜನಸಾಮಾನ್ಯರನ್ನು ಪ್ರೀತಿಯಿಂದ ಕಾಣುವ ಗುಣ ಹೊಂದಿದ್ದರು. ಅವರೊಬ್ಬ ಪ್ರಗತಿಶೀಲ ಚಿಂತನೆ ಉಳ್ಳ ಪ್ರಯೋಗಶೀಲ ವ್ಯಕ್ತಿಗಳು. ಕೆಲ ಸಂದರ್ಭದಲ್ಲಿ ಗಾಂಧೀಜಿಯವರ ವಿಚಾರ ಧಾರೆಗಳನ್ನು ಖಂಡಿಸುವ ಸ್ವಂತಿಕೆ ಹೊಂದಿದ್ದರು. ಕಂದಾಚಾರ ವಿರೋಧಿಸಿ ವೈಜ್ಞಾನಿಕ ದೃಷ್ಟಿಕೋನ ಹೊಂದಿದ್ದರು. ಸ್ವಾತಂತ್ರ್ಯ ಹೋರಾಟಗಾರರಾದ ಅವರು ವಸಾಹತುಶಾಹಿ ಆಳ್ವಿಕೆಯನ್ನು ಖಂಡಿಸಿದ್ದು ಉಂಟು. ಜೊತೆಗೆ ಪಾಶ್ಚಾತ್ಯ ವಿಚಾರ ಧಾರೆಗಳನ್ನು ಮೇಳೈಸಿಕೊಂಡಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ. ಜಿನದತ್ತ ಹಡಗಲಿ ಮಾತನಾಡಿದರು. ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ವೀರಣ್ಣ ಒಡ್ಡೀನ ನಿರೂಪಿಸಿದರು. ಎಂ.ಎಸ್. ನರೇಗಲ್ ವಂದಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ