ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದಾಗಿ ಉಪ್ಪಿನಂಗಡಿಯಲ್ಲಿ ಎತ್ತರಿಸಿದ ರಸ್ತೆಯ ನಿರ್ಮಾಣಕ್ಕಾಗಿ ನಿರ್ಮಿಸಲಾದ ಅಂಡರ್ ಪಾಸ್‌ನಲ್ಲಿ ಪದೇ ಪದೇ ವಾಹನ ಸಂಚಾರಕ್ಕೆ ಅಡೆತಡೆಯಾಗುತ್ತಿದ್ದು, ಹೆದ್ದಾರಿ ಕಾಮಗಾರಿಯ ಅಧಿಕಾರಿಗಳು ಶುಕ್ರವಾರದಂದು ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿ ಸರ್ವೀಸ್ ರಸ್ತೆಯನ್ನು ನಿರ್ಮಿಸಿ ಒಳಚರಂಡಿ ವ್ಯವಸ್ಥೆಯ ಕಾಮಗಾರಿಗೆ ಚಾಲನೆ ನೀಡಿದ್ದಾರೆ.ಹೆದ್ದಾರಿ ಅಗಲೀಕರಣದ ಕಾಮಗಾರಿಗೆ ಸಂಬಂಧಿಸಿದಂತೆ ಉಪ್ಪಿನಂಗಡಿಯಲ್ಲಿ ಹೆದ್ದಾರಿಯಲ್ಲಿ ಮಧ್ಯ ಭಾಗದಲ್ಲಿ ಎತ್ತರಿಸಿದ ರಸ್ತೆಯ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಈ ಮಧ್ಯೆ ಉಪ್ಪಿನಂಗಡಿ ಬಸ್ ನಿಲ್ದಾಣ ಸಂಪರ್ಕಿಸುವ ರಸ್ತೆಯಲ್ಲಿ ಅಂಡರ್ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಏಕ ಕಾಲಕ್ಕೆ ಘನವಾಹನಗಳು ಆಗಮನ ಮತ್ತು ನಿರ್ಗಮನದಿಂದ ಅನೇಕ ಬಾರಿ ವಾಹನ ದಟ್ಟನೆಯುಂಟಾಗಿ ವಾಹನಗಳು ಸಂಚರಿಸಲಾರದೆ ಎಲ್ಲೆಡೆ ಬ್ಲಾಕ್ ಆಗುತ್ತಿರುತ್ತದೆ. ಈ ಬಗ್ಗೆ ಪದೇ ಪದೇ ಸಂಭವಿಸಿದ ವಾಹನ ದಟ್ಟನೆ ಸಮಸ್ಯೆಯ ಬಗ್ಗೆ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.
ಸಮಸ್ಯೆಯ ಗಂಭೀರತೆ ಕಂಡ ದ.ಕ ಜಿಲ್ಲಾಧಿಕಾರಿಗಳು ಪುತ್ತೂರು ಸಹಾಯಕ ಕಮಿಷನರ್‌ಗೆ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಿದ್ದರು. ಅದರಂತೆ ಮೇ ೨ ರಂದು ಇಲಾಖಾಧಿಕಾರಿಗಳೊಂದಿಗೆ ಉಪ್ಪಿನಂಗಡಿಗೆ ಭೇಟಿ ನೀಡಿದ ಸಹಾಯಕ ಕಮಿಷನರ್ ಜುಬಿನ್ ಮಹಾಪಾತ್ರ , ಎತ್ತರಿಸಿದ ರಸ್ತೆಯ ಎರಡೂ ಪಾರ್ಶ್ವದಲ್ಲಿಯೂ ಮೇ ೧೦ ರ ಒಳಗಾಗಿ ಸರ್ವೀಸ್ ರಸ್ತೆಯ ಕಾರ್ಯವನ್ನು ಪೂರ್ಣಗೊಳಿಸಬೇಕೆಂದೂ, ಈ ಭಾಗದಲ್ಲಿ ನಿರ್ಮಿಸಬೇಕಾಗಿರುವ ದೊಡ್ಡ ಗಾತ್ರದ ಚರಂಡಿಯ ಕಾಮಗಾರಿಯನ್ನು ಮೇ ೧೫ ರ ಒಳಗಾಗಿ ಪೂರ್ಣಗೊಳಿಸಿ ಸಮಸ್ಯೆ ಕಾಡದಂತೆ ಕ್ರಮ ಕೈಗೊಳ್ಳಬೇಕೆಂದು ಎಂಇಂಜಿನಿಯರ್‌ಗೆ ನಿರ್ದೇಶನ ನೀಡಿದ್ದರು. ಅಧಿಕಾರಿಗಳಿಂದ ಸ್ಪಂದನೆ: ಸಹಾಯಕ ಕಮಿಷನರ್ ನಿರ್ದೇಶದಂತೆ ಹೆದ್ದಾರಿಯ ಇನ್ನೊಂದು ಪಾರ್ಶ್ವದಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸಿ ಶುಕ್ರವಾರ ಬಳಕೆಗೆ ಬಿಟ್ಟುಕೊಡಲಾಯಿತು. ಜೊತೆಗೆ ಉಪ್ಪಿನಂಗಡಿಯ ಒಳಚರಂಡಿ ವ್ಯವಸ್ಥೆಯ ಅವ್ಯವಸ್ಥೆಗೆ ಕಾರಣವಾಗಿದ್ದ ಹೆದ್ದಾರಿ ಸಂಪರ್ಕ ರಸ್ತೆಯಲ್ಲಿನ ಕಿರಿದಾದ ಮೋರಿಯನ್ನು ತೆರವುಗೊಳಿಸಿ ಬೃಹತ್ ಚರಂಡಿ ನಿರ್ಮಾಣಕ್ಕೂ ಚಾಲನೆ ನೀಡಲಾಗಿದೆ.