ಕೆಪಿಎ- ಪೋಸ್ಟಲ್‌ ತರಬೇತಿ ಸಂಸ್ಥೆ ನಡುವೆ ಒಡಂಬಡಿಕೆಗೆ ಸಹಿ

KannadaprabhaNewsNetwork |  
Published : Jul 20, 2025, 01:17 AM IST
46 | Kannada Prabha

ಸಾರಾಂಶ

ಸಂಶೋಧನೆ ಮತ್ತು ಅಭಿವೃದ್ಧಿ ಕುರಿತಂತೆ ಹೆಚ್ಚಿನ ಮಾಹಿತಿ ಹಾಗೂ ಜ್ಞಾನ ಪಡೆದು, ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ರಾಜ್ಯದ ಪೊಲೀಸ್ ಅಧಿಕಾರಿಗಳ ತರಬೇತಿ ಸಂಸ್ಥೆಯಾದ ಕರ್ನಾಟಕ ಪೊಲೀಸ್‌ ಅಕಾಡೆಮಿ (ಕೆಪಿಎ) ಮತ್ತು ಪೋಸ್ಟಲ್‌ ತರಬೇತಿ ಸಂಸ್ಥೆ ನಡುವೆ ತರಬೇತಿ, ಸಂಪನ್ಮೂಲ ವ್ಯಕ್ತಿಗಳ ವಿನಿಮಯ ಹಾಗೂ ನವೀನ ಮಾದರಿಯ ಕೋರ್ಸ್ ಗಳನ್ನು ಅಭಿವೃದ್ಧಿಪಡಿಸುವ ವಿಷಯಗಳಿಗೆ ಸಂಬಂಧಿಸಿದಂತೆ ಒಡಂಬಡಿಕೆಗೆ ಶನಿವಾರ ಸಹಿ ಹಾಕಿ ವಿನಿಮಯ ಮಾಡಿಕೊಳ್ಳಲಾಯಿತು.

ಈ ಒಡಂಬಡಿಕೆಯ ಭಾಗವಾಗಿ ಮೈಸೂರಿನ ಎರಡೂ ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಅಧಿಕಾರಿಗಳು, ಎರಡೂ ಇಲಾಖೆಗಳಿಗೆ ಸಂಬಂಧಪಟ್ಟ ವಿಷಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಜ್ಞಾನ ಪಡೆಯುವುದ ಅಲ್ಲದೇ, ಸದರಿ ವಿಷಯಗಳಲ್ಲಾಗುವ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತಂತೆ ಹೆಚ್ಚಿನ ಮಾಹಿತಿ ಹಾಗೂ ಜ್ಞಾನ ಪಡೆದು, ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

ಅಂಚೆ ಇಲಾಖೆಯ ಅಧಿಕಾರಿಗಳು, ಪೊಲೀಸ್ ಇಲಾಖೆಗೆ ಸಂಬಂಧಿಸಿದ ಸೈಬರ್ ಭದ್ರತೆ, ಬೆರಳಚ್ಚು ಹಾಗೂ ಮಾದಕ ವಸ್ತುಗಳ ಸಾಗಾಣಿಕೆ ವಿಷಯಗಳ ಬಗ್ಗೆ ತಿಳಿದುಕೊಂಡರೆ, ಪೊಲೀಸ್‌ ಇಲಾಖೆಯ ಅಧಿಕಾರಿಗಳು ಅಂಚೆ ಇಲಾಖೆಗೆ ಸಂಬಂದಿಸಿದ ಸಣ್ಣ ಹೂಡಿಕೆ ಅವಕಾಶಗಳು, ಹಣಕಾಸು ನಿರ್ವಹಣೆ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ವಿಷಯಗಳ ಮೇಲೆ ಪರಿಣಿತಿ ಹೊಂದಬಹುದಾಗಿದೆ.

ಈ ಒಡಂಬಡಿಕೆ ಸಹಿ ಹಾಕಿದ ಅಂಚೆ ತರಬೇತಿ ಸಂಸ್ಥೆಯ ನಿರ್ದೇಶಕ ಡಾ. ಆಶಿಶ್ ಸಿಂಗ್ ಠಾಕೂರ್ ಮಾತನಾಡಿ, ಇದೊಂದು ಹೆಮ್ಮೆಯ ಕ್ಷಣವಾಗಿದ್ದು, ಎರಡೂ ಸಂಸ್ಥೆಗಳ ಅಧಿಕಾರಿಗಳಿಗೆ ಜ್ಞಾನ ಮತ್ತು ಅನುಭವದ ವಿನಿಮಯವಾಗಿ, ಅವರ ಕಾರ್ಯ ಕ್ಷೇತ್ರದಲ್ಲಿ ಮೌಲ್ಯವರ್ಧನೆಯಾಗಲಿದೆ ಎಂದು ತಿಳಿಸಿದರು.

ಕರ್ನಾಟಕ ಪೊಲೀಸ್‌ ಅಕಾಡೆಮಿ ನಿರ್ದೇಶಕ ಎಸ್.ಎಲ್. ಚೆನ್ನಬಸವಣ್ಣ ಮಾತನಾಡಿ, ಈ ಎರಡು ಐತಿಹಾಸಿಕ ಸಂಸ್ಥೆಗಳ ನಡುವಿನ ಒಡಂಬಡಿಕೆ ಬಹಳ ವಿಶೇಷವಾದದ್ದು. ಈ ಎರಡು ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಮುಂದಿನ ಪೀಳಿಗೆಯ ಅಧಿಕಾರಿಗಳಿಗೆ ಹಾಗೂ ಅವರ ಮೂಲಕ ಸಮಾಜಕ್ಕೆ ಉತ್ತಮ ಸೇವೆ ಕೊಡುವುದಕ್ಕೆ ಈ ಒಡಂಬಡಿಕೆ ನಾಂದಿಯಾಗಲಿದೆ. ಎರಡೂ ಸಂಸ್ಥೆಗಳು ತಮ್ಮಲ್ಲಿರುವ ಉತ್ತಮ ಅಭ್ಯಾಸಗಳ್ಳನ್ನು ಹಂಚಿಕೊಳ್ಳುವುದರ ಮೂಲಕ ಪರಸ್ಪರ ಅಭಿವೃದ್ಧಿಗೆ ಶ್ರಮಿಸಲಿವೆ ಎಂದು ಹೇಳಿದರು.

ಕೆಪಿಎ ಸಹಾಯಕ ನಿರ್ದೇಶಕರಾದ ಎಚ್.ಎಸ್. ರೇಣುಕಾರಾಧ್ಯ, ಎನ್. ಸುದರ್ಶನ, ಎಸ್. ವೆಂಕಟೇಶ್‌, ಎಂ. ಕ್ರಾಂತಿರಾಜ್‌ ಒಡೆಯರ್, ಅಂಚೆ ತರಬೇತಿ ಸಂಸ್ಥೆಯ ಸಹಾಯಕ ನಿರ್ದೇಶಕರಾದ ಬಾಲರಾಜ್, ಶ್ರೀಧರ್, ಶ್ರದ್ಧಾ ವಿ. ಗೋಕರ್ಣ, ಕೆ. ಮಂಜುನಾಥ ರಾವ್ ಮೊದಲಾದವರು ಇದ್ದರು.

PREV

Latest Stories

ನ್ಯಾಯಾಂಗದ ಸ್ವಾತಂತ್ರ್ಯ ರಕ್ಷಣೆಗೆ ಕ್ರಮ : ನ್ಯಾ.ವಿಭು
ಕೃಷ್ಣಾ ಮೇಲ್ದಂಡೆ-3 ಭೂಸ್ವಾಧೀನಕ್ಕೆ 2.01 ಲಕ್ಷ ಕೋಟಿ ಬೇಕು : ಸಚಿವ ಕೃಷ್ಣ
ನಮ್ಮ ಗ್ಯಾರಂಟಿ ಯೋಜನೆ ದೇಶಕ್ಕೇ ಮಾದರಿ - ಟೀಕಿಸಿದ್ದ ಬಿಜೆಪಿಯೇ ಕಾಪಿ ಮಾಡಿದೆ : ಡಿಸಿಎಂ ಡಿಕೆಶಿ