ಸಿದ್ದಾಪುರ: ವೈದ್ಯಕೀಯ ವೃತ್ತಿ ಉದ್ದಿಮೆಯಲ್ಲ. ಅದು ಸೇವೆ. ಶತ್ರು, ಮಿತ್ರ, ಜಾತಿ, ಮತ, ಶ್ರೀಮಂತ, ಬಡವ ಯಾವ ಬೇಧವೂ ವೈದ್ಯರುಗಳಿಗೆ ಇರುವುದಿಲ್ಲ ಎಂದು ವೈದ್ಯ ಡಾ.ಶ್ರೀಧರ ವೈದ್ಯ ಹೇಳಿದರು.
ಮತ್ತೊರ್ವ ಜನಪ್ರಿಯ ವೈದ್ಯ ಡಾ.ಎಸ್.ಆರ್.ಹೆಗಡೆ ಮಾತನಾಡಿ, ಸಾರ್ವಜನಿಕರ ಸಹಕಾರ, ಬೆಂಬಲ ವೈದ್ಯರಿಗೆ ದೊರೆಯಬೇಕು ಎಂದರು. ಡಾ.ರೂಪಾ ಭಟ್ಟ ಮಾತನಾಡಿ, ವೈದ್ಯರು ಚಿಕಿತ್ಸಕರೇ ಹೊರತು ದೇವರಲ್ಲ. ಹಣಕ್ಕಿಂತ ಆರೋಗ್ಯ ಮುಖ್ಯ. ಸಾರ್ವಜನಿಕರು ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳಬೇಕು ಎಂದರು. ಡಾ. ಲೋಕೇಶ ವೈ.ಆರ್., ಡಾ. ರವಿರಾಜ ಶೇಟ, ಜಿ.ಜಿ.ಹೆಗಡೆ ಬಾಳಗೋಡ ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ ಮಾತನಾಡಿ, ವೈದ್ಯರು ಸಮಾಜಕ್ಕೆ ನೀಡುವ ಕೊಡುಗೆಯನ್ನು ಗುರುತಿಸುವುದು ಮುಖ್ಯ.ಸಹಸ್ರಾರು ರೋಗಿಗಳಿಗೆ ಚಿಕಿತ್ಸೆ ನೀಡಿ ಪುರ್ನಜನ್ಮ ಕಲ್ಪಿಸುವ ಬಹುದೊಡ್ಡ ವೃತ್ತಿ ವೈದ್ಯಕೀಯ ಸೇವೆ ಎಂದರು.ಲಯನ್ಸ ಕ್ಲಬ್ ಅಧ್ಯಕ್ಷ ರಾಘವೇಂದ್ರ ಭಟ್ಟ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಡಾ.ಎಸ್.ಆರ್.ಹೆಗಡೆ, ಡಾ.ಶ್ರೀಧರ ವೈದ್ಯ, ಡಾ.ಲೋಕೇಶ ವೈ.ಆರ್., ಡಾ.ರೂಪಾ ಭಟ್ಟ, ಡಾ.ರವಿರಾಜ ಶೇಟ ಹಾಗೂ ಗೌರವ ಡಾಕ್ಟರೇಟ್ ಪಡೆದ ಜಿ.ಜಿ. ಹೆಗಡೆ ಬಾಳಗೋಡ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಎನ್.ವಿ. ಹೆಗಡೆ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಕಾರ್ಯದರ್ಶಿ ಆಕಾಶ ಹೆಗಡೆ ನಿರೂಪಿಸಿದರು. ಅರ್ಚನಾ ಹೆಗಡೆ ಪ್ರಾರ್ಥಿಸಿದರು. ಲಯನ್ಸ ಕ್ಲಬ್ ಖಜಾಂಚಿ ಐ.ಕೆ.ಪಾಟೀಲ ವಂದಿಸಿದರು.