ಹಳಿಯಾಳ: ತಾಲೂಕಿನಲ್ಲಿ ಸರ್ಕಾರದ ಭೂಮಿಯ ಅತಿಕ್ರಮಣ ನಿರಾತಂಕವಾಗಿ ನಡೆದಿರುವ ಬಗ್ಗೆ ದೂರುಗಳು ಬರುತ್ತಿವೆ. ಅತಿಕ್ರಮಣ ಅಧಿಕಾರಿಗಳು ತಡೆಯಬೇಕು. ಇಲ್ಲವಾದಲ್ಲಿ ಅಧಿಕಾರಿಗಳ ತಲೆದಂಡ ನಿಶ್ಚಿತ ಎಂದು ಶಾಸಕ ಆರ್.ವಿ.ದೇಶಪಾಂಡೆ ಎಚ್ಚರಿಸಿದ್ದಾರೆ.
ತಾಲೂಕಾಡಳಿತ ಸೌಧದಲ್ಲಿ ನಡೆದ ಹಳಿಯಾಳ-ದಾಂಡೇಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಳೆ-ಬೆಳೆ ಪರಿಸ್ಥಿತಿಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸರ್ಕಾರದ ಜಮೀನು ಸಂರಕ್ಷಿಸದಿದ್ದರೆ ಹೇಗೆ? ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ಹೀಗೆ ನಿರ್ಲಕ್ಷ್ಯ ತೋರುವುದನ್ನು ನಾನು ಇಷ್ಟಪಡುವುದಿಲ್ಲ. ಸರ್ಕಾರ ನಿಗದಿ ಪಡಿಸಿದ ಅವದಿಯಲ್ಲಿ ಅತಿಕ್ರಮಣ ಮಾಡಿದವರಿಗೆ ನಾನು ಕೈ ಹಚ್ಚಲು ಬಿಡುವುದಿಲ್ಲ. ಆದರೆ ಹೊಸ ಅತಿಕ್ರಮಣ ಮಾಡಲು ಅವಕಾಶ ನೀಡಲಾರೆನು ಎಂದರು.
ಗ್ರಾಮಾಂತರ ಭಾಗದಲ್ಲಿ ಅವ್ಯಾಹತವಾಗಿ ಕಂದಾಯ ಜಮೀನು, ಗಾಂವಠಾಣ ಜಮೀನು ಅತಿಕ್ರಮಣ ನಡೆದರೂ ಅಧಿಕಾರಿಗಳು, ಪಿಡಿಒಗಳು ಕಣ್ಮುಚ್ಚಿಕೊಂಡಿರುವುದು ಅನುಮಾನ ಸಂದೇಹಗಳಿಗೆ ದಾರಿ ಮಾಡಿಕೊಡುತ್ತದೆ. ಪೊಲೀಸ್ ಇಲಾಖೆಯ ನೆರವು ಪಡೆದು ಮೊದಲು ಅತಿಕ್ರಮಣ ತೆರವುಗೊಳಿಸಿ, ಇನ್ನು ಮುಂದೆ ಹೀಗೆಯೇ ಅತಿಕ್ರಮಣ ಮುಂದುವರಿದರೆ ಆ ಗ್ರಾಮದ ಪಿಡಿಒಗಳನ್ನೇ ಜವಾಬ್ದಾರನ್ನಾಗಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ತಿಳಿಸುತ್ತೇನೆ ಎಂದರು.ಅಭಿವೃದ್ಧಿ ಕಾಮಗಾರಿಗಾಗಿ ಅನುದಾನ ಬಳಸಿ, ಕಡಿಮೆ ಬಿದ್ದರೆ ನನ್ನ ಗಮನಕ್ಕೆ ತನ್ನಿ, ಅದನ್ನು ಬಿಟ್ಟು ಕಾಮಗಾರಿ ಮಾಡದೇ ಹಣ ಬಳಸಿದರೆ ಅವರ ತಲೆದಂಡ ನಿಶ್ಚಿತ ಎಂದು ತಾಕೀತು ಮಾಡಿದರು.
ಅಧಿಕಾರಿಗಳು ಆಸಕ್ತಿ ವಹಿಸಿ ಕೆಲಸ ಮಾಡಬೇಕು. ನಾನು ಹೇಳಿದ ಮೇಲೆ ಕೆಲಸ ಮಾಡಿದರೆ ಪ್ರಯೋಜವೇನು? ನಿಮ್ಮಲ್ಲಿ ಕ್ರಿಯಾಶೀಲತೆ ಸಮರ್ಪಣಾ ಮನೋಭಾವ ಇರಬೇಕು. ಆಗ ಮಾತ್ರ ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯ ಎಂದರು.ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಐ. ಮಾನೆ ಹಳಿಯಾಳ ಮತ್ತು ದಾಂಡೇಲಿ ತಾಲೂಕಿನ ಮಳೆಯ ಮಾಹಿತಿ ನೀಡಿ, ಹಳಿಯಾಳ ತಾಲೂಕಿನಲ್ಲಿ ವಾಡಿಕೆಗಿಂತ ಶೇ.17 ಮಳೆಯ ಕಡಿಮೆಯಾಗಿದೆ. ಇನ್ನು ದಾಂಡೇಲಿಯಲ್ಲಿ ವಾಡಿಕೆಗಿಂದ ಶೇ.2 ಹೆಚ್ಚುವರಿ ಮಳೆಯಾಗಿದೆ. ಹಳಿಯಾಳ ತಾಲೂಕಿನಲ್ಲಿ ಕಬ್ಬಿನ ಬಿತ್ತನೆ ಪ್ರದೇಶ ಹೆಚ್ಚಾಗಿದೆ. ಕಬ್ಬು ಉತ್ತಮ ಸ್ಥಿತಿಯಲ್ಲಿ, ಎರಡನೇ ಸ್ಥಾನದಲ್ಲಿ ಭತ್ತ ಇದ್ದು, ಅದಕ್ಕೆ ಇನ್ನು ಮಳೆಯಾಗಬೇಕಾಗಿದೆ ಎಂದರು.
ಬಿತ್ತನೆ ಬೀಜದ ಕೊರತೆಯಾಗಿಲ್ಲ. ಯೂರಿಯಾ ಗೊಬ್ಬರದ ಬಳಕೆ ಕಡಿಮೆ ಮಾಡುವಂತೆ ರೈತರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಹಿರಿಯಾಲ ಹಳಿಯಾಳ ದಾಂಡೇಲಿ ತಾಲೂಕಿನ ತೋಟಗಾರಿಕಾ ಬೆಳೆಗಳ ಪರಿಸ್ಥಿತಿಯ ಮಾಹಿತಿ ನೀಡಿದರು.
ಸಭೆಯಲ್ಲಿ ಲೋಕೋಪಯೋಗಿ, ಜಿಪಂ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ, ಒಳಚರಂಡಿ ಇಲಾಖೆ, ಹಳಿಯಾಳ ಮತ್ತು ದಾಂಡೇಲಿ ತಾಲೂಕು ಪೌರ ಸಂಸ್ಥೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಿಡಿಪಿಒ ಇಲಾಖೆ ತಮ್ಮ ಇಲಾಖೆಯ ಮಾಹಿತಿ ನೀಡಿದರು.ತಹಸೀಲ್ದಾರ ಪ್ರವೀಣ ಹುಚ್ಚಣ್ಣನವರ, ದಾಂಡೇಲಿ ತಹಸೀಲದಾರ ಶೈಲೇಶ ಪರಮಾನಂದ, ಹಳಿಯಾಳ ಇಒ ವಿಲಾಸರಾಜ, ಹಳಿಯಾಳ- ದಾಂಡೇಲಿ ತಾಲೂಕು ಅಧಿಕಾರಿಗಳು, ಪಿಡಿಒಗಳು ಇದ್ದರು.