ಆರ್‌ಟಿಐ ದ್ವಿತೀಯ ಮೇಲ್ಮನವಿ: ಜಿಲ್ಲೆಯಲ್ಲಿ 559 ಪ್ರಕರಣ

KannadaprabhaNewsNetwork |  
Published : Jul 20, 2025, 01:17 AM IST
ಕ್ಯಾಪ್ಷನ19ಕೆಡಿವಿಜಿ32, 33 ದಾವಣಗೆರೆಯಲ್ಲಿ ಮಾಹಿತಿ ಹಕ್ಕು ಆಯೋಗ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಮತ್ತು ರಾಜಶೇಖರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಮಾಹಿತಿ ಹಕ್ಕು ಕಾಯಿದೆಯಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಳ, ಹೊಣೆಗಾರಿಕೆ, ಭ್ರಷ್ಟಾಚಾರ ತಡೆ ಸೇರಿದಂತೆ ಆಡಳಿತದಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸಲು ಬಹಳ ಉಪಯೋಗವಾಗಿದೆ. ಆರ್.ಟಿ.ಐ. ಕಾಯಿದೆಯಡಿ ಸಲ್ಲಿಕೆಯಾಗುವ 2ನೇ ಮೇಲ್ಮನವಿ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಲು ಮಾಹಿತಿ ಹಕ್ಕು ಆಯೋಗ ಮುಂದಾಗಿದೆ. ನವೆಂಬರ್ ವೇಳೆಗೆ ಜಿಲ್ಲಾ ಹಂತದಲ್ಲಿ ಕಲಾಪ ನಡೆಸುವ ಮೂಲಕ ಅದಾಲತ್ ಮಾದರಿಯಲ್ಲಿ ಪ್ರಕರಣಗಳನ್ನು ಶೀಘ್ರ ಇತ್ಯರ್ಥಕ್ಕೆ ಕ್ರಮವಹಿಸಲಾಗುತ್ತದೆ ಎಂದು ಮಾಹಿತಿ ಹಕ್ಕು ಆಯೋಗ ಆಯುಕ್ತ ರುದ್ರಣ್ಣ ಹರ್ತಿಕೋಟೆ ಹೇಳಿದ್ದಾರೆ.

- ಮಾಹಿತಿ ಹಕ್ಕು ಆಯೋಗದಿಂದ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ನವೆಂಬರ್‌ನಲ್ಲಿ ಅದಾಲತ್ ಮಾದರಿ ಕಲಾಪ

- ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸಲು ಕ್ರಮ: ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ರಾಜಶೇಖರ್ ಹೇಳಿಕೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಹಿತಿ ಹಕ್ಕು ಕಾಯಿದೆಯಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಳ, ಹೊಣೆಗಾರಿಕೆ, ಭ್ರಷ್ಟಾಚಾರ ತಡೆ ಸೇರಿದಂತೆ ಆಡಳಿತದಲ್ಲಿ ಸಾರ್ವಜನಿಕರ ಸಹಭಾಗಿತ್ವವನ್ನು ಹೆಚ್ಚಿಸಲು ಬಹಳ ಉಪಯೋಗವಾಗಿದೆ. ಆರ್.ಟಿ.ಐ. ಕಾಯಿದೆಯಡಿ ಸಲ್ಲಿಕೆಯಾಗುವ 2ನೇ ಮೇಲ್ಮನವಿ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಲು ಮಾಹಿತಿ ಹಕ್ಕು ಆಯೋಗ ಮುಂದಾಗಿದೆ. ನವೆಂಬರ್ ವೇಳೆಗೆ ಜಿಲ್ಲಾ ಹಂತದಲ್ಲಿ ಕಲಾಪ ನಡೆಸುವ ಮೂಲಕ ಅದಾಲತ್ ಮಾದರಿಯಲ್ಲಿ ಪ್ರಕರಣಗಳನ್ನು ಶೀಘ್ರ ಇತ್ಯರ್ಥಕ್ಕೆ ಕ್ರಮವಹಿಸಲಾಗುತ್ತದೆ ಎಂದು ಮಾಹಿತಿ ಹಕ್ಕು ಆಯೋಗ ಆಯುಕ್ತ ರುದ್ರಣ್ಣ ಹರ್ತಿಕೋಟೆ ಹೇಳಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲೆಯಲ್ಲಿನ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಮೊದಲ ಮೇಲ್ಮನವಿ ಪ್ರಾಧಿಕಾರಗಳಿಗೆ ಏರ್ಪಡಿಸಲಾದ ತರಬೇತಿ ಕಾರ್ಯಾಗಾರ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯ ಮಾಹಿತಿ ಹಕ್ಕು ಆಯೋಗದಲ್ಲಿ 10 ಆಯುಕ್ತರು, ಒಬ್ಬರು ಮುಖ್ಯ ಆಯುಕ್ತರು ಇರುತ್ತಾರೆ. ರಾಜ್ಯದಲ್ಲಿ ಎರಡನೇ ಮೇಲ್ಮನವಿಗೆ ಸಂಬಂಧಿಸಿದ 56 ಸಾವಿರ ಪ್ರಕರಣಗಳಿದ್ದು, ಸತತ ಕಲಾಪಗಳನ್ನು ನಡೆಸುವ ಮೂಲಕ ಇವುಗಳನ್ನು 46446ಕ್ಕೆ ಇಳಿಕೆ ಮಾಡಲಾಗಿದೆ. ಹೆಚ್ಚು ಪ್ರಕರಣಗಳು ಬೆಂಗಳೂರು ನಗರ ಜಿಲ್ಲೆಯಲ್ಲಿ 11428 ಇದ್ದರೆ, ಅತಿ ಕಡಿಮೆ ಪ್ರಕರಣಗಳು ಕೊಡಗು ಜಿಲ್ಲೆಯಲ್ಲಿ 75 ಪ್ರಕರಣಗಳಿವೆ. ದಾವಣಗೆರೆಯಲ್ಲಿ 559 ದ್ವಿತೀಯ ಮೇಲ್ಮನವಿ ಪ್ರಕರಣಗಳಿದ್ದು, ಕಡಿಮೆ ಇರುವ ಜಿಲ್ಲೆಗಳಲ್ಲಿ 6ನೇ ಸ್ಥಾನದಲ್ಲಿದೆ ಎಂದರು.

ಮಾಹಿತಿ ಹಕ್ಕು ಕಾಯಿದೆಯಡಿ ಸಲ್ಲಿಸುವ ಅರ್ಜಿಗಳಿಗೆ ಲಭ್ಯವಿರುವ ದಾಖಲೆಗಳನ್ನು ಒದಗಿಸಬೇಕು. ಆರ್‌ಟಿಐನಡಿ ಸಲ್ಲಿಸುವ ಅರ್ಜಿಗಳನ್ನು ತಗ್ಗಿಸಲು 4(1) ಎ.ಬಿ. ಘೋಷಣೆಯನ್ನು ಮಾಡಿಕೊಳ್ಳಬೇಕು. ಯೋಜನೆಗಳ ಮಾಹಿತಿ ಸ್ವಯಂಪ್ರೇರಿತವಾಗಿ ಪ್ರದರ್ಶನ ಮಾಡಿಕೊಂಡಲ್ಲಿ ಅರ್ಜಿಗಳ ಸಂಖ್ಯೆ ಕಡಿಮೆಯಾಗಲಿದೆ. ಕಾಯಿದೆಯಡಿ ನಿಗದಿ ಮಾಡಿದ ಸಮಯದಲ್ಲಿಯೇ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಅದಕ್ಕೆ ಸಂಬಂಧಿಸಿದ ಹಿಂಬರಹ ನೀಡಬೇಕು. ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ನೀಡದಿದ್ದಲ್ಲಿ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಇಲ್ಲಿಯೂ ಸರಿಯಾದ ನ್ಯಾಯ ಸಿಗದಿದ್ದಲ್ಲಿ ಎರಡನೇ ಮೇಲ್ಮನವಿ ಪ್ರಾಧಿಕಾರವಾದ ಮಾಹಿತಿ ಹಕ್ಕು ರಾಜ್ಯ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಬೇಕು ಎಂದರು.

ಎರಡನೇ ಮೇಲ್ಮನವಿ ಪ್ರಾಧಿಕಾರಕ್ಕೆ ಹೆಚ್ಚು ಪ್ರಕರಣಗಳು ಬಾರದಿರಲು ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ ತರಬೇತಿ ಮೂಲಕ ಜಾಗೃತಿ ಮೂಡಿಸುವ ಮೂಲಕ ಪ್ರಕರಣಗಳನ್ನು ಗಣನೀಯವಾಗಿ ತಗ್ಗಿಸಬೇಕೆಂಬ ಉದ್ದೇಶ ಆಯೋಗ ಹೊಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅದಾಲತ್ ಮಾದರಿಯಲ್ಲಿ ಆಯಾ ಜಿಲ್ಲೆಗಳಲ್ಲಿ ಆಯೋಗ ಕಲಾಪ ನಡೆಸುವ ಮೂಲಕ ಇಲಾಖೆ ಅಧಿಕಾರಿಗಳಿಗೆ ಮತ್ತು ಅರ್ಜಿದಾರರಿಗೆ ಅನುಕೂಲ ಮಾಡಿಕೊಡಲು ಉದ್ದೇಶಿಸಲಾಗಿದೆ ಎಂದರು.

ಮಾಹಿತಿ ಹಕ್ಕು ಆಯೋಗ ಆಯುಕ್ತ ರಾಜಶೇಖರ್ ಮಾತನಾಡಿ, ಮಾಹಿತಿ ಹಕ್ಕು ಕಾಯಿದೆ ಎರಡನೇ ಸ್ವಾತಂತ್ರ್ಯ ಹಕ್ಕು ಎಂದರೆ ತಪ್ಪಾಗಲಾರದು. ಕಾಯಿದೆ ಬರುವುದಕ್ಕೂ ಮುಂಚೆ ಜನಸಾಮಾನ್ಯರಿಗೆ ಅಫಿಶಿಯಲ್ ಸೀಕ್ರೆಸಿ ಕಾಯಿದೆ ಅನ್ವಯ ಕೇಳಿದ ಮಾಹಿತಿ ನೀಡಲಾಗುತ್ತಿರಲಿಲ್ಲ. ಮಾಹಿತಿ ಹಕ್ಕು ಕಾಯಿದೆ ಬಂದಾಗಿನಿಂದ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಳ ಮತ್ತು ಆಡಳಿತದಲ್ಲಿ ಶಿಸ್ತು ಮೂಡಿದೆ. ಆದರೆ, ಕೆಲವರು ಮಾಹಿತಿ ಕೇಳುವುದನ್ನು ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಮಾಹಿತಿ ಹಕ್ಕು ಕಾಯಿದೆಯಡಿ ಪಡೆಯುವ ದಾಖಲೆಗಳು ಸಾರ್ವಜನಿಕ ಹಿತಾಸಕ್ತಿ ಮತ್ತು ಸ್ವಹಿತಾಸಕ್ತಿಯಿಂದ ಕೂಡಿರಬೇಕು, ಆದರೆ ಅವ್ಯವಹಾರಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.

ಮಾಹಿತಿ ಹಕ್ಕು ಕಾಯಿದೆಯಡಿ ಕೇವಲ 30 ಸೆಕ್ಷನ್‌ಗಳಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾಗಿ ಅರ್ಥಮಾಡಿಕೊಂಡು ಅನುಷ್ಠಾನ ಮಾಡಬೇಕು. ಯಾವುದೇ ವೇದಿಕೆ, ಸಮಿತಿ ಎಂಬ ಹೆಸರಿನಲ್ಲಿ ಕಾಯಿದೆ ಹೆಸರು ಇರುವಂತಿಲ್ಲ ಮತ್ತು ಇದರ ಲಾಂಛನ ದುರ್ಬಳಕೆ ಮಾಡಿಕೊಳ್ಳುವಂತಿಲ್ಲ. ಒಂದೇ ಮಾಹಿತಿಗೆ ಸಂಬಂಧಿಸಿದಂತೆ ಎರಡನೇ ಮೇಲ್ಮನವಿ ಪ್ರಾಧಿಕಾರಕ್ಕೆ ಹಲವು ಅರ್ಜಿ ಸಲ್ಲಿಸಿದವರನ್ನು ಕಪ್ಪುಪಟ್ಟಿಗೆ ಸೇರಿಸಲು ಆಯೋಗ ಪರಿಶೀಲಿಸಲಿದೆ. ಅವರು ಮಾಹಿತಿ ಹಕ್ಕು ಕಾಯಿದೆಯನ್ನು ದುರ್ಬಳಕೆ ಮಾಡಿಕೊಂಡಲ್ಲಿ ಅಂತಹ ಅರ್ಜಿದಾರರನ್ನು ನಿರ್ಬಂಧಿಸಲಾಗುತ್ತದೆ. ಇಲ್ಲಿಯವರೆಗೆ ಆಯೋಗ 26 ಅರ್ಜಿದಾರರ ಮೇಲೆ ನಿರ್ಬಂಧ ಹಾಕಲಾಗಿದೆ ಎಂದರು.

ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ನೀಡದ ಅಧಿಕಾರಿಗಳಿಗೆ ದಿನಕ್ಕೆ ₹250 ರಂತೆ ಗರಿಷ್ಠ ₹25000 ವರೆಗೆ ದಂಡ ವಿಧಿಸಲು ಮತ್ತು ಅರ್ಜಿದಾರರಿಗೆ ಪರಿಹಾರ ನೀಡಲು ಗರಿಷ್ಠ ₹1 ಲಕ್ಷದವರೆಗೆ ಮತ್ತು ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವ ಅಧಿಕಾರ ಆಯೋಗಕ್ಕಿದೆ ಎಂದರು.

ಆರ್.ಟಿ.ಐ. ಪ್ರಗತಿಯನ್ನು ಕೆಡಿಪಿ ಸಭೆಯಲ್ಲಿ ಪರಿಶೀಲಿಸಲು ಸರ್ಕಾರಕ್ಕೆ ಆಯೋಗ ಶಿಫಾರಸು ಮಾಡಿದೆ. ಈಗಿರುವ ಅರ್ಜಿ ಶುಲ್ಕ, ಮಾಹಿತಿ ಶುಲ್ಕ, ಸಿಡಿಯಲ್ಲಿ ಹಾಕಿ ನೀಡುವ, ಭೌತಿಕವಾಗಿ ಪರಿಶೀಲಿಸುವ ಅವಧಿಯ ಶುಲ್ಕ ಪರಿಶೀಲನೆಗೆ ವಿಜಯಭಾಸ್ಕರ್ ಆಡಳಿತ ಸುಧಾರಣಾ ಆಯೋಗದಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ವಿವಿಧ ಇಲಾಖೆಗಳಿಗೆ ಸಲ್ಲಿಕೆ ಆಗುವ ಮಾಹಿತಿ ಹಕ್ಕು ಕಾಯಿದೆ ಅರ್ಜಿಗಳ ಸಂಖ್ಯೆ ಕಡಿಮೆ ಮಾಡುವುದು ಗುರಿಯಾಗಿದೆ. ಎರಡನೇ ಮೇಲ್ಮನವಿ ಅರ್ಜಿಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಎರಡನೇ ಮೇಲ್ಮನವಿ ಅರ್ಜಿಗಳ ವಿವರ:

ಕಂದಾಯ ಇಲಾಖೆ 161, ಪಂಚಾಯತ್ ರಾಜ್ ಇಲಾಖೆ 90, ನಗರಾಭಿವೃದ್ದಿ ಇಲಾಖೆ 75, ಜಲಸಂಪನ್ಮೂಲ 53, ಲೋಕೋಪಯೋಗಿ ಇಲಾಖೆ 35, ಶಿಕ್ಷಣ ಇಲಾಖೆ 31, ಸಮಾಜ ಕಲ್ಯಾಣ 30, ಗೃಹ ಇಲಾಖೆ 13, ಅಲ್ಪಸಂಖ್ಯಾತರ ಇಲಾಖೆ 11, ಅರಣ್ಯ ಇಲಾಖೆ 11, ಆರೋಗ್ಯ 10, ಇಂಧನ 9, ಸಹಕಾರ 8, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ 7, ಕೈಗಾರಿಕೆ ಮತ್ತು ವಾಣಿಜ್ಯ 4, ಕೃಷಿ 2, ಸಾರಿಗೆ 2, ವಸತಿ 2 ಸೇರಿ ಇತರೆ 5 ಅರ್ಜಿಗಳು ಬಾಕಿ ಇವೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಗಿಟ್ಟೆ ಮಾಧವ ವಿಠ್ಠಲ ರಾವ್ ಉಪಸ್ಥಿತರಿದ್ದರು.

- - -

-19ಕೆಡಿವಿಜಿ32, 33.ಜೆಪಿಜಿ:

ದಾವಣಗೆರೆಯಲ್ಲಿ ಮಾಹಿತಿ ಹಕ್ಕು ಆಯೋಗ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ ಮತ್ತು ರಾಜಶೇಖರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

PREV

Latest Stories

ಧರ್ಮಸ್ಥಳ ಗ್ರಾಮ ಕೇಸ್‌: ಇಬ್ಬರು ಐಪಿಎಸ್‌ಗಳು ಎಸ್‌ಐಟಿಯಿಂದ ಔಟ್‌?
ಡಿಕೆಶಿಗೆ ಅಪಮಾನ ಮಾಡುವುದಕ್ಕೆ ಸಿಎಂ ಸಿದ್ದು ಸಮಾವೇಶ: ಅಶೋಕ
ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ