ಕನ್ನಡಪ್ರಭ ವಾರ್ತೆ ಮಂಗಳೂರು/ಬೆಳ್ತಂಗಡಿ
ಕಂಬಳ ಕ್ರೀಡೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಬೆಂಗಳೂರು ಕಂಬಳ ಸ್ಪರ್ಧೆಯ ನೇಗಿಲು ಹಿರಿಯ ವಿಭಾಗದಲ್ಲಿ ಮಲೆಕುಡಿಯರ ಕೋಣಗಳು ಪ್ರಥಮ ಸ್ಥಾನ ಗೆದ್ದುಕೊಂಡು ಗಮನ ಸೆಳೆದಿವೆ.ಬೆಳ್ತಂಗಡಿ ತಾಲೂಕಿನ ದಿಡುಪೆಯ ಪರಂಬೇರಿನ ನಾರಾಯಣ ಮಲೆಕುಡಿಯ ಅವರ ಮಾಲೀಕತ್ವದ ‘ಗುಂಡ’ ಮತ್ತು ‘ದಾಸ’ ಕೋಣಗಳು ಈ ಸಾಧನೆ ಮಾಡಿವೆ. ಈ ಮೂಲಕ ಆದಿವಾಸಿ ಜನಾಂಗವು ಕಂಬಳ ಕ್ರೀಡೆಯಲ್ಲೂ ಛಾಪು ಮೂಡಿಸಿದಂತಾಗಿದೆ. ಧನಂಜಯ ಗೌಡ ಸರಪಾಡಿ ಕೋಣಗಳನ್ನು ಓಡಿಸಿ ಗಮನ ಸೆಳೆದರು.ಸೆಮಿಫೈನಲ್‌ನಲ್ಲಿ ಬೋಳದಗುತ್ತು ಮತ್ತು ನಾರಾಯಣ ಮಲೆಕುಡಿಯರ ಕೋಣಗಳು ಸ್ಪರ್ಧೆಗಿಳಿದಿದ್ದವು. ನಂತರ ನಡೆದ ಫೈನಲ್ ಪಂದ್ಯದಲ್ಲಿ ನಾರಾಯಣ ಮಲೆಕುಡಿಯರ ಕೋಣಗಳು ವಿಜಯ ಸಾಧಿಸಿ ಬೀಗಿದವು.ವಿಜೇತ ನಾರಾಯಣ ಮಲೆಕುಡಿಯರ ಕೋಣಗಳು ಒಂದು ಲಕ್ಷ ರು. ನಗದು, 16 ಗ್ರಾಂ ಚಿನ್ನವನ್ನು ತನ್ನದಾಗಿಸಿಕೊಂಡಿವೆ. ಸೋಮವಾರ ಸಂಜೆ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ಸೇರಿದಂತೆ ಗಣ್ಯರು ಬಹುಮಾನ ವಿತರಿಸಿದರು. ಈ ವೇಳೆ ಇಡೀ ತಂಡ ಸಂಭ್ರಮಪಟ್ಟಿತು. ಮಂಗಳೂರಿನ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಈ ಕಂಬಳ ತಂಡ ಕಟ್ಟುವಲ್ಲಿ ಶ್ರಮಿಸಿದ್ದರು.ತವರಿನಲ್ಲಿ ಅದ್ಧೂರಿ ಸ್ವಾಗತ: ಬೆಂಗಳೂರಿನಲ್ಲಿ ಜರಗಿದ ಕಂಬಳದ ನೇಗಿಲ ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ದಿಡುಪೆಯ ಬಂಗಾಡಿ ಪರಂಬೇರು ನಾರಾಯಣ ಮಲೆಕುಡಿಯರ ಕೋಣಗಳಿಗೆ ಮುಂಡಾಜೆಯ ಸೋಮಂತಡ್ಕ ಹಾಗೂ ದಿಡುಪೆಯಲ್ಲಿ ಅದ್ದೂರಿ ಸ್ವಾಗತ ಮಾಡಲಾಯಿತು.ಉತ್ತಮ ಸಾಧನೆ ಮಾಡಿದ ಗುಂಡ ಮತ್ತು ಉಮಾನಾಥ ಕೋಟ್ಯಾನ್ ಬಿಳಿಯೂರು ಅವರ ದಾಸ ಕೋಣಗಳು ಬೆಂಗಳೂರಿನಿಂದ ಬೇಲೂರು, ಚಾರ್ಮಾಡಿ ಮೂಲಕ ಸೋಮವಾರ ಸಂಜೆ ಆಗಮಿಸಿದವು.ಮುಂಡಾಜೆಯ ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಮುಂಭಾಗದಲ್ಲಿ ಕೋಣಗಳ ಯಜಮಾನರನ್ನು ಅಭಿನಂದಿಸಲಾಯಿತು. ಬಳಿಕ ನಾಸಿಕ್ ಬ್ಯಾಂಡ್, ಸುಡುಮದ್ದು ಇತ್ಯಾದಿಗಳೊಂದಿಗೆ ಭವ್ಯ ವಾಹನ ಮೆರವಣಿಗೆಯಲ್ಲಿ ಕೋಣಗಳು ದಿಡುಪೆಯತ್ತ ಸಾಗಿದವು. ಕೋಣಗಳ ಯಜಮಾನರು ಹಾಗೂ ಟ್ರೋಫಿಯನ್ನು ತೆರೆದ ಜೀಪಿನಲ್ಲಿ ಕೊಂಡೊಯ್ಯಲಾಯಿತು.ಈ ವೇಳೆ ಮಾತನಾಡಿದ ಕೋಣಗಳ ಯಜಮಾನ ನಾರಾಯಣ ಮಲೆಕುಡಿಯ ‘ಕಳೆದ 45 ವರ್ಷಗಳಿಂದ ಕೋಣಗಳನ್ನು ಸಾಕುತ್ತಿದ್ದೇವೆ. ನಾವು ಸಾಕಿರುವ ಕೋಣಗಳು ಇದುವರೆಗೆ ಜಿಲ್ಲಾಮಟ್ಟದಲ್ಲಿ ಮಾತ್ರ ಪದಕ ಗಳಿಸಿದ್ದವು. ಆದರೆ ಇದೀಗ ಬೆಂಗಳೂರಿನಲ್ಲಿ ಪದಕ ಗೆದ್ದು ಬಂದ ನಮ್ಮ ಕೋಣಗಳು ದೇಶವೇ ಗುರುತಿಸುವಂತಹ ಸಾಧನೆ ಮಾಡಿವೆ. ಇದು ನಮ್ಮ ತಾಲೂಕಿಗೆ, ಊರಿಗೆ,ನಮ್ಮ ಸಮಾಜಕ್ಕೆ ಹೆಮ್ಮೆತರುವ ವಿಚಾರವಾಗಿದೆ. 20 ಜನರಿರುವ ನಮ್ಮದು ಅವಿಭಕ್ತ ಕುಟುಂಬವಾಗಿದ್ದು ಕೋಣಗಳ ಲಾಲನೆ ಪಾಲನೆಗೆ ಪ್ರತಿಯೊಬ್ಬರು ಕೈಜೋಡಿಸುತ್ತಾರೆ ಹಾಗೂ ಅಪಾರ ಪ್ರೀತಿಯನ್ನು ಹೊಂದಿದ್ದಾರೆ. ಈ ಬಾರಿ ಕೋಣಗಳಿಗೆ ಬಜಗೋಳಿಯ ಮೀಯಾರಿನಲ್ಲಿ ಅಭ್ಯಾಸ ಮಾಡಿಸಲಾಯಿತು’ ಎಂದರು.ಮಲವಂತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ ಎಳನೀರು, ಕಡಿರುದ್ಯಾವರ ಗ್ರಾಪಂ ಮಾಜಿ ಅಧ್ಯಕ್ಷ ಅಶೋಕ್ ಕುಮಾರ್, ಯಂಗ್ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಸಂಚಾಲಕ ನಾಮದೇವರಾವ್ ಮಾತನಾಡಿ ‘ಅತ್ಯದ್ಭುತ ಸಾಧನೆ ಮಾಡಿದ ಕೋಣಗಳು ಯಜಮಾನರು ಹಾಗೂ ಕೋಣಗಳನ್ನು ಓಡಿಸಿ ಪದಕ ಗೆಲ್ಲಲು ಕಾರಣರಾದ ಧನಂಜಯ ಗೌಡ ಅವರ ಅವಿರತ ಶ್ರಮ ಶ್ಲಾಘನೀಯ. ದಿಡುಪೆಯಂತಹ ಊರು ರಾಜ್ಯಮಟ್ಟದಲ್ಲಿ ಕಂಬಳ ಮೂಲಕ ತನ್ನ ಛಾಪನ್ನು ಮೂಡಿಸಿದೆ ಹಳ್ಳಿಗಳಲ್ಲೂ ಇರುವ ಎಲೆಯ ಮರೆಯ ಕಾಯಿಗಳು ಇಂದು ಎಲ್ಲರೂ ಗುರುತಿಸುವಂತಾಗಿದೆ’ ಎಂದರು.ಮಲವಂತಿಗೆ ಗ್ರಾಪಂ ಮಾಜಿ ಉಪಾಧ್ಯಕ್ಷ ದಿನೇಶ ಗೌಡ, ಕೇಶವ ಎಂ.ಕೆ, ಪದ್ಮ ಮಲೆಕುಡಿಯ,ಸಮಾಜ ಸೇವಕ ಸಚಿನ್ ಭಿಡೆ, ತೀಕ್ಷಿತ್ ದಿಡುಪೆ ಸೇರಿದಂತೆ ಸುಮಾರು 400 ಕ್ಕಿಂತ ಅಧಿಕ ಮಂದಿ ಉಪಸ್ಥಿತರಿದ್ದರು.