ಕೆಮ್ಮಣ್ಣು ಗುಂಡಿಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆ

KannadaprabhaNewsNetwork | Published : Jun 20, 2024 1:18 AM

ಸಾರಾಂಶ

ತರೀಕೆರೆಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಕಾರಿ ಸಮಿತಿ ಸಭೆ ಸಮೀಪದ ಕೆಮ್ಮಣ್ಣು ಗುಂಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ, ತರೀಕೆರೆ

ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಕಾರ್ಯಕಾರಿ ಸಮಿತಿ ಸಭೆ ಸಮೀಪದ ಕೆಮ್ಮಣ್ಣು ಗುಂಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷ ಬಿ.ಎಂ.ಪಟೇಲ್ ಪಾಂಡು, ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ನೇ.ಭ.ರಾಮಲಿಂಗ ಶೆಟ್ಟಿ, ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿ ಶ್ರೀನಿವಾಸ್ ಹಾಗೂ ವಿವಿಧ ಜಿಲ್ಲೆಗಳ ಜಿಲ್ಲಾಧ್ಯಕ್ಷರು, ಗಡಿ ಘಟಕದ ಅಧ್ಯಕ್ಷರು, ನಾಮ ನಿರ್ದೇಶಿತ ಸದಸ್ಯರು ಭಾಗವಹಿಸಿದ್ದರು. ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷರು ತಮ್ಮ ಇತ್ತೀಚಿನ ಅಮೆರಿಕಾ ಪ್ರವಾಸ ಕುರಿತು ವಿವರವಾಗಿ ತಿಳಿಸಿ ಕ್ಯಾಲಿಪೋರ್ನಿಯಾದ ಸನ್ನಿವೇಲ್ ನಗರದ ಉಪ ಮೇಯರ್ ಕನ್ನಡಿಗರಾದ ಮುರುಳಿ ಶ್ರೀನಿವಾಸ್ ರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದನ್ನು ಇದೇ ರೀತಿಯಲ್ಲಿ ಕುಪರ್ಟಿನೋದ ಮೇಯರ್ ಮತ್ತು ಸರ್ ಎಂ.ವಿಶ್ವೇಶ್ವರಯ್ಯನವರ ಮೊಮ್ಮಗಳಾದ ಶೀಲಾ ಮೊಹನ್ ರನ್ನು ಭೇಟಿ ಮಾಡಿದ್ದನ್ನು ಉಭಯ ಗಣ್ಯರನ್ನು ಮಂಡ್ಯದಲ್ಲಿ ನಡೆಯುವ 87ನೆಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿದ್ದನ್ನು ತಿಳಿಸಿದರು. ಸಭೆಯ ಎಲ್ಲಾ ಸದಸ್ಯರು ಇದಕ್ಕೆ ಸಂತೋಷ ವ್ಯಕ್ತ ಪಡಿಸಿದರು. ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ಅಲ್ಲಿನ ಕನ್ನಡಿಗರ ಸಹಯೋಗದಲ್ಲಿ ಈಗಾಗಲೇ ಚರ್ಚಿತವಾಗಿರುವ ಸಮಾವೇಶ ನಡೆಸುವ ಕುರಿತು ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆಯಾಯಿತು. ಭಾಗವಹಿಸಿದ ಬಹುತೇಕ ಸದಸ್ಯರು ಇದಕ್ಕೆ ತಮ್ಮ ಬಹುಮತದಿಂದ ತಮ್ಮ ಸಮ್ಮತಿ ಸೂಚಿಸಿದರು. ಈಗಾಗಲೇ ಮಂಡ್ಯದಲ್ಲಿ ಆಯೋಜಿಸಿರುವ 87ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅತಿ ಶೀಘ್ರವಾಗಿ ಏರ್ಪಡಿಸಬೇಕೆಂದು, ಈ ಕುರಿತು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ದಿನಾಂಕ ನಿಗದಿಗೊಳಿಸ ಬೇಕೆಂದು ಸಮ್ಮೇಳನದಲ್ಲಿ ನಿರ್ದೇರಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಪ್ರಕ್ರಿಯೆಗಳಲ್ಲಿ ಆಗ ಬೇಕಾದ ತಿದ್ದುಪಡಿ ಕುರಿತು ಕಾರ್ಯಕಾರಿ ಸಮಿತಿಯಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ತರೀಕೆರೆ ಶಾಸಕ ಜಿ. ಎಚ್. ಶ್ರೀನಿವಾಸ್ ರನ್ನು ಅಭಿನಂದಿಸಲಾಯಿತು. ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು ತಾಲೂಕುಗಳ ಅಧ್ಯಕ್ಷರು ಭಾಗವಹಿಸಿದ್ದರು.

19ಕೆಟಿಆರ್.ಕೆ.2ಃ

ತರೀಕೆರೆ ಸಮೀಪದ ಕೆಮ್ಮಣ್ಣುಗುಂಡಿಯಲ್ಲಿ ಏರ್ಪಡಿಸಿದ್ದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಮಾತನಾಡಿದರು.

Share this article