ಖರೀದಿ ಮೋಸಗಳ ವಿರುದ್ಧ ಗ್ರಾಹಕರ ಹಕ್ಕು ಚಲಾಯಿಸಿ: ಗಂಗಾಧರ ಸ್ವಾಮಿ

KannadaprabhaNewsNetwork | Published : Mar 26, 2025 1:32 AM

ಸಾರಾಂಶ

ಗ್ರಾಹಕರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದರ ಜೊತೆಗೆ ತೊಂದರೆಗಳಾದಲ್ಲಿ ಸಂಬಂಧಿಸಿದ ಪ್ರಾಧಿಕಾರಗಳಲ್ಲಿ ನಿಯಮಾನುಸಾರ ದೂರು ಸಲ್ಲಿಸಿ, ಪರಿಹಾರ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.

- ಎಂಎಸ್‌ಬಿ ಕಾಲೇಜು ಸಭಾಂಗಣದಲ್ಲಿ ವಿಶ್ವ ಗ್ರಾಹಕರ ದಿನಾಚರಣೆ

- - - ದಾವಣಗೆರೆ: ಗ್ರಾಹಕರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದರ ಜೊತೆಗೆ ತೊಂದರೆಗಳಾದಲ್ಲಿ ಸಂಬಂಧಿಸಿದ ಪ್ರಾಧಿಕಾರಗಳಲ್ಲಿ ನಿಯಮಾನುಸಾರ ದೂರು ಸಲ್ಲಿಸಿ, ಪರಿಹಾರ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ನಗರದ ಎಂಎಸ್‌ಬಿ ಕಲಾ ಮತ್ತು ವಾಣಿಜ್ಯ ಮಹಾ ವಿದ್ಯಾಲಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ ವಿಶ್ವ ಗ್ರಾಹಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಗುಣಮಟ್ಟ ಮತ್ತು ನಿಖರ ಪ್ರಮಾಣ ಪರಿಶೀಲಿಸಿ, ಖರೀದಿಸಲು ಹಾಗೂ ಪೆಟ್ರೋಲ್ ಬಂಕ್‌ಗಳಲ್ಲಿ ಲೋಪದೋಷಗಳಿದ್ದಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಗ್ರಾಹಕ ಸಂರಕ್ಷಣಾ ಕಾಯಿದೆ ಬಗ್ಗೆ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾದ ಸಹಾಯಕ ಪ್ರಾಧ್ಯಾಪಕ ಡಾ.ವೆಂಕಟೇಶ್ ಬಾಬು ಈ ಸಾಲಿನ ಘೋಷ ವಾಕ್ಯ “ಸುಸ್ಥಿರ ಜೀವನಶೈಲಿಗೆ ಒಂದು ಸರಳ ಪರಿವರ್ತನೆ” ವಿಷಯದ ಕುರಿತು ದಿನನಿತ್ಯ ಖರೀದಿ ವಸ್ತುಗಳ ಉದಾಹರಣೆಗಳ ಸಮೇತ ಉಪನ್ಯಾಸ ನೀಡಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ತ್ಯಾಗರಾಜನ್ ಅಧ್ಯಕ್ಷತೆ ಕಾರ್ಯಕ್ರಮದಲ್ಲಿ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮಹಿಳಾ ಸದಸ್ಯರಾದ ಬಿ.ವಿ.ಗೀತಾ, ಡಿಸಿಐಸಿ ಪ್ರಾಚಾರ್ಯೆ ಅನಿತಾ, ಪ್ರೊ. ಸಿ.ನೀಲಾಂಬಿಕಾ, ಸಹಾಯಕ ನಿಯಂತ್ರಕರು, ಕಾನೂನು ಮಾಪನಶಾಸ್ತ್ರ ಇಲಾಖೆ ಸಹಾಯಕ ನಿರ್ದೇಶಕರಾದ ವಿಶ್ವನಾಥ ಗೌಡ, ಸಹಾಯಕ ನಿರ್ದೇಶಕ ಟಿ.ಶಿವಾಜಿ, ಆಹಾರ ನಿರೀಕ್ಷಕ ಟಿ.ಮಂಜುನಾಥ ಉಪಸ್ಥಿತರಿದ್ದರು.

- - - -24ಕೆಡಿವಿಜಿ41.ಜೆಪಿಜಿ: ದಾವಣಗೆರೆಯಲ್ಲಿ ನಡೆದ ವಿಶ್ವ ಗ್ರಾಹಕರ ದಿನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಉದ್ಘಾಟಿಸಿದರು.

Share this article