ಬಿಜೆಪಿಯಲ್ಲಿ ಉತ್ತರ ಕನ್ನಡ ಟಿಕೆಟ್‌ಗಾಗಿ ಕಸರತ್ತು, ಭಾರೀ ಪೈಪೋಟಿ

KannadaprabhaNewsNetwork |  
Published : Jan 29, 2024, 01:32 AM IST
1 | Kannada Prabha

ಸಾರಾಂಶ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಅನಂತಕುಮಾರ ಹೆಗಡೆ ಟಿಕೆಟ್ ನೀಡಿಕೆ ಅನಿಶ್ಚಿತವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ಮುಂದುವರಿದಿದೆ.

ಕಾರವಾರ:

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಅನಂತಕುಮಾರ ಹೆಗಡೆ ಟಿಕೆಟ್ ನೀಡಿಕೆ ಅನಿಶ್ಚಿತವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ಮುಂದುವರಿದಿದೆ.

ಜಿಲ್ಲಾಮಟ್ಟದಿಂದ ದೆಹಲಿ ತನಕ ಟಿಕೆಟ್ ಆಕಾಂಕ್ಷಿಗಳ ಲಾಬಿ ನಡೆಸುತ್ತಿದ್ದಾರೆ. ಒಂದೆಡೆ ಹಾಲಿ ಸಂಸದ ಅನಂತಕುಮಾರ ಹೆಗಡೆ ತೀರ ಈಚೆಗೆ ಜಿಲ್ಲೆಯಾದ್ಯಂತ ತಿರುಗಾಟ ಆರಂಭಿಸಿದ್ದಾರೆ. ಎಂದಿನ ಶೈಲಿಯಲ್ಲಿ ಹಿಂದೂ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಶತಾಯಗತಾಯ ಟಿಕೆಟ್ ಪಡೆಯಬೇಕೆಂದು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಇನ್ನೊಂದೆಡೆ ವಿಶ್ವೇಶ್ವರ ಹೆಗಡೆ ಕಾಗೇರಿ, ರೂಪಾಲಿ ನಾಯ್ಕ, ಡಾ. ಜಿ.ಜಿ. ಹೆಗಡೆ, ಅನಂತಮೂರ್ತಿ ಹೆಗಡೆ, ನಾಗರಾಜ ನಾಯಕ, ಗೋವಿಂದ ನಾಯ್ಕ ಸೇರಿದಂತೆ ಹಲವರು ಟಿಕೆಟ್‌ಗಾಗಿ ಪ್ರಯತ್ನ ಮುಂದುವರಿಸಿದ್ದಾರೆ.ಅಚ್ಚರಿಯ ಸಂಗತಿ ಎಂದರೆ ಟಿಕೆಟ್‌ಗಾಗಿ ಪ್ರಯತ್ನ ನಡೆಸುತ್ತಿರುವವರೆಲ್ಲ ಬಿಜೆಪಿಯ ಒಬ್ಬರು, ಇಬ್ಬರು ಮುಖಂಡರು ಹಾಗೂ ಆರ್‌ಎಸ್‌ಎಸ್‌ ನವರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾರೆ. ಅವರೆಲ್ಲ ಆಕಾಂಕ್ಷಿಗಳಿಗೆ ನಿಮಗೆ ಟಿಕೆಟ್ ಸಿಗಲಿದೆ ಎಂದು ಭರವಸೆ ನೀಡುತ್ತಿದ್ದಾರೆ. ಅದನ್ನೇ ನಂಬಿಕೊಂಡು ಬಹುತೇಕ ಆಕಾಂಕ್ಷಿಗಳು ತಮಗೆ ಟಿಕೆಟ್ ಫೈನಲ್ ಆಗಿದೆ ಎಂದು ಆತ್ಮವಿಶ್ವಾಸದಿಂದ ಆತ್ಮೀಯರಲ್ಲಿ ಹೇಳಿಕೊಳ್ಳುತ್ತಿದ್ದಾರೆ.ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಆಗಿರುವುದರಿಂದ ಬಿಜೆಪಿಯತ್ತ ಹಾಗೂ ನರೇಂದ್ರ ಮೋದಿ ನಾಯಕತ್ವಕ್ಕೆ ಜನತೆ ಇನ್ನಷ್ಟು ಆಕರ್ಷಿತರಾಗಿದ್ದಾರೆಂಬ ಅಭಿಪ್ರಾಯ, ಪ್ರತಿಪಕ್ಷಗಳ ಒಕ್ಕೂಟವಾದ ಐಎನ್‌ಡಿಐಎ ಛಿದ್ರವಾಗುತ್ತಿರುವುದು, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸತತವಾಗಿ ಆಯ್ಕೆಯಾಗುತ್ತಿರುವುದರಿಂದ ಟಿಕೆಟ್ ಸಿಕ್ಕರೆ ಸಾಕು ಬಿಜೆಪಿಯಿಂದ ಸಲೀಸಾಗಿ ಗೆಲ್ಲಬಹುದು ಎಂಬ ಭಾವನೆ ಟಿಕೆಟ್ ಆಕಾಂಕ್ಷಿಗಳದ್ದು. ಅದೇ ಕಾರಣಕ್ಕೆ ಹೇಗಾದರೂ ಮಾಡಿ ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಟಕೆಟ್‌ಗಾಗಿ ಇಷ್ಟೊಂದು ಆಕಾಂಕ್ಷಿಗಳು ಪ್ರಯತ್ನಕ್ಕಿಳಿದಿರುವುದು ಕೆಲವು ಕಾರ್ಯಕರ್ತರಲ್ಲೂ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷದ ಸಂಘಟನೆ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಿಂಚಿತ್ತೂ ದುಡಿಯದೆ ಇರುವವರು, ಪಕ್ಷಕ್ಕಾಗಿ ಏನನ್ನೂ ಮಾಡದವರು ಚುನಾವಣೆ ಬರುತ್ತಿದ್ದಂತೆ ಟಿಕೆಟ್ ಗಾಗಿ ಮುಗಿಬೀಳುತ್ತಾರೆ. ಪಕ್ಷದ ಸಂಘಟನೆ ಮಾಡುವ ಮೂಲಕ ಪಕ್ಷಕ್ಕೆ ಕೊಡುಗೆ ನೀಡಿ ಟಿಕೆಟ್‌ಗಾಗಿ ಪ್ರಯತ್ನಿಸಿದರೆ ಅದು ಎಲ್ಲರೂ ಒಪ್ಪತಕ್ಕ ಮಾತು ಎನ್ನುವುದು ಬಿಜೆಪಿಯ ಕೆಲವು ಕಾರ್ಯಕರ್ತರ ಅಂಬೋಣ.ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಪಾಳೆಯದಲ್ಲಿ ಟಿಕೆಟ್‌ಗಾಗಿ ಅಂತಹ ಪೈಪೋಟಿ ಕಾಣಿಸುತ್ತಿಲ್ಲ. ರವೀಂದ್ರ ನಾಯ್ಕ, ಜಿ.ಟಿ. ನಾಯ್ಕ ಹೀಗೆ ಇಬ್ಬರು ಮೂವರ ಹೆಸರು ಮಾತ್ರ ಕೇಳಿಬರುತ್ತಿದೆ. ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೈತ್ರಿ ಏರ್ಪಟ್ಟಿದ್ದು ಉತ್ತರ ಕನ್ನಡ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಲ್ಲಿ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಂಡು ಮಾಜಿ ಸಚಿವ ಆನಂದ ಅಸ್ನೋಟಿಕರ್ ಪ್ರಯತ್ನಿಸುತ್ತಿದ್ದರೂ ಬಿಜೆಪಿ ಬಲಿಷ್ಠವಾಗಿರುವ ಈ ಕ್ಷೇತ್ರದಲ್ಲಿ ಅವರ ಪ್ರಯತ್ನಕ್ಕೆ ಫಲ ದೊರೆಯುವ ಸಾಧ್ಯತೆ ಇಲ್ಲ. ಈ ನಡುವೆ ಬಿಜೆಪಿಯಲ್ಲಿ ಸ್ಪರ್ಧೆಗೆ ಕ್ಷೇತ್ರಕ್ಕೆ ಹೊರತಾದ ವ್ಯಕ್ತಿಗಳ ಹೆಸರನ್ನೂ ತೇಲಿಬಿಡಲಾಗಿದೆ. ಏನೇ ಆದರೂ ಈ ಬಾರಿ ಬಿಜೆಪಿಯಲ್ಲಿ ಟಿಕೆಟ್ ಯಾರಿಗೆ ಎನ್ನುವುದೇ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

PREV

Recommended Stories

ರಾಹುಲ್‌ ಗಾಂಧಿ ಧರಣಿಗೆ 4500 ಪೊಲೀಸರ ಭದ್ರತೆ
ಹಳಿತಪ್ಪಿದ ಬೆಂಗಳೂರು ಉಪನಗರ ರೈಲು ಯೋಜನೆ : ಕೆ-ರೈಡ್ ಜತೆಗಿನ ಎಲ್‌ ಆ್ಯಂಡ್‌ ಟಿ ಗುತ್ತಿಗೆ ರದ್ದು