7ರಿಂದ ಚರಕ ಸಹಕಾರ ಸಂಘದಿಂದ ಪ್ರದರ್ಶನ, ಮಾರಾಟ ಮೇಳ

KannadaprabhaNewsNetwork | Published : Mar 4, 2025 12:30 AM

ಸಾರಾಂಶ

ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಮಾ.7ರಿಂದ 9ರ ವರೆಗೆ ಬೆಳಗ್ಗೆ 10ರಿಂದ ರಾತ್ರಿ 8.30ರ ವರೆಗೆ ನಗರದ ಎಂಜಿಎಂ ಕಾಲೇಜಿನಲ್ಲಿ ‘ಪ್ರದರ್ಶನ ಮತ್ತು ಮಾರಾಟ ಮೇಳ’ವನ್ನು ಆಯೋಜಿಸಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಮಾ.7ರಿಂದ 9ರ ವರೆಗೆ ಬೆಳಗ್ಗೆ 10ರಿಂದ ರಾತ್ರಿ 8.30ರ ವರೆಗೆ ನಗರದ ಎಂಜಿಎಂ ಕಾಲೇಜಿನಲ್ಲಿ ‘ಪ್ರದರ್ಶನ ಮತ್ತು ಮಾರಾಟ ಮೇಳ’ವನ್ನು ಆಯೋಜಿಸಿದೆ.ಸಂಸ್ಥೆಯ ಮಾರುಕಟ್ಟೆ ಮತ್ತು ವಿನ್ಯಾಸ ವಿಭಾಗ ವ್ಯವಸ್ಥಾಪಕಿ ಪದ್ಮಶ್ರೀ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.ಮಾ.7ರಂದು ಮಧ್ಯಾಹ್ನ 12.30ಕ್ಕೆ ಉಡುಪಿಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥರು ಚಾಲನೆ ನೀಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ್ ಅಭ್ಯಾಗತರಾಗಲಿದ್ದು, ಚರಕದ ಅಧ್ಯಕ್ಷೆ ಮಹಾಲಕ್ಷ್ಮೀ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.ಮೇಳದಲ್ಲಿ 10 ಮಳಿಗೆಗಳು ಇರಲಿದ್ದು, ಚರಕದ ನೈಸರ್ಗಿಕ ಬಣ್ಣದ ಕೈ ಮಗ್ಗದ ಬಟ್ಟೆಗಳು, ಸಿದ್ಧಉಡುಪುಗಳು, ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟದ ಉತ್ತರ ಕರ್ನಾಟಕ ಭಾಗದ ಅಪರೂಪದ ಸೀರೆಗಳಾದ ಗಾಡಿ ದಡಿ, ಗೋಮಿ ದಡಿ, ಚುಕ್ಕಿ ಪರಸ್, ತೊಡೆ ಪರಸ್, ಕಿನ್ನಾಳ ಸೀರೆಗಳು, ಟವೆಲ್ಸ್, ಬೆಡ್‌ಶೀಟ್‌ಗಳು, ನೇಕಾರರೇ ನೇಯ್ದ ಬೆಂಗಳೂರಿನ ವಿಶುದ್ಧಿಯ ರೇಷ್ಮೆ ಸೀರೆಗಳು, ಟೆರಾಬಾನ್ ಅವರ ಕರಕುಶಲ ಟೆರಾಕೋಟಾ ಮತ್ತು ಮೆಟಲ್ ಆಭರಣಗಳು, ಶಿರಸಿಯ ಚೇತನಾ ಸಂಸ್ಥೆಯ ಬಾಳೆನಾರಿನ ಉತ್ಪನ್ನಗಳು ‘ಮರಳಿ ಮಣ್ಣಿಗೆ’ಯವರ ಮಡಿಕೆ-ಕುಡಿಕೆಗಳು, ಸಾವಯವ ಉತ್ಪನ್ನಗಳು, ಸಿರಿಧಾನ್ಯದಿಂದ ತಯಾರಿಸಿದ ವೈವಿಧ್ಯಮಯ ಆಹಾರ ಉತ್ಪನ್ನಗಳು, ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಸೌಂದರ್ಯವರ್ಧಕಗಳು, ಕಾರ್ಕಳದ ತಪಸ್ ಫುಡ್ಸ್, ಮಖಾನ ಉತ್ಪನ್ನಗಳು, ಪುಸ್ತಕ ಮಳಿಗೆಗಳೂ ಇರಲಿವೆ ಎಂದು ಹೇಳಿದರು.

ಪ್ರಸ್ತುತ ಸ್ಥಳೀಯವಾಗಿ ಸುಮಾರು 350 ಜನ ಹಾಗೂ ರಾಜ್ಯದ ಬೇರೆ, ಬೇರೆ ಜಿಲ್ಲೆಗಳ 400 ಜನ ನೇಕಾರರಿಗೆ, ಒಟ್ಟು 750 ಜನರಿಗೆ ಉದ್ಯೋಗ ನೀಡಿದೆ. ನಮ್ಮ ಉತ್ಪಾದನೆಯ ಪ್ರತಿ ಹಂತದಲ್ಲೂ ಪರಿಸರಕ್ಕೆ ಪೂರಕವಾದ ವಾತಾವರಣ ನಿರ್ಮಿಸಿಕೊಂಡಿದ್ದೇವೆ. ನೇಕಾರಿಕೆಗೆ ಉತ್ತೇಜನ, ಕೈಮಗ್ಗ ಬಟ್ಟೆ ಬಳಕೆ ಹಾಗೂ ನೈಸರ್ಗಿಕ ಬಣ್ಣ ಉಪಯೋಗ- ನಮ್ಮ ಮೂಲ ಧ್ಯೇಯ ಎಂದರು.

Share this article