ದೊಡ್ಡಬಳ್ಳಾಪುರ: ಕರ್ನಾಟಕದಲ್ಲಿ ಎಂಇಎಸ್ ಮತ್ತು ಶಿವಸೇನೆ ನಿಷೇಧಿಸಬೇಕು. ರಾಜ್ಯದಲ್ಲಿ ಕನ್ನಡ ಮಾತನಾಡಿದ ಕೆಎಸ್‌ಆರ್‌ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ನಡೆಸುವ ಮೂಲಕ ಪುಂಡಾಟ ಮೆರೆದ ಮರಾಠಿ ಭಾಷಾಂಧರನ್ನು ಗಡಿಪಾರು ಮಾಡಬೇಕು ಎಂದು ಕನ್ನಡ ಜಾಗೃತಿ ವೇದಿಕೆ ಜಿಲ್ಲಾ ಹಾಗೂ ತಾಲೂಕು ಘಟಕಗಳು ಹಕ್ಕೊತ್ತಾಯ ಮಂಡಿಸಿವೆ.
ಕನ್ನಡ ಜಾಗೃತಿ ವೇದಿಕೆ ಮುಖಂಡ ಅಗ್ನಿ ವೆಂಕಟೇಶ್ ಮಾತನಾಡಿ, ಮರಾಠಿ ಪುಂಡರು ಕರ್ನಾಟಕದ ಅನ್ನ.ನೀರು, ಉದ್ಯೋಗ ಪಡೆದು ಇಲ್ಲೇ ಈ ನೆಲದ ಬಗ್ಗೆ ಅವಹೇಳನ ಮಾಡುವ ಉದ್ದಟತನ ಪ್ರದರ್ಶಿಸುವುದು ಖಂಡನೀಯ. ಕನ್ನಡ ನಾಡಿನಲ್ಲಿ ಬದುಕುವ ಪ್ರತಿಯೊಬ್ಬರು ಕನ್ನಡ ಕಲಿತು ವ್ಯವಹರಿಸುವುದು ಅಗತ್ಯ ಎಂದರು.
ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಎಂ. ನಾಗರಾಜ್ ಮಾತನಾಡಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ. ಮಹಾಜನ್ ವರದಿ ಈ ವಿಚಾರದಲ್ಲಿ ಅಂತಿಮ. ಆದರೆ ಪದೇ ಪದೇ ಗಡಿ ವಿವಾದ ಕೆದಕುತ್ತಾ, ಕನ್ನಡ-ಮರಾಠಿ ಭಾಷಿಕರ ನಡುವೆ ಭಾಷಾ ದ್ವೇಷ ಪ್ರಚೋದಿಸುವ ಕೆಲಸವನ್ನು ಕೆಲ ಕಿಡಿಗೇಡಿಗಳು ಮಾಡುತ್ತಿದ್ದಾರೆ. ಕನ್ನಡ ನೆಲದಲ್ಲಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತರುವ ಪ್ರಯತ್ನ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಹಾರಾಷ್ಟ್ರದಲ್ಲಿ ಅಮಾಯಕ ಕನ್ನಡಿಗರ ಮೇಲೆ ಹಲ್ಲೆ ಮಾಡುವುದು, ಮಸಿ ಬಳಿಯುವುದು ಇತ್ಯಾದಿ ಅಯೋಗ್ಯತನವನ್ನು ಕೆಲ ಕಿಡಿಗೇಡಿಗಳು ನಡೆಸುತ್ತಿದ್ದು, ಅವರ ವಿರುದ್ದ ಅಲ್ಲಿನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ತಪ್ಪಿದಲ್ಲಿ ಪರಿಸ್ಥಿತಿ ಕೈಮೀರುತ್ತದೆ ಎಂದು ಎಚ್ಚರಿಕೆ ನೀಡಿದರು.
ಫೋಟೋ- 1ಕೆಡಿಬಿಪಿ3-