ವಿಮಾನ ನಿಲ್ದಾಣದ ಅಭಿವೃದ್ಧಿಗೆ ಭೂ ಹಸ್ತಾಂತರ ಪ್ರಕ್ರಿಯೆ ತ್ವರಿತಗೊಳಿಸಿ

KannadaprabhaNewsNetwork |  
Published : Jul 17, 2026, 02:45 AM IST
ಸಂಸದ ಜಗದೀಶ ಶೆಟ್ಟರ ಅಧ್ಯಕ್ಷತೆಯಲ್ಲಿ ಬೆಳಗಾವಿ ವಿಮಾನ ನಿಲ್ದಾಣದ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲಿಸಿದರು | Kannada Prabha

ಸಾರಾಂಶ

ಬೆಳಗಾವಿ ವಿಮಾನ ನಿಲ್ದಾಣದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಾಗಿರುವ ಪ್ಯಾರಲಲ್ ಟ್ಯಾಕ್ಸಿ ಟ್ರ್ಯಾಕ್ ನಿರ್ಮಾಣಕ್ಕೆ ಸಂಬಂಧಿಸಿದ ಭೂ ಹಸ್ತಾಂತರ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ವಿಮಾನ ನಿಲ್ದಾಣದ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಾಗಿರುವ ಪ್ಯಾರಲಲ್ ಟ್ಯಾಕ್ಸಿ ಟ್ರ್ಯಾಕ್ ನಿರ್ಮಾಣಕ್ಕೆ ಸಂಬಂಧಿಸಿದ ಭೂ ಹಸ್ತಾಂತರ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಬೆಳಗಾವಿ ಲೋಕಸಭಾ ಸದಸ್ಯ ಜಗದೀಶ ಶೆಟ್ಟರ್ ಸೂಚಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಉಪಸ್ಥಿತಿಯಲ್ಲಿ ಕರ್ನಾಟಕ ವೃತ್ತದ ರಕ್ಷಣಾ ಎಸ್ಟೇಟ್ ಅಧಿಕಾರಿ ದಿವ್ಯಾ ಹೊಸೂರ ಅವರೊಂದಿಗೆ ನಡೆದ ಸಭೆಯಲ್ಲಿ ವಿಮಾನ ನಿಲ್ದಾಣದ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದ ಅವರು, ಬೆಳಗಾವಿ ವಿಮಾನ ನಿಲ್ದಾಣವು ಉತ್ತರ ಕರ್ನಾಟಕದ ಪ್ರಮುಖ ವಿಮಾನ ಸಂಪರ್ಕ ಕೇಂದ್ರವಾಗಿ ಬೆಳೆಯುತ್ತಿದ್ದು, ಪ್ರಯಾಣಿಕರ ಸಂಖ್ಯೆ ಹಾಗೂ ವಿಮಾನ ಸೇವೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಮೂಲಸೌಕರ್ಯವನ್ನು ಕಾಲಕ್ಕೆ ತಕ್ಕಂತೆ ವಿಸ್ತರಿಸುವುದು ಅನಿವಾರ್ಯವಾಗಿದೆ ಎಂದರು.ಈಗಾಗಲೇ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್-2 ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಉತ್ತಮ ಪ್ರಗತಿಯಲ್ಲಿದೆ. ಅದರೊಂದಿಗೆ ವಿಮಾನಗಳ ನೆಲದ ಮೇಲಿನ ಸಂಚಾರವನ್ನು ಸುಗಮಗೊಳಿಸಲು ಹಾಗೂ ರನ್‌ ವೇಯನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಪ್ಯಾರಲಲ್ ಟ್ಯಾಕ್ಸಿ ಟ್ರ್ಯಾಕ್ ನಿರ್ಮಾಣ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.ಈ ಯೋಜನೆಗೆ ವಾಯುಸೇನಾ ಇಲಾಖೆಯ ಅಧೀನದಲ್ಲಿರುವ ಸುಮಾರು 16 ಎಕರೆ ಭೂಮಿಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರಿಸಬೇಕಿದೆ. ಇದಕ್ಕೆ ಪ್ರತಿಯಾಗಿ ಜಿಲ್ಲಾಡಳಿತವು ಸಮಾನ ವಿಸ್ತೀರ್ಣ ಮತ್ತು ಸಮಾನ ಮೌಲ್ಯದ ಜಮೀನನ್ನು ಗುರುತಿಸಿ ವಾಯುಸೇನಾ ಇಲಾಖೆಗೆ ನೀಡಬೇಕಾಗುತ್ತದೆ. ಆದರೆ, ಈ ಭೂ ವಿನಿಮಯ ಪ್ರಕ್ರಿಯೆ ಹಲವು ವರ್ಷಗಳಿಂದ ಬಾಕಿ ಉಳಿದಿರುವುದರಿಂದ ವಿಮಾನ ನಿಲ್ದಾಣದಲ್ಲಿ ಕೈಗೊಳ್ಳಬೇಕಾದ ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿವೆ ಎಂದು ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.ಈ ವಿಳಂಬಕ್ಕೆ ಕಾರಣಗಳೇನು ಎಂಬ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಜಿಲ್ಲಾಡಳಿತ, ರಕ್ಷಣಾ ಎಸ್ಟೇಟ್ ಇಲಾಖೆ ಹಾಗೂ ವಾಯುಸೇನಾ ಇಲಾಖೆ ಪರಸ್ಪರ ಸಮನ್ವಯ ಸಾಧಿಸಿ ಭೂ ಹಸ್ತಾಂತರ ಪ್ರಕ್ರಿಯೆಯನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸುವಂತೆ ಸೂಚಿಸಿದರು.ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಭೂ ವಿನಿಮಯ ಪ್ರಕ್ರಿಯೆಯ ಪ್ರಸ್ತುತ ಹಂತದ ಕುರಿತು ಮಾಹಿತಿ ನೀಡಿದರೆ, ರಕ್ಷಣಾ ಎಸ್ಟೇಟ್ ಇಲಾಖೆ ಹಾಗೂ ವಾಯುಸೇನಾ ಅಧಿಕಾರಿಗಳು ಅಗತ್ಯ ಆಡಳಿತಾತ್ಮಕ ಕ್ರಮಗಳ ಕುರಿತು ಸಭೆಯಲ್ಲಿ ವಿವರಿಸಿದರು.

ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ, ವಿಮಾನ ನಿಲ್ದಾಣ ನಿರ್ದೇಶಕ ತ್ಯಾಗರಾಜನ್, ವಾಯುಸೇನಾ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.ಬೆಳಗಾವಿ ಕೈಗಾರಿಕೆ, ಶಿಕ್ಷಣ, ವಾಣಿಜ್ಯ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಭವಿಷ್ಯದ ಬೇಡಿಕೆಗೆ ಅನುಗುಣವಾಗಿ ವಿಮಾನ ನಿಲ್ದಾಣದ ಸಾಮರ್ಥ್ಯವನ್ನು ವಿಸ್ತರಿಸಬೇಕಾಗಿದೆ. ಪ್ಯಾರಲಲ್ ಟ್ಯಾಕ್ಸಿ ಟ್ರ್ಯಾಕ್ ನಿರ್ಮಾಣವಾದರೆ ವಿಮಾನಗಳ ಸಂಚಾರ ಇನ್ನಷ್ಟು ಸುಗಮವಾಗುವುದರ ಜೊತೆಗೆ ರನ್‌ವೇ ಬಳಕೆಯ ಸಾಮರ್ಥ್ಯ ಹೆಚ್ಚಾಗಿ, ವಿಮಾನಗಳ ವಿಳಂಬ ಕಡಿಮೆಯಾಗಲಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ವಿಮಾನ ಸೇವೆಗಳನ್ನು ಆರಂಭಿಸಲು ಸಹ ಈ ಯೋಜನೆ ನೆರವಾಗಲಿದೆ.

-ಜಗದೀಶ ಶೆಟ್ಟರ್,

ಸಂಸದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಮಿಕಲ್‌ ಮಿಶ್ರಿತ ಹಾಲು ಪೂರೈಕೆ ತಡೆಯಲು ಆಗ್ರಹಿಸಿ ಡಿಸಿಗೆ ಮನವಿ
ಹಾವುಗಳ ಬಗೆಗಿನ ಮೂಢನಂಬಿಕೆ ಬಿಟ್ಟು ರಕ್ಷಣೆ ಮಾಡಿ: ಎಸ್ಪಿ ಲಕ್ಷ್ಮಣ ನಿಂಬರಗಿ