ಮಹದಾಯಿ ಯೋಜನೆ ತ್ವರಿತ ಜಾರಿಗೊಳಿಸಿ

KannadaprabhaNewsNetwork |  
Published : Aug 02, 2026, 02:00 AM IST
ಪ್ರತಿಭಟನಾ ನಿರತ ರೈತರನ್ನು ಪೊಲೀಸರು ಬಂಧಿಸಿದರು. | Kannada Prabha

ಸಾರಾಂಶ

ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ವಿಜಯೋತ್ಸವ ಆಚರಿಸಿದ್ದರು. ಆದರೆ, ಬಳಿಕ ಆ ಯೋಜನೆ ಸಾಕಾರಗೊಳಿಸುವಲ್ಲಿ ವಿಫಲರಾದರು.

ಹುಬ್ಬಳ್ಳಿ:

ಮಹದಾಯಿ, ಕಳಸಾ-ಬಂಡೂರಿ ಯೋಜನೆ ತ್ವರಿತವಾಗಿ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ಕಳಸಾ-ಬಂಡೂರಿ ರೈತ ಹೋರಾಟ ಸಮಿತಿಯಿಂದ ಶನಿವಾರ ನಗರದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕಚೇರಿ ಎದುರು ಪ್ರತಿಭಟಿಸಲಾಯಿತು. ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ 20ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ, ಬಿಡುಗಡೆಗೊಳಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ ಮಾತನಾಡಿ, ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ಉತ್ತರ ಕರ್ನಾಟಕದ ಜನತೆಗೆ ಪದೇ ಪದೇ ಅನ್ಯಾಯವಾಗುತ್ತಿದೆ. 2018ರಲ್ಲಿ ಮಹದಾಯಿ ಜಲವಿವಾದ ನ್ಯಾಯಮಂಡಳಿ ಕರ್ನಾಟಕಕ್ಕೆ 13.5 ಟಿಎಂಸಿ ನೀರನ್ನು ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ- ಧಾರವಾಡ ಹಾಗೂ ಗದಗ ಜಿಲ್ಲೆಗಳ ಕುಡಿಯುವ ನೀರು, ಕೈಗಾರಿಕೆ ಮತ್ತು ಜಾನುವಾರುಗಳ ಅಗತ್ಯಕ್ಕಾಗಿ ಬಳಸಲು ಅನುಮತಿ ನೀಡಿದೆ. ಆ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ವಿಜಯೋತ್ಸವ ಆಚರಿಸಿದ್ದರು. ಆದರೆ, ಬಳಿಕ ಆ ಯೋಜನೆ ಸಾಕಾರಗೊಳಿಸುವಲ್ಲಿ ವಿಫಲರಾದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ನ್ಯಾಯಾಧಿಕರಣದ ಆದೇಶದ ಬಳಿಕ ಯೋಜನೆಗೆ ಸಂಬಂಧಿಸಿದ ಡಿಪಿಆರ್ ಸೇರಿದಂತೆ ಅಗತ್ಯ ದಾಖಲೆ ಸಿದ್ಧಪಿಡಿಸಿದ ರಾಜ್ಯ ಸರ್ಕಾರ, ₹2,000 ಕೋಟಿ ಅನುದಾನ ಘೋಷಿಸಿ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಗೋವಾ ಸರ್ಕಾರ ವನ್ಯಜೀವಿ ಸಂರಕ್ಷಣೆಯ ನೆಪವೊಡ್ಡಿ ಕಾಮಗಾರಿಗೆ ತಡೆ ಕೋರಿ ನ್ಯಾಯಾಲಯದ ಮೊರೆ ಹೋಗಿತ್ತು. ಬಳಿಕ ಹೋರಾಟಗಾರರು ಹಾಗೂ ರೈತರು ನಿರಂತರ ಮನವಿ ಸಲ್ಲಿಸಿದ ಹಿನ್ನೆಲೆ ರಾಜ್ಯ ಸರ್ಕಾರ ಕಾಮಗಾರಿ ಆರಂಭಿಸುವುದಾಗಿ ತಿಳಿಸಿತ್ತು. ಬಂಡೂರಿ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯೂ ಆರಂಭವಾಗಿತ್ತು ಎಂದು ವಿವರಿಸಿದರು.

ಈಚೆಗೆ ನಡೆದ ರಾಷ್ಟ್ರೀಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಕರ್ನಾಟಕದ ಪರವಾಗಿ ನಿರೀಕ್ಷಿತ ಅನುಮೋದನೆ ದೊರೆಯದೆ, ಗೋವಾ ಸರ್ಕಾರದ ಆಕ್ಷೇಪಣೆಗಳಿಗೆ ಮನ್ನಣೆ ನೀಡುವ ರೀತಿಯ ಬೆಳವಣಿಗೆ ನಡೆದಿದೆ. ಈ ಸಂಬಂಧ ಕೇಂದ್ರ ಸರ್ಕಾರ ರಾಜ್ಯಕ್ಕೆ ಪತ್ರ ಬರೆದಿರುವುದು ಉತ್ತರ ಕರ್ನಾಟಕದ ಜನರಿಗೆ ತೀವ್ರ ನಿರಾಸೆ ಉಂಟು ಮಾಡಿದೆ. ಈ ವಿಷಯದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಕ್ಷಣ ಮಧ್ಯಸ್ಥಿಕೆ ವಹಿಸಿ ಯೋಜನೆಗೆ ಎದುರಾಗಿರುವ ಅಡೆತಡೆ ನಿವಾರಿಸಲು ಶ್ರಮಿಸಲಿ. ವಿಳಂಬ ನೀತಿ ತೋರಿದಲ್ಲಿ ಉತ್ತರ ಕರ್ನಾಟಕದಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಸಮಿತಿ ಉಪಾಧ್ಯಕ್ಷ ಬಾಬಾಜಾನ ಮುಧೋಳ, ರವಿರಾಜ ಕಂಬಳಿ, ಹನುಮಂತ ಪವಾಡಿ, ರಮೇಶ ಭೋಸ್ಲೆ, ಬಿ.ಎ. ಮುಧೋಳ, ಒಈರಸಾಬ ನದಾಫ, ಮಹೇಶ ಪತ್ತಾರ, ದೇವೇಂದ್ರಪ್ಪ ಇಟಗಿ, ಯೂಸುಫ್ ಬಳ್ಳಾರಿ ಸೇರಿದಂತೆ ಹಲವರಿದ್ದರು.

ಪ್ರತಿಭಟನಾಕಾರರ ಬಂಧನ

ನಗರದ ಚಿಟಗುಪ್ಪಿ ಆಸ್ಪತ್ರೆ ಪ್ರವೇಶ ದ್ವಾರದಿಂದ ಕೇಂದ್ರ ಸಚಿವರ ಕಚೇರಿ ವರೆಗೆ ರೈತರು ಪ್ರತಿಭಟನೆ ನಡೆಸಿದರು. ಈ ವೇಳೆ ಮನವಿ ಸ್ವೀಕರಿಸಲು ಸಚಿವರ ಕಚೇರಿ ಸಿಬ್ಬಂದಿ ಬಾರದ ಹಿನ್ನಲೆ ರೈತರು ಆಕ್ರೋಶ ವ್ಯಕ್ತಪಡಿಸಿ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕಾರವಾರ ರಸ್ತೆಯಲ್ಲಿರುವ ಸಿಎಆರ್‌ ಮೈದಾನಕ್ಕೆ ಕರೆದುಕೊಂಡು ಹೋಗಿ ಬಿಡುಗಡೆಗೊಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣ ಸಂಸ್ಕೃತಿಯೇ ಕನ್ನಡಿಗರ ಅಸ್ಮಿತೆ: ಡಾ. ನಿಂಗು ಸೊಲಗಿ
ಶರಣ ಸಾಹಿತ್ಯ ಬದುಕಿಗೆ ದಾರಿದೀಪ: ಶಿವಕುಮಾರ ಗೌಡ ಪಾಟೀಲ