ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರನ್ನು ಪಕ್ಷ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲು ಬಿಜೆಪಿ ವರಿಷ್ಠರು ಹಾಗೂ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು ಎಂದು ಹೊನ್ನಾಳಿ ತಾಲೂಕು ಬಿಜೆಪಿ ಮುಖಂಡ ಶಾಂತರಾಜ ಪಾಟೀಲ್ ಒತ್ತಾಯಿಸಿದ್ದಾರೆ.
ದಾವಣಗೆರೆ : ಬಿಜೆಪಿ ಬಣ ಗೊಂದಲಗಳಿಗೆ ಕಾರಣವಾದ, ರಾಜ್ಯ ಬಿಜೆಪಿಗೆ ಕಳಂಕ ತಂದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರನ್ನು ಪಕ್ಷ ಹಾಗೂ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಲು ಬಿಜೆಪಿ ವರಿಷ್ಠರು ಹಾಗೂ ಶಿಸ್ತು ಪಾಲನಾ ಸಮಿತಿ ಅಧ್ಯಕ್ಷರು ಕ್ರಮ ಕೈಗೊಳ್ಳಬೇಕು ಎಂದು ಹೊನ್ನಾಳಿ ತಾಲೂಕು ಬಿಜೆಪಿ ಮುಖಂಡ ಶಾಂತರಾಜ ಪಾಟೀಲ್ ಒತ್ತಾಯಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಇಲ್ಲದ ಎಂ.ಪಿ.ರೇಣುಕಾಚಾರ್ಯ ಶಿಸ್ತಿನ ಪಕ್ಷವನ್ನೇ ಹೈಜಾಕ್ ಮಾಡಲೆತ್ನಿಸುತ್ತಿರುವುದು ಖಂಡನೀಯ. ತಕ್ಷಣವೇ ಇಂತಹವರನ್ನು ಪ್ರಾಥಮಿಕ ಸದಸ್ಯತ್ವ, ಪಕ್ಷದಿಂದ ಉಚ್ಚಾಟಿಸಿ, ಪಕ್ಷದ ಗೌರವ ಉಳಿಸಬೇಕು ಎಂದರು.
ರೇಣುಕಾಚಾರ್ಯ ಮೂರು ಸಲ ಪಕ್ಷದಿಂದ ಶಾಸಕರಾಗಿ ಎಲ್ಲ ಸೌಲಭ್ಯ, ಅವಕಾಶ ಪಡೆದಿದ್ದಾರೆ. ದಾವಣಗೆರೆ ಲೋಕಸಭಾ ಚುನಾವಣೆಯಲ್ಲಿ ನಮ್ಮದೇ ಪಕ್ಷದ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದಾರೆ. ಇಂದು ಜಿಲ್ಲೆ, ರಾಜ್ಯದಲ್ಲಿ ಬಿಜೆಪಿ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಲು ಅವರೇ ಮುಖ್ಯ ಕಾರಣ. 2008ರಲ್ಲಿ ಸುಭದ್ರವಾಗಿದ್ದ ಯಡಿಯೂರಪ್ಪ ಸರ್ಕಾರವನ್ನು ಕೆಡವಲು ರೆಸಾರ್ಟ್ ರಾಜಕಾರಣದ ಮೂಲಕ ಮುನ್ನುಡಿ ಬರೆದಿದ್ದೇ ರೇಣುಕಾಚಾರ್ಯ ಎಂದು ಆರೋಪಿಸಿದರು.
ಬೆಂಗಳೂರಿನ ಬಿಜೆಪಿ ಕಾರ್ಯಾಲಯ, ಜಗನ್ನಾಥ ಭವನದಲ್ಲಿ ಈಚೆಗೆ ಸುನಿಲಕುಮಾರ ಇತರರು ಸಭೆ ಮಾಡುತ್ತಿದ್ದರೆ, ಸಭೆಗೆ ಹೋಗದೇ, ಮಾಧ್ಯಮಗಳ ಬಳಿ ಮಾತನಾಡಿದ ರೇಣುಕಾಚಾರ್ಯ, ತಾವೂ 125 ಜನರನ್ನು ಸೇರಿಸಿ, ಸಭೆ ಮಾಡುವುದಾಗಿ ಹೇಳಿ ಮತ್ತಷ್ಟು ಗೊಂದಲ ಹೆಚ್ಚಿಸಿದರು. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ರಮೇಶ ಜಾರಕಿಹೊಳಿ, ಬಿ.ಪಿ.ಹರೀಶ, ಚಿಕ್ಕಬುಳ್ಳಾಪುರ ಸಂಸದ ಡಾ.ಸುಧಾಕರ, ಕುಮಾರ ಬಂಗಾರಪ್ಪಇತರರ ಬಗ್ಗೆ ಹಗುರ ಹೇಳಿಕೆ ನೀಡಿ, ಪಕ್ಷ ಮತ್ತಷ್ಟು ಮುಜುಗರಕ್ಕೀಡಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಹೊನ್ನಾಳಿ ಪುರಸಭೆಯಲ್ಲಿ ಉಪಾಧ್ಯಕ್ಷ ಸ್ಥಾನ ಬಿಜೆಪಿ ಕೈತಪ್ಪಲು ರೇಣುಕಾಚಾರ್ಯ ಕಾರಣ. ಬಾಕಿ ಬಿಲ್ ಮಂಜೂರು ಮಾಡಿಸಿಕೊಳ್ಳಲು ಬಹುಮತವಿದ್ದರೂ ಬಿಜೆಪಿಗೆ ಅಲ್ಲಿ ಉಪಾಧ್ಯಕ್ಷ ಸ್ಥಾನ ಕೈತಪ್ಪಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಸ್ವತಃ ಕಾಂಗ್ರೆಸ್ಸಿನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ರೇಣುಕಾಚಾರ್ಯ ಅವರನ್ನು ಸೇರಿಸಲ್ಲವೆಂದು ಮಾಧ್ಯಮಗಳ ಮುಂದೆಯೇ ಹೇಳಿದ್ದರು. ಇಂತಹ ರೇಣುಕಾಚಾರ್ಯಗೆ ಬಿಜೆಪಿಯಿಂದ ಉಚ್ಚಾಟಿಸದಿದ್ದರೆ ಪಕ್ಷಕ್ಕೆ ಸಂಕಷ್ಟ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು.
ಪಕ್ಷದ ಮುಖಂಡರಾದ ಎಂ.ಆರ್.ಮಹೇಶ, ಕೆ.ವಿ.ಚನ್ನಪ್ಪ, ಯಕ್ಕನಹಳ್ಳಿ ಜಗದೀಶ, ಅಜಯ್ ರೆಡ್ಡಿ, ಮಾಸಡಿ ಸಿದ್ದೇಶ, ತರಗನಹಳ್ಳಿ ರಾಜಣ್ಣ, ಅವಿನಾಶ ಇತರರು ಇದ್ದರು.