ಇಂದಿನಿಂದ ಮದರ್ಧನಾರೀಶ್ವರ ಜಾತ್ರಾಮಹೋತ್ಸವ

KannadaprabhaNewsNetwork |  
Published : Feb 13, 2025, 12:49 AM IST
ಸಸಸಸಸಸ | Kannada Prabha

ಸಾರಾಂಶ

ಮನುಷ್ಯರನ್ನು ಮನುಷ್ಯರು ಹೊರುವುದು ಹೀನ ಕೆಲಸ ಎಂದು ಪಲ್ಲಕ್ಕಿ ತ್ಯಾಗ ಮಾಡಿ, ಪಲ್ಲಕ್ಕಿ ಮುಂದೆ ಪಾದಚಾರಿಗಳಾಗಿ ಸಾಮಾನ್ಯ ಭಕ್ತರ ಮಧ್ಯೆ ಹೋಗುವುದು ಕೂಡಾ ವಿಶೇಷ

ರಿಯಾಜಅಹ್ಮದ ಎಂ ದೊಡ್ಡಮನಿ ಡಂಬಳ

ಡಂಬಳ ತೋಂಟದಾರ್ಯ ಮಠದ ತೋಂಟದ ಡಾ.ಸಿದ್ಧರಾಮ ಸ್ವಾಮೀಜಿಗಳ ನೇತೃತ್ವದಲ್ಲಿ ಮದರ್ಧನಾರೀಶ್ವರ 285ನೇ ಜಾತ್ರಾಮಹೋತ್ಸವದ ರಥೋತ್ಸವವು ಫೆ.13 ಹಾಗೂ ಲಘು ರಥೋತ್ಸವ ಫೆ.14ರಂದು ವಿಜೃಂಭಣೆಯಿಂದ ನಡೆಯಲಿದೆ.

ಮೌಢ್ಯ, ಅಂಧಕಾರದಲ್ಲಿ ಮುಳುಗಿ ಅಜ್ಞಾನದ ಮಡುವಿನಲ್ಲಿರುವ ಸಮಾಜದ ಕೊಳೆ ತೊಳೆಯುವ ನಿಟ್ಟಿನಲ್ಲಿ ಶ್ರಮಿಸಿದ ಲಿಂ. ತೋಂಟದ ಡಾ. ಸಿದ್ದಲಿಂಗ ಸ್ವಾಮೀಜಿಗಳ ನಂತರ ಅವರ ಹಾದಿಯಲ್ಲಿಯೇ ಸಾಗುತ್ತಿರುವ ಡಾ.ಸಿದ್ಧರಾಮ ಶ್ರೀಗಳು ಜಾತ್ರೆಗೆ ಹೊಸ ಮೆರುಗು ನೀಡುವ ನಿಟ್ಟಿನಲ್ಲಿ ವೈಚಾರಿಕತೆ ತೇರು ಎಳೆಯಲು ಭಕ್ತರಿಗೆ ಅನುಕೂಲ ಕಲ್ಪಿಸಿದ್ದಾರೆ.

ಅಡ್ಡ ಪಲ್ಲಕ್ಕಿ ಇಲ್ಲ: ಲಿಂ. ಡಾ ಸಿದ್ಧಲಿಂಗ ಶ್ರೀಗಳಂತೆ ತೋಂಟದ ಡಾ. ಸಿದ್ಧರಾಮ ಶ್ರೀ ಪೀಠಾರೋಹಣ ಮಾಡಿದ ನಂತರ ಬಸವಣ್ಣವರ ಸಮಾನತೆಯ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಅಡ್ಡಪಲ್ಲಕ್ಕಿಯಲ್ಲಿ ಸ್ವಾಮೀಜಿಗಳು ಮೆರೆಯಬಾರದು, ಮನುಷ್ಯರನ್ನು ಮನುಷ್ಯರು ಹೊರುವುದು ಹೀನ ಕೆಲಸ ಎಂದು ಪಲ್ಲಕ್ಕಿ ತ್ಯಾಗ ಮಾಡಿ, ಪಲ್ಲಕ್ಕಿ ಮುಂದೆ ಪಾದಚಾರಿಗಳಾಗಿ ಸಾಮಾನ್ಯ ಭಕ್ತರ ಮಧ್ಯೆ ಹೋಗುವುದು ಕೂಡಾ ವಿಶೇಷವಾಗಿದೆ.

ಎರಡು ದಿನ ಜಾತ್ರೆ: ಫೆ.13ರ ಸಂಜೆ ಮಘಾ ನಕ್ಷತ್ರದಲ್ಲಿ ತೋಂಟದಾರ್ಯ ಮದರ್ಧನಾರೀಶ್ವರ ತೇರು ಜರುಗಲಿದೆ. ಡಾ. ತೋಂಟದ ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಜಿ.ಎಸ್. ಪಾಟೀಲ, ಕೆಸಿಸಿಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಗ್ರಾಪಂ ಅಧ್ಯಕ್ಷೆ ಶಿವಲೀಲಾ ದೇವಪ್ಪ ಬಂಡಿಹಾಳ ಮುಂತಾದವರು ಪಾಲ್ಗೊಳ್ಳಲಿದ್ದು, ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.

ಲಘು ರಥೋತ್ಸವ: ಫೆ. 14 ರಂದು ಸಂಜೆ 6.30ಕ್ಕೆ ಲಘು ರಥೋತ್ಸವ ಜರುಗಲಿದ್ದು, ಡಾ. ಸಿದ್ಧರಾಮ ಶ್ರೀಗಳು ಸಾನ್ನಿಧ್ಯ ವಹಿಸುವರು. ಮಾಜಿ ಸಚಿವ ಎಸ್.ಎಸ್. ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ, ವಿಪ ಸದಸ್ಯ ಎಸ್.ವಿ. ಸಂಕನೂರ ಆಗಮಿಸುವರು. ಬಾಕ್ಸ್‌

14 ಕ್ಕೆ ರೊಟ್ಟಿ ಜಾತ್ರೆ: ಲಿ. ಡಾ. ತೋಂಟದ ಸಿದ್ಧಲಿಂಗ ಶ್ರೀಗಳ ದೂರದೃಷ್ಟಿಯ ದ್ಯೋತಕವಾಗಿ ಭಾವೈಕ್ಯತೆ ಮೂಡಿಸುವ ಹಿನ್ನೆಲೆ ರೊಟ್ಟಿ ಜಾತ್ರೆ ಆರಂಭಿಸಿದ್ದರು, ಎಲ್ಲರೂ ಕೂಡಿ ಸಂತೋಷದಾಯಕವಾಗಿ ರೊಟ್ಟಿ ಸವಿಯುವಂತೆ ಮಾಡಿದರು. ಈ ರೊಟ್ಟಿ ಜಾತ್ರೆ ಡಂಬಳ ಗ್ರಾಮದಲ್ಲಿ ಫೆ. 14ರ ರಾತ್ರಿ 8 ಗಂಟೆಗೆ ನಡೆಯಲಿದೆ.

ಡಾ. ತೋಂಟದ ಸಿದ್ಧಲಿಂಗ ಮಹಾ ಸ್ವಾಮೀಜಿಗಳು ಮತ್ತು ತೋಂಟದ ಡಾ. ಸಿದ್ಧರಾಮ ಮಹಾಸ್ವಾಮಿಗಳು ಕೇವಲ ಅಧ್ಯಾತ್ಮ, ಲಿಂಗ ಪೂಜೆ, ಆಚಾರ ನಿಷ್ಠೆ ಜೊತೆಗೆ ಬಸವಣ್ಣ, ಅಲ್ಲಮಪ್ರಭು, ವಿವೇಕಾನಂದರ ವಿಚಾರಧಾರೆ ಮೈಗೂಡಿಸಿಕೊಂಡು ಸದಾ ಕಾಲ ನಾಡಿನ ಭಾಷೆ, ನೆಲ, ಜಲ ರಕ್ಷಣೆ ವಿಷಯದಲ್ಲಿ ಬೀದಿಗಿಳಿದು ಹೋರಾಟ ಮಾಡಿ ಕ್ರಾಂತಿಕಾರಿ ವಿಚಾರಗಳನ್ನು ಯುವ ಸಮುದಾಯಕ್ಕೆ ತಿಳಿಯಪಡಿಸಿ ಜಾಗೃತಿ ಸಮಾಜ ನಿರ್ಮಾಣಕ್ಕೆ ಕಾರಣರಾಗಿದ್ದಾರೆ ಎಂದು ಗದಗ ಜಾತ್ರಾ ಸಮಿತಿ ಅಧ್ಯಕ್ಷ ಭೀಮಪ್ಪ ಹೇಳಿದ್ದಾರೆ.

ಲಿಂ.ಡಾ.ತೋಂಟದ ಸಿದ್ದಲಿಂಗ ಶ್ರೀಗಳು ಹಾಕಿಕೊಟ್ಟ ಮಾರ್ಗದಂತೆ ಜಾತಿ, ಪಂಥ, ಮತಗಳ ಭೇದವಿಲ್ಲದೆ ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಹೇಗೆ ಪರಿಸರದಲ್ಲಿ ಗಾಳಿ, ಮಳೆ, ಸೂರ್ಯನ ಕಿರಣಗಳಿಗೆ ಜಾತಿ, ಮತ, ಪಂಥ ಭೇದವಿಲ್ಲವೋ ಹಾಗೆಯೇ ಈ ಮಠದ ಭಕ್ತರು ರೊಟ್ಟಿ ತಯಾರಿಸುತ್ತಾರೆ. ಎಲ್ಲರೂ ಸೇರಿ ಸವಿಯುತ್ತಾರೆ. ಇದೇ ಭಾವೈಕ್ಯತೆಯ ಜಾತ್ಯಾತೀತ ರೊಟ್ಟಿ ಜಾತ್ರೆಯಾಗಿದೆ ಎಂದು ಡಾ. ತೋಂಟದ ಸಿದ್ದರಾಮ ಶ್ರೀಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''