ಬ್ಯಾಂಕ್ ನಗದು ವಹಿವಾಟಿನ ಮೇಲೆ ವೆಚ್ಚ ವೀಕ್ಷಕರ ನಿಗಾ: ಹರ್ವಿಂದರ್ ಪಾಲ್ ಸಿಂಗ್

KannadaprabhaNewsNetwork | Published : Apr 4, 2024 1:04 AM

ಸಾರಾಂಶ

ತುಮಕೂರು ಜಿಲ್ಲೆಯ ಲೋಕಸಭಾ ಕ್ಷೇತ್ರದ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಪ್ರತಿ ದಿನ ಬ್ಯಾಂಕ್ ನಗದು ವಹಿವಾಟಿನ ಮೇಲೆ ನಿಗಾ ಇಡಲಾಗುವುದು ಎಂದು ಚುನಾವಣಾ ವೆಚ್ಚ ವೀಕ್ಷಕರಾದ ಹರ್ವಿಂದರ್ ಪಾಲ್ ಸಿಂಗ್ ಹಾಗೂ ಶೋಭಾ ಅವರು ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯ ಲೋಕಸಭಾ ಕ್ಷೇತ್ರದ ಚುನಾವಣೆಯ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಪ್ರತಿ ದಿನ ಬ್ಯಾಂಕ್ ನಗದು ವಹಿವಾಟಿನ ಮೇಲೆ ನಿಗಾ ಇಡಲಾಗುವುದು ಎಂದು ಚುನಾವಣಾ ವೆಚ್ಚ ವೀಕ್ಷಕರಾದ ಹರ್ವಿಂದರ್ ಪಾಲ್ ಸಿಂಗ್ ಹಾಗೂ ಶೋಭಾ ಅವರು ತಿಳಿಸಿದರು. ಜಿಲ್ಲಾ ಪಂಚಾಯತಿ ಮಿನಿ ಸಭಾಂಗಣದಲ್ಲಿ ಬುಧವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೊಳ ಪಡುವಂತೆ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಬ್ಯಾಂಕ್ ಖಾತೆಗಳಲ್ಲಿ ನಡೆಯುವ ಸಂಶಯಾಸ್ಪದ ನಗದು ವಹಿವಾಟು, ಹೆಚ್ಚಿನ ಹಣ ವರ್ಗಾವಣೆ, ಒಂದು ಖಾತೆಯಿಂದ ಹೆಚ್ಚಿನ ಖಾತೆಗಳಿಗೆ ಹಣ ವರ್ಗಾವಣೆ ಬಗ್ಗೆ ಹದ್ದಿನ ಕಣ್ಣಿಡಲಾಗುವುದು ಎಂದು ತಿಳಿಸಿದರು. ಹರ್ವಿಂದರ್ ಪಾಲ್ ಸಿಂಗ್ ಮಾತನಾಡಿ, ಕಳೆದ ಮಾರ್ಚ್ 28 ರಂದು ಲೋಕಸಭಾ ಚುನಾವಣೆ ಸಂಬಂಧ ನಿಯೋಜಿಸಲಾಗಿರುವ ಸಹಾಯಕ ವೆಚ್ಚ ವೀಕ್ಷಕರು, ಫ್ಲೈಯಿಂಗ್ ಸ್ಕ್ವಾಡ್, ಸರ್ವೇಲೆನ್ಸ್ ತಂಡ, ವೀಡಿಯೋ ವ್ಯೂಯಿಂಗ್ ತಂಡದೊಂದಿಗೆ ಸಭೆ ನಡೆಸಿ ಚುನಾವಣಾ ಅಕ್ರಮ ನಡೆಯದಂತೆ ಹಾಗೂ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರವಹಿಸಬೇಕೆಂದು ಸೂಚನೆ ನೀಡಲಾಗಿದೆ. ಪ್ರತಿ ಚುನಾವಣಾ ಅಭ್ಯರ್ಥಿಗಳಿಗೆ 95 ಲಕ್ಷ ರು.ಗಳ ಚುನಾವಣಾ ವೆಚ್ಚವನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಗಳು ಪ್ರಚಾರಕ್ಕಾಗಿ ನಡೆಸುವ ಸಭೆ/ಸಮಾರಂಭಗಳಲ್ಲಿ ಆಗುವಂತಹ ಖರ್ಚು-ವೆಚ್ಚಗಳ ಬಗ್ಗೆ ತೀವ್ರ ನಿಗಾವಹಿಸಬೇಕೆಂದು ನಿಯೋಜಿತರಿಗೆ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಮತ್ತೊಬ್ಬ ಚುನಾವಣಾ ವೀಕ್ಷಕರಾದ ಶೋಭಾ ಮಾತನಾಡಿ, ಅಕ್ರಮ ನಗದು ಸಾಗಾಣಿಕೆ, ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಹಣ ವರ್ಗಾವಣೆ ಮಾಡುವವರ ಮೇಲೆ ನಿಗಾವಹಿಸಲು ಲೋಕಸಭಾ ಕ್ಷೇತ್ರಕ್ಕೊಳಪಡುವ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಾಪಿಸಿರುವ ಚೆಕ್ ಪೋಸ್ಟ್ ಗಳಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಖುದ್ದಾಗಿ ಭೇಟಿ ನೀಡಿ ಚೆಕ್‌ಪೋಸ್ಟ್ ಗಳಲ್ಲಿ ನಿಯೋಜಿತರ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸಲಾಗು ವುದು. ಅಭ್ಯರ್ಥಿಗಳು ವೆಚ್ಚ ಮಾಡುವ ಪ್ರತಿಯೊಂದಕ್ಕೂ ಆಯೋಗವು ದರ ನಿಗದಿಪಡಿಸಿದ್ದು, ಅದರಂತೆ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಲೆಕ್ಕ ಹಾಕಲಾಗುವುದು ಎಂದು ತಿಳಿಸಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಮಾತನಾಡಿ, ಯಾರೇ ಆಗಲಿ ಚುನಾವಣಾ ಅಕ್ರಮಗಳು ಕಂಡು ಬಂದಲ್ಲಿ ಚುನಾವಣಾ ವೆಚ್ಚ ವೀಕ್ಷಕರಿಗೆ ದೂರು ನೀಡಬಹುದು. ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೂ ವೆಚ್ಚ ವೀಕ್ಷಕರು ನಗರದ ಪರಿವೀಕ್ಷಣಾ ಬಂಗಲೆ(ಐಬಿ)ಯಲ್ಲಿ ಲಭ್ಯವಿರುತ್ತಾರೆ. ಹರ್ವಿಂದರ್ ಪಾಲ್ ಸಿಂಗ್ ಅವರನ್ನು ಸಂಪರ್ಕಿಸಲು ಮೊ.ಸಂ. 7019553171 ಕರೆ ಮಾಡಿ ದೂರು ನೀಡಬಹುದಾಗಿದೆ ಎಂದು ಹೇಳಿದರು. ಹರ್ವಿಂದರ್ ಪಾಲ್ ಸಿಂಗ್ ಅವರು ಜಿಲ್ಲೆಯ ಲೋಕಸಭಾ ಕ್ಷೇತ್ರಕ್ಕೊಳಪಡುವ ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ, ಮಧುಗಿರಿ ಹಾಗೂ ಶೋಭಾ ಅವರು ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ತುಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸಿ ಚುನಾವಣಾ ವೆಚ್ಚದ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲಿದ್ದಾರೆ. ಚುನಾವಣಾ ವೆಚ್ಚದ ಉಲ್ಲಂಘನೆ ಕಂಡುಬಂದವರು ವೆಚ್ಚ ವೀಕ್ಷಕರಿಗೆ ದೂರು ನೀಡುವ ಮೂಲಕ ನ್ಯಾಯ ಸಮ್ಮತ ಹಾಗೂ ಪಾರದರ್ಶಕ ಚುನಾವಣೆಗೆ ಕೈಜೋಡಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಲೈಸನಿಂಗ್ ಅಧಿಕಾರಿಯಾದ ಲೆಕ್ಕಪರಿಶೋಧನಾಧಿಕಾರಿ ಮಂಜುನಾಥ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Share this article