ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬಕ್ಕೆ ಒಂದು ದಿನವಿದ್ದು, ಹಬ್ಬದ ಸಿದ್ಧತೆ ಜೋರಾಗಿದೆ. ನಗರದಲ್ಲಿ ಯುಗಾದಿ ಹಬ್ಬದ ವ್ಯಾಪಾರ ವಹಿವಾಟು ಜೋರಾಗಿದ್ದು, ಬೇವು ಬೆಲ್ಲದ ಹಬ್ಬಕ್ಕೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಾಡಿನೆಲ್ಲಡೆ ಯುಗಾದಿ ಸಂಭ್ರಮ ಮನೆ ಮಾಡುತ್ತಿದೆ. ಈ ಬಾರಿ ಯುಗಾದಿ ದುಬಾರಿಯಾದರೂ ಸಹ ಹಬ್ಬದ ಖರೀದಿ ಜೋರಾಗಿ ನಡೆಯುತ್ತಿದೆ. ನಗರದ ಬಜಾರ್ ರಸ್ತೆ, ಎಂಜಿ ರಸ್ತೆ, ಎಪಿಎಂಸಿ ಮತ್ತು ಸಂತೆ ಮಾರುಕಟ್ಟೆ ಸೇರಿದಂತೆ ನಗರ ಹೊರವಲಯದ ಕೆವಿ ಕ್ಯಾಂಪಸ್ ಬಳಿಯ ಹೂವಿನ ಮಾರುಕಟ್ಟೆ ಜನರಿಂದ ತುಂಬಿ ತುಳುಕುತ್ತಿತ್ತು. ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬಕ್ಕೆ ಒಂದು ದಿನವಿದ್ದು, ಹಬ್ಬದ ಸಿದ್ಧತೆ ಜೋರಾಗಿದೆ. ನಗರದಲ್ಲಿ ಯುಗಾದಿ ಹಬ್ಬದ ವ್ಯಾಪಾರ ವಹಿವಾಟು ಜೋರಾಗಿದ್ದು, ಬೇವು ಬೆಲ್ಲದ ಹಬ್ಬಕ್ಕೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಮಾರುಕಟ್ಟೆಗಳಲ್ಲಿ ಬೇಳೆ, ಬೆಲ್ಲ, ತೆಂಗು, ಹೂವು-ಹಣ್ಣುಗಳ ದರ ಗಗನಕ್ಕೇರಿದೆ. ಕೆಜಿ ತೊಗರಿ ಬೇಳೆ 130 ರಿಂದ 150 ರು., ಕೆಜಿ ಬೆಲ್ಲ 50 ರಿಂದ 82 ರು.ಗಳಿಗೆ ಮಾರಾಟವಾಗುತ್ತಿದ್ದು, ಇದರೊಂದಿಗೆ ಲೀಟರ್ ಅಡುಗೆ ಎಣ್ಣೆ ಕನಿಷ್ಟ 160 ರು.ಗಳು ಮತ್ತು ಪೂಜೆಗೆ ಬೇಕಾದ ತೆಂಗಿನ ಕಾಯಿಯ ಕನಿಷ್ಟ ಬೆಲೆ 50 ರು.ಗಳಿಗೆ ಮಾರಾಟವಾಗುತ್ತಿತ್ತು.
ಒಂದು ವಾರದ ಹಿಂದೆ ಇದ್ದ ಬೆಲೆಗಿಂತ ಇದೀಗ ಹೂವು ಮತ್ತು ಹಣ್ಣುಗಳ ದರ ದುಪಟ್ಟಾಗಿದೆ. ಸದ್ಯ ಮಾರುಕಟ್ಟೆಗಳಲ್ಲಿ ಹೂವುಗಳ ದರ ವಿವರ ಇಲ್ಲಿದೆ.
ಈ ಹಿಂದೆ 100 ರುಪಾಯಿ ಇದ್ದ 1 ಕೆಜಿ ಗುಲಾಬಿ 250ರಿಂದ 300 ರುಪಾಯಿ ಆಗಿದೆ. ಒಂದು ಕೆಜಿಗೆ 80 ರು. ಇದ್ದ ಸೇವಂತಿಗೆ 200 ರಿಂದ 350 ರು.ಗೆ ಏರಿಕೆಯಾಗಿದೆ. ಚೆಂಡೂ ಹೂ 20 ರು.ಯಿಂದ 80 ರು. ಆಗಿದ್ದು, ಸುಗಂಧರಾಜದ ಬೆಲೆ 50 ರು.ದ 160 ರು. ಆಗಿದೆ. ಕನಕಾಂಬರಿ 600 ರು.ಯಿಂದ 1000 ರು.ಗೆ, 400 ರು. ಇದ್ದ ಮಲ್ಲಿಗೆ 1200 ರು.ಗೆ ಏರಿಕೆ ಕಂಡಿದೆ.ಇನ್ನು ಹಣ್ಣಿನ ದರದಲ್ಲೂ ಏರಿಕೆ ಕಂಡಿದೆ. ಕಳೆದ ಕೆಲ ದಿನಗಳ ಹಿಂದೆ ಹೋಲಿಸಿದರೆ ಪ್ರಸ್ತುತ ಕೆಲವು ಹಣ್ಣಿನ ದರ ದುಪಟ್ಟು ಹೆಚ್ಚಾಗಿದೆ. ಸದ್ಯ ಕಿತ್ತಾಳೆ ಹಣ್ಣಿಗೆ ಭಾರೀ ಬೆಡಿಕೆ ಇದ್ದು, ಈ ಹಿಂದೆ ಕೆ.ಜಿ.ಗೆ 70 ರು.ಪಾಯಿಗಳಿದ್ದ ಕಿತ್ತಳೆ ಹಣ್ಣಿನ ಬೆಲೆ ಇದೀಗ 120-150 ರು.ಪಾಯಿ ಆಗಿದೆ. ಪಪ್ಪಾಯ ಹಣ್ಣಿನ ಬೆಲೆ 50 ರು.ಪಾಯಿಂದ 70 ರು.ಪಾಯಿಗೆ ಏರಿಕೆ ಆಗಿದೆ. ಕರಬೂಜ ಹಣ್ಣಿನ ದರ ಕೆಜಿಗೆ 30ರಿಂದ 40 ರೂ, ಸೇಬು 250 ರಿಂದ 300 ರು., ದಾಳಿಂಬೆ 300 ರು.ಪಾಯಿಯಿದ್ದು, ಇತರ ಹಣ್ಣುಗಳ ಬೆಲೆ ಕೂಡ ಏರಿಕೆ ಕಂಡಿದೆ.
ಇನ್ನು ಪೂಜೆಗೆ ಬೇಕಾದ ಬಾಳೆ ಹಣ್ಣು, ತೋರಣ, ಬೇವು ಹಾಗೂ ನಿಂಬೆ ಹಣ್ಣುಗಳ ಬೆಲೆ ಕೂಡ ಹೆಚ್ಚಾಗಿದೆ.ಈ ಬಾರಿ ರಾಜ್ಯದಲ್ಲಿ ಕೆಲವಡೆ ಅಕಾಲಿಕ ಆಲಿಕಲ್ಲು ಮಳೆ ಮತ್ತು ಬೇಸಿಗೆ ಆರಂಭದಲ್ಲೇ ಸಿಕ್ಕಾ ಪಟ್ಟೆ ಉಷ್ಣಾಂಶ ಏರಿಕೆಯಿಂದ, ಹೂವು ಬೆಳೆಗಾರರು ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ನೀರಿನ ಸಮಸ್ಯೆ ಹಾಗೂ ತಾಪಮಾನ ಗರಿಷ್ಠ ಏರಿಕೆಯಿಂದ ಎಲ್ಲಾ ಬೆಳೆಗಳು ಹಾಳಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೂವು ಹಣ್ಣುಗಳ ಬೆಲೆ ಹಬ್ಬದ ಸಮಯದಲ್ಲಿ ಗಗನಕ್ಕೇರಿದೆ.
ಬೇಳೆ, ಬೆಲ್ಲ, ತೆಂಗು, ಹೂವು-ಹಣ್ಣುಗಳ ದರದಲ್ಲಿ ಏರಿಕೆ- ಆದ್ರೂ ಯುಗಾದಿ ಸಂಭ್ರಮಕ್ಕಿಲ್ಲ ಅಡ್ಡಿ, ಯುಗಾದಿ ಸಂಭ್ರಮ ಪ್ರತೀ ಮನೆಮನೆಯಲ್ಲಿ ಮನೆ ಮಾಡಿದೆ. ಬಗೆಬಗೆಯ ಅಡುಗೆಗೆ ತರಕಾರಿ, ಹಣ್ಣು, ಯುಗಾದಿ ಪೂಜೆಯ ಪರಿಕರ ಕೊಳ್ಳಲುನಗರದ ಮಾರುಕಟ್ಟೆಯಲ್ಲಿ ಜನ ಕಿಕ್ಕಿರಿದು ತುಂಬಿದ್ದರು.
ಸಿಕೆಬಿ-1 ನಗರದ ಎಂಜಿ ರಸ್ತೆಯಲ್ಲಿ ಹೂ ಕೊಳ್ಳುತ್ತಿರುವ ಗ್ರಾಹಕರು
ಸಿಕೆಬಿ-2 ನಗರದ ಬಜಾರ್ ರಸ್ತೆಯ ದಿನಸಿ ಅಂಗಡಿಯಲ್ಲಿ ದಿನಸಿ ಖರೀದಿಗೆ ಮುಗಿ ಬಿದ್ದಿರುವ ಗ್ರಾಹಕರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.