ಕನ್ನಡಪ್ರಭ ವಾರ್ತೆ, ತುಮಕೂರುಬರವಣಿಗೆಯ ಆಸಕ್ತಿ ಇರುವವರು ಮೊದಲು ಓದಿನ ಕಡೆಗೆ ಗಮನ ಹರಿಸಬೇಕು. ಬರೆಯುವುದಕ್ಕೆ ಮೊದಲು ಓದು ಅತ್ಯಗತ್ಯ. ಓದಿನಿಂದ ಮಾತ್ರ ಉತ್ತಮ ಬರವಣಿಗೆ ಸಾಧ್ಯ. ಓದಿಲ್ಲದೆ ಏನನ್ನೂ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಪೀಠ ಬುಧವಾರದಂದು ಆಯೋಜಿಸಿದ್ದ ಸೃಜನಶೀಲ ಅಭಿವ್ಯಕ್ತಿ: ಬಿಂಬವೊಂದು ಕನ್ನಡಿ ನೂರು ಎಂಬ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯೆಯನ್ನು ಕಲಿಯಲು ಆಸಕ್ತಿ ಮತ್ತು ಮುಕ್ತ ಮನಸ್ಸು ಪ್ರಮುಖ ಪಾತ್ರ ವಹಿಸುತ್ತವೆ. ಕಾರ್ಯಾಗಾರಗಳು ಮನಸ್ಸಿನ ಅಭಿರುಚಿಯನ್ನು ತಿದ್ದುವ ಕೆಲಸ ಮಾಡುತ್ತವೆ.ಬರವಣಿಗೆ ಎಂಬುದು ಬಾಲ್ಕನಿಯಲ್ಲಿ ನಿಂತು ನೋಡುವ ದೃಶ್ಯವಲ್ಲ. ಸೃಜನಶೀಲ ಬರಹಗಾರನಾಗಲು ಬರವಣಿಗೆಯು ಜೀವದ ಅವಿಭಾಜ್ಯ ಅಂಗವಾಗಬೇಕು. ಸಾಹಿತ್ಯ ಎನ್ನುವುದು ಕೇವಲ ಶೋಕಿಯಲ್ಲ, ಅದು ಒಂದು ಸಂವಾದ. ಭಾಷೆ ಎಂಬುದು ಸಾರ್ವಜನಿಕ ಆಸ್ತಿಯಾಗಿದ್ದು, ಅದನ್ನು ಬಳಸುವಾಗ ಮತ್ತು ಬರೆಯುವಾಗ ಬಹಳ ಎಚ್ಚರಿಕೆ ಅಗತ್ಯ ಎಂದರು.ಕಾರ್ಯಕ್ರಮದಲ್ಲಿ ಕಲಾವಿದೆ ವಾಣಿ ಸತೀಶ್ ಅವರು ದುಪ್ಪಳ್ಳಿ ಸೆಕ್ಸಿ ದುರಗ ಕಥೆಯನ್ನು ಏಕಾಭಿನಯದ ಮೂಲಕ ಪ್ರದರ್ಶಿಸಿದರು.ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಮೋಹನ್ ಎಚ್. ಎಸ್, ಕಾರ್ಯಕ್ರಮದ ಸಂಯೋಜಕಿ ಪ್ರೊ. ಗೀತಾ ವಸಂತ, ಹಿರಿಯ ಪ್ರಾಧ್ಯಾಪಕರಾದ ಪ್ರೊ. ನಿತ್ಯಾನಂದ ಬಿ. ಶೆಟ್ಟಿ, ಡಾ. ನಾಗಭೂಷಣ್ ಬಗ್ಗನಡು, ನಟ ಹನುಮಂತೇಗೌಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.