ಪ್ರಸಾದ್ ನಗರೆ
ಹೊನ್ನಾವರ: ಯಾವ ಯಾವ ಕಾಲಕ್ಕೆ ಏನೇನು ಆಗಬೇಕೊ ಅದೆಲ್ಲಾ ಆಗಬೇಕು. ಹಾಗಿದ್ದರೆ ಮಾತ್ರ ನಿಸರ್ಗದಲ್ಲಿ ಒಂದು ಸಮತೋಲನವಿರುತ್ತದೆ. ಆದರೆ, ಈಗ ಎಲ್ಲವೂ ಬದಲಾಗಿದೆ. ವರ್ಷದಲ್ಲಿ ಎಷ್ಟು ಕಾಲ ಎಂದು ಕೇಳಿದರೆ ಮಳೆಗಾಲ ಮತ್ತು ಬೇಸಿಗೆ ಕಾಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.ನಿಜವಾಗಿ ಡಿಸೆಂಬರ್ ತಿಂಗಳು ಬಂತೆಂದರೆ ಸಾಕು ಚಳಿಗಾಲದ ಸದ್ದಾಗುತ್ತಿತ್ತು. ರಗ್ಗು, ಚಾದರ, ಕಂಬಳಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಆದರೆ, ಈಗ ಎಲ್ಲವೂ ಬದಲಾಗಿದೆ. ಡಿಸೆಂಬರ್ ತಿಂಗಳಿನಲ್ಲೂ ಜೋರಾಗಿ ಫ್ಯಾನ್ ಹಾಕಿಕೊಂಡು ಕೂರಬೇಕಾದ ಸಂದರ್ಭ ಎದುರಾಗಿದೆ. ವರ್ಷದ ಬಹುತೇಕ ಸಮಯ ಸೆಕೆಯಲ್ಲಿಯೆ ಕಳೆಯಬೇಕಾಗಿ ಬಂದಿದೆ.
ತಾಲೂಕಿನಲ್ಲಿ ಈ ವರ್ಷ ಚಳಿ ಎನ್ನುವುದು ಕೇವಲ ೨ ದಿನ ಜೋರಾಗಿತ್ತು. ಅದಾದ ಬಳಿಕ ಚಳಿಯ ಸುದ್ದಿಯೇ ಇಲ್ಲ. ಬಿರು ಬೇಸಿಗೆಯಂತಹ ಬಿಸಿಲು ಮತ್ತು ಸೆಕೆ. ಬೆವರು ಒರೆಸಿಕೊಳ್ಳುತ್ತ ಕೂರಬೇಕಾದ ಪರಿಸ್ಥಿತಿ ಡಿಸೆಂಬರ್ ತಿಂಗಳಿನಲ್ಲೇ ಉಂಟಾಗಿದೆ. ಚಳಿಗಾಲ ಎಂದರೆ ಡಿಸೆಂಬರ್ ನಿಂದ ಮಾರ್ಚ್ ವರೆಗೆ ಅದರಲ್ಲೂ ಶಿವರಾತ್ರಿ ವರೆಗೆ ಇರುತ್ತಿತ್ತು. ಶಿವರಾತ್ರಿ ಹಬ್ಬದ ಮರುದಿನದಿಂದ ಬೇಸಿಗೆ ಕಾಲ ಆರಂಭ ಎನ್ನುವ ಪ್ರತೀತಿ ಇತ್ತು. ಅದೆಲ್ಲಾ ಈಗ ಬದಲಾಗಿ ಹೋಗಿದೆ.ಕರಾವಳಿಗೆ ಬಾಧಿಸಲಿಲ್ಲ ದಿತ್ವಾ ಚಂಡಮಾರುತ
ಬೇಸಿಗೆಯಂತಹ ಸೆಕೆ ಹಗಲು ಮತ್ತು ಇರುಳು ಇದೆ. ಚಳಿಗಾಲ ಮತ್ತು ಇಬ್ಬನಿ ಬೀಳುವ ಪ್ರಮಾಣವೇ ಇಲ್ಲವಾಗಿದೆ. ಸಸ್ಯಗಳು, ದವಸ ಧಾನ್ಯ, ಅಡಕೆ ಇನ್ನಿತರ ಬೆಳೆಗೆ ಚಳಿಗಾಲ ಅಗತ್ಯವಾಗಿ ಬೇಕಿತ್ತು. ಆದರೆ ಈ ವರ್ಷ ನೋಡಿದರೆ ಮಳೆಗಾಲದ ಅಬ್ಬರವೇ ಜೋರಾಗಿತ್ತು. ಇನ್ನು ಕೆಲ ದಿನಗಳ ಹಿಂದೆ ಬಂದಿದ್ದ ದಿತ್ವಾ ಚಂಡಮಾರುತ ಕರಾವಳಿಯಲ್ಲಿ ಸ್ವಲ್ಪ ಹವಾಮಾನ ಬದಲಾವಣೆಯನ್ನು ಮಾಡುತ್ತದೆ. ಚಳಿಯು ಬೀಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆ ಚಂಡಮಾರುತದಿಂದ ಬೆಂಗಳೂರಿನಲ್ಲಿ ಚಳಿ ಜೋರಾಯಿತೆ ವಿನ: ನಮ್ಮ ಕರಾವಳಿಯಲ್ಲಿ ಏನೂ ಆಗಲಿಲ್ಲ. ಮಧ್ಯಾಹ್ನದ ನಂತರ ಕೊಂಚ ಮೋಡ ಕವಿದ ವಾತಾವರಣವಿರುತ್ತಲಿದೆಯೇ ಹೊರತು ಚಳಿಯಿಲ್ಲ. ಮತ್ತೆ ಮಳೆ ಬರಬಹುದು ಎಂದು ತಾಲೂಕಿನ ಅಡಕೆ ಬೆಳೆಗಾರರು ತಾವು ಕೊಯ್ದ ಅಡಕೆಯನ್ನು ಒಣಗಿಸಲು ಆಗದೆ ಪರಿತಪಿಸುತ್ತಿದ್ದಾರೆ.ಆರೋಗ್ಯದ ಮೇಲೂ ಬೀರುತ್ತಿದೆ ಪರಿಣಾಮ
ಹವಾಮಾನದಲ್ಲಿ ದಿನಕ್ಕೊಂದು ಬದಲಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ನೆಗಡಿ, ಜ್ವರ, ತಲೆನೋವು ಜೋರಾಗುತ್ತಿದೆ. ಹಗಲು ಬಿಸಿಯ ಗಾಳಿ ಬೀಸುತ್ತಿರುವುದರಿಂದ ಜನರಿಗೆ ಡಿಹೈಡ್ರೆಶನ್ ಸಹ ಉಂಟಾಗುತ್ತಲಿದೆ. ತಾಲೂಕಿನ ಬಹುತೇಕ ಆರೋಗ್ಯ ಕೇಂದ್ರದಲ್ಲಿ ನೆಗಡಿ, ಜ್ವರದಿಂದ ಬಳಲುತ್ತಿರುವವರೇ ಅಧಿಕವಾಗಿ ಕಾಣುತ್ತಿದ್ದಾರೆ.ಚಳಿಗಾಲ ದೂರಾದರೆ ಮುಂಬರುವ ವ್ಯವಸಾಯದ ಮೇಲೆ ಪರಿಣಾಮ ಬೀರುವುದು ಖಚಿತ. ಈಗಾಗಲೇ ದವಸ ಧಾನ್ಯ, ತರಕಾರಿಯ ಬೆಲೆ ಗಗನಮುಖಿಯಾಗಿದ್ದು, ವಾತಾವರಣದ ಬದಲಾವಣೆ ಸಹ ಇವುಗಳ ದರದ ಮೇಲೆ ಪ್ರಭಾವವನ್ನು ಬೀರಲಿದೆ.
ತಾಪಮಾನ ಅಧಿಕತಾಲೂಕಿನಲ್ಲಿ ತಾಪಮಾನ ಜಾಸ್ತಿ ಇದೆ. ಸಂಜೆಯ ಸಮಯಕ್ಕೆ ಮೋಡ ಸೇರುತ್ತಿದೆ. ರಾತ್ರಿಯ ವೇಳೆಗೆ ತಂಪು ಇರಬೇಕಾಗಿತ್ತು. ಆದರೆ ಹಗಲಿನಿಂದ ಸಂಜೆಯವರೆಗೂ ತಾಪಮಾನ ಅಧಿಕವಾಗಿರುವುದರಿಂದ ತಂಪಿನ ಅನುಭವ ಆಗುತ್ತಿಲ್ಲ. ಇದೇ ರೀತಿಯ ಹವಾಮಾನ ಡಿಸೆಂಬರ್ ಪೂರ್ಣ ಇರುವ ಸಾಧ್ಯತೆ ಅಧಿಕವಾಗಿದೆ. ಇನ್ನು ಚಳಿ ಸ್ವಲ್ಪ ಪ್ರಮಾಣದಲ್ಲಿ ಬಿದ್ದರೂ ಅದು ಜನವರಿಯಲ್ಲಿ ಇರಬಹುದು. ಈಗ ಪ್ರತಿದಿನ ಸರಾಸರಿ ೨೨ -೨೪ ಡಿಗ್ರಿ ಸೆ ಉಷ್ಣಾಂಶ ದಾಖಲಾಗುತ್ತಿದೆ. ಇಬ್ಬನಿ ಬೀಳುತ್ತಿಲ್ಲ. ಹೀಗಾಗಿ, ಚಳಿಗಾಲದ ಅನುಭವ ಪ್ರತಿ ವರ್ಷದಂತೆ ಆಗುತ್ತಿಲ್ಲ ಎಂದು ತಾಲೂಕು ಹವಾಮಾನಾಧಿಕಾರಿ ರಮೇಶ್ ಹೇಳುತ್ತಾರೆ.