ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ರೈತರು ನಾಲೆಯ ಪಕ್ಕದಲ್ಲಿ ಈಗಾಗಲೇ ಎಡೆಮಟ್ಟೆಗಳನ್ನು ಜೋಡಿಸುತ್ತಿದ್ದು, ಕಾಮಗಾರಿ ನಡೆಸಲು ಬರುವಂತಹ ಗುತ್ತಿಗೆದಾರ ಹಾಗೂ ಅಧಿಕಾರಿಗಳಿಗೆ ಎಡೆಮಟ್ಟೆ ಸೇವೆ ಸಿಗುತ್ತದೆ ಎಂದು ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ಸದಸ್ಯ ಪ್ರಭಾಕರ ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆ ವಿರೋಧಿಸಿ ರೈತರು ನಾಲೆಯ ಪಕ್ಕದಲ್ಲಿ ಈಗಾಗಲೇ ಎಡೆಮಟ್ಟೆಗಳನ್ನು ಜೋಡಿಸುತ್ತಿದ್ದು, ಕಾಮಗಾರಿ ನಡೆಸಲು ಬರುವಂತಹ ಗುತ್ತಿಗೆದಾರ ಹಾಗೂ ಅಧಿಕಾರಿಗಳಿಗೆ ಎಡೆಮಟ್ಟೆ ಸೇವೆ ಸಿಗುತ್ತದೆ ಎಂದು ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿ ಸದಸ್ಯ ಪ್ರಭಾಕರ ಹೇಳಿದರು.ತುರುವೇಕೆರೆ ತಾಲೂಕಿನ ಸಂಪಿಗೆ ಗ್ರಾಮದಲ್ಲಿ ನಡೆದ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಸಾಧಕ- ಭಾದಕಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರಾಮನಗರ ಜಿಲ್ಲೆ ಮಾಗಡಿಗೆ ಶ್ರೀ ಮಾಗಡಿಯ ಶ್ರೀರಂಗ ಏತ ನೀರಾವರಿ ಯೋಜನೆಗೆ ತುಮಕೂರಿನ ಹೇಮಾವತಿ ನಾಲೆಯಿಂದ ಲಿಂಕ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋಗಲು ಪೈಪ್‌ಲೈನ್ ಅಳವಡಿಸಲು ಪೊಲೀಸ್ ಬಂದೋಬಸ್ತ್ ನೀಡುವಂತೆ ಪತ್ರ ಬರೆದ ಸರ್ಕಾರ ತುಮಕೂರು ಜಿಲ್ಲೆಯ ಜನರನ್ನು ಕೆರಳಿಸುವಂತೆ ಮಾಡಿದೆ ಎಂದರು. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಶಾಸಕರುಗಳ ಸಭೆಯಲ್ಲಿ ಒಂದು ಹೇಳಿಕೆ ನೀಡುತ್ತಾರೆ. ಮೀಟಿಂಗ್ ಮುಗಿದ ತರವಾಯ ಅಧಿಕಾರಿಗಳ ಮೂಲಕ ಪೊಲೀಸ್ ಬಂದೋಬಸ್ತ್‌ಗೆ ಪತ್ರ ಬರೆಸುತ್ತಾರೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ ಶಿವಕುಮಾರ್ ಮಾಗಡಿ ಮತ್ತು ಕುಣಿಗಲ್ ತಾಲೂಕುಗಳನ್ನು ಮಾತ್ರ ನೋಡಬಾರದು. ತುಮಕೂರು ಜಿಲ್ಲೆಯಲ್ಲಿ ಏಳು ಜನ ಕಾಂಗ್ರೆಸ್ ಶಾಸಕರು ಇದ್ದೀರಿ. ಇಲ್ಲಿ ನಿಮ್ಮ ಗೌರವವೂ ಕೂಡ ಮುಖ್ಯ ಎನ್ನುವುದಾದರೆ ನೀವು ತುಮಕೂರಿನ ಹಿತವನ್ನು ಕೂಡ ಕಾಪಾಡಲು ಈ ಯೋಜನೆಯನ್ನು ಕೈಬಿಡಲು ತಾವು ಎಲ್ಲರೂ ಕೂಡ ಸರ್ಕಾರಕ್ಕೆ ಪತ್ರ ಬರೆಯುವಂತೆ ಮನವಿ ಮಾಡಿದರು.
ಜಿಲ್ಲೆಯ ಕಾಂಗ್ರೆಸ್ ಶಾಸಕರು ಕೂಡ ಈ ಯೋಜನೆಯನ್ನು ಬಲವಾಗಿ ವಿರೋಧಿಸುವಂತಾಗಬೇಕು. ನಿಮ್ಮ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಎಂಬ ಕಾರಣಕ್ಕೆ ನೀವು ಹೆದರಿ ಕೂರುಬಾರದು. ನಿಮ್ಮ ಜೊತೆ ನಾವಿದ್ದೇವೆ ಧೈರ್ಯದಿಂದ ಈ ಯೋಜನೆಯನ್ನು ವಿರೋಧಿಸಬೇಕು ಎಂದು ಕಾಂಗ್ರೆಸ್ ಶಾಸಕರಿಗೆ ಹೇಳಿದರು.
ನಾವು ಯಾವುದೇ ಕಾರಣಕ್ಕೂ ಕಾಮಗಾರಿ ನಡೆಯಲು ಬಿಡುವುದಿಲ್ಲ. ಈಗಾಗಲೇ ತುರುವೇಕೆರೆ ಕ್ಷೇತ್ರದ ಶಾಸಕ ಎಂ. ಟಿ. ಕೃಷ್ಣಪ್ಪ ಹೇಳಿಕೆಯಂತೆ ರೈತರು ನಾಲೆಯ ಪಕ್ಕದಲ್ಲಿ ಎಡೆಮಟ್ಟೆಯನ್ನು ಜೋಡಿಸುತ್ತಿದ್ದಾರೆ. ಸರ್ಕಾರ ಏನಾದರೂ ಬಲವಂತವಾಗಿ ಈ ಯೋಜನೆ ಕಾಮಗಾರಿ ಆರಂಭಿಸಲು ಮುಂದಾಗಿದ್ದೆ ಆದರೆ ಅಕ್ಷರಶಃ ಎಡಮಟ್ಟೆ ಸೇವೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈಗಾಗಲೇ ಅಂದಾಜು ₹ 900 ಕೋಟಿ ಮೊತ್ತದಲ್ಲಿ ಆಧುನೀಕರಣಗೊಂಡಿರುವ ನಾಲೆಯಲ್ಲಿ ಮಾಗಡಿಗೆ ಮತ್ತು ಕುಣಿಗಲ್‌ಗೆ ನೀರು ತೆಗೆದುಕೊಂಡು ಹೋಗಲಿ, ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅವೈಜ್ಞಾನಿಕವಾಗಿರುವ ಪೈಪ್‌ಲ್ಯೆನ್‌ನಲ್ಲಿ ನೀರು ತೆಗೆದುಕೊಂಡು ಹೋಗಲು ನಮ್ಮ ವಿರೋಧವಿದೆ ಎಂದರು
ರೈತ ಮುಖಂಡರುಗಳು ರೈತರು ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳು ಮತ್ತು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.