ಹೊಸೂರು ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಗಳ ಪತ್ತೆ

KannadaprabhaNewsNetwork | Published : Oct 14, 2024 1:17 AM

ಸಾರಾಂಶ

ಹೊಸೂರು ಆಸ್ಪತ್ರೆಗೆ ಸುಮಾರು 30-35ಹಳ್ಳಿಗಳಿಂದ ಪ್ರತಿನಿತ್ಯ 500ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಈಗ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಗಳು ಪತ್ತೆಯಾಗಿರುವುದು ರ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ. ಆಸ್ಪತ್ರೆಯಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ. ವೈದ್ಯರು ಆಸ್ಪತ್ರೆಗೆ ಬರುವುದಿರಲಿ ಸಂಪರ್ಕಕ್ಕೂ ಸಿಗುವುದಿಲ್ಲ,

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಅವಧಿ ಮುಗಿದ ಮಾತ್ರೆಗಳು ಮತ್ತು ಇಂಜೆಕ್ಷನ್ ಟ್ಯೂಬ್‌ಗಳು ಪತ್ರೆಯಾಗಿವೆ. ಆಸ್ಪತ್ರೆಯ ಪ್ರಸೂತಿ ವಾರ್ಡ್‌ನಲ್ಲಿ ಇವುಗಳು ಪತ್ತೆಯಾಗಿವೆ. ಈ ಬಗ್ಗೆ ಪ್ರಶ್ನಿಸಿದರೆ ಆಸ್ಪತ್ರೆ ಸಿಬ್ಬಂದಿ ಜಾರಿಕೆ ಉತ್ತರ ನೀಡುತ್ತಿದ್ದಾರೆ.

ಈ ಆಸ್ಪತ್ರೆಗೆ ಸುಮಾರು 30-35ಹಳ್ಳಿಗಳಿಂದ ಪ್ರತಿನಿತ್ಯ 500ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಈಗ ಆಸ್ಪತ್ರೆಯಲ್ಲಿ ಅವಧಿ ಮೀರಿದ ಔಷಧಗಳು ಪತ್ತೆಯಾಗಿರುವುದು ರ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದೆ.

ಆಸ್ಪತ್ರೆ ಅವ್ಯವಸ್ಥೆಯ ಆಗರ

ಶಿಕ್ಷಣತಜ್ಞ ಡಾ.ಹೆಚ್.ಎನ್.ನರಸಿಂಹಯ್ಯನವರ ಸ್ವಗ್ರಾಮದ ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಆಸ್ಪತ್ರೆಯಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ. ವೈದ್ಯರು ಆಸ್ಪತ್ರೆಗೆ ಬರುವುದಿರಲಿ ಸಂಪರ್ಕಕ್ಕೂ ಸಿಗುವುದಿಲ್ಲ, ರಾತ್ರಿ ಸಮಯದಲ್ಲಿ ಬರುವ ರೋಗಿಗಳನ್ನು ತಾಲೂಕು ಆಸ್ಪತ್ರೆಗೆ ಕಳುಹಿಸಿಕೊಡುತ್ತಾರೆ ಎಂಬ ಆರೋಪಿಗಳು ಕೇಳಿಬರುತ್ತಿವೆ. ಪ್ರಸೂತಿ(ಹೆರಿಗೆ) ವಾರ್ಡ್‌ನಕಡೆ ಹೋದರೆ ಅಲ್ಲಿ 5 ನಿಮಿಷ ಸಹ ನಿಲ್ಲಲು ಸಾಧ್ಯವಿಲ್ಲ. ಅಂತಹ ಅನೈರ್ಮಲ್ಯ ವಾತಾವರಣವಿದೆ. ಇದರಲ್ಲೇ ಬಾಣಂತಿಯರು ಇರಬೇಕಾದ ದುಸ್ಥಿತಿ ಇದೆ. ಹೆರಿಗೆ ಕೋಣೆಯಲ್ಲಿರುವ ಶೌಚಾಲಯದ ಬಾಗಿಲು ಮುರಿದುಬಿದ್ದಿದ್ದರೂ ದುರಸ್ತಿ ಮಾಡಿಸಿಲ್ಲ. ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಸಹ ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ರೋಗಿಗಳ ಆರೋಪ. ಶೌಚಾಲಯ, ನೀರು ಇಲ್ಲ

ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳು ಕುಡಿವ ನೀರನ್ನೂ ಸಹ ಹೊರಗಡೆಯಿಂದಲೇ ತರಬೇಕು. ಇಲ್ಲಿನ ಶುದ್ಧ ಕುಡಿವ ನೀರಿನ ಘಟಕ ಕೆಟ್ಟು ವರ್ಷಗಳೇ ಕಳೆದು ಹೋಗಿವೆ, ಶೌಚಾಲಯಕ್ಕೆ ಬೀಗ ಹಾಕಲಾಗಿದೆ. ಇರುವ ಒಂದೇ ಶೌಚಾಲಯವನ್ನು ರೋಗಿಗಳು ಬಳಸಬೇಕಿದೆ. ದಿನಕ್ಕೊಂದು ಬಾರಿಯೂ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿಲ್ಲ.

ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಅವ್ಯವಸ್ಥೆಯ ಕೇಂದ್ರವಾಗಿರುವ ಪ್ರಾಥಮಿಕಆರೋಗ್ಯಕೇಂದ್ರದಲ್ಲಿ ಈಗ ಅವಧಿ ಮುಗಿದ ಔಷಧಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಇವುಗಳನ್ನು ಬಳಸಿದ ರೋಗಿಯ ಸ್ಥಿತಿ ಹದಗೆಟ್ಟರೆ ಯಾರುಹೊಣೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇದಕ್ಕೆಲ್ಲ ಕಾರಣರಾದ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಈ ಘಟನೆಯ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲ ಸರ್ಕಾರಿ ಆರೋಗ್ಯ ಕೇಂದ್ರಗಳಿಗೆ ಮೇಲಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

ಕೋಟ್‌...................

ತಾವು ತಾತ್ಕಾಲಿಕವಾಗಿ ಉಸ್ತುವಾರಿಯನ್ನು ವಹಿಸಿಕೊಂಡಿದ್ದೇನೆ. ಇಲ್ಲಿಯ ಸಿಬ್ಬಂಧಿಗೆ ಸೂಚನೆಯನ್ನು ನೀಡಿದ್ದೆ ಆದರೆ ಸಿಬ್ಬಂದಿಯ ಬೇಜವಾಬ್ದಾರಿಯಿಂದ ಆಪರೇಷನ್ ಥಿಯೇಟರ್‌ನಲ್ಲೇ ಔಷಧಿಗಳನ್ನು ಇರಿಸಿದ್ದಾರೆ.

ಡಾ.ಜಗದೀಶ್‌, ಆಸ್ಪತ್ರೆಯ ಆಡಳಿತಾಧಿಕಾರಿ.

ಕೋಟ್‌................................

ನಾನು ಕಳೆದ 10ದಿನಗಳಿಂದ ರಜೆಯಲ್ಲಿದ್ದೇನೆ. ಅವಧಿ ಮುಗಿದ ಔಷಧಿಳ ವಿಚಾರ ನನ್ನ ಗಮನಕ್ಕೆ ಬಂದಿರುವುದಿಲ್ಲ. ನಾನು ಕರ್ತವ್ಯಕ್ಕೆ ಹಾಜರಾದ ನಂತರ ಪರಿಶೀಲಿಸುತ್ತೇನೆ.

ಡಾ. ಚಂದ್ರಮೋಹನ ರೆಡ್ಡಿ, ಟಿಎಚ್‌ಒ

Share this article