ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ: ಚಲುವರಾಯಸ್ವಾಮಿ

KannadaprabhaNewsNetwork |  
Published : Nov 18, 2026, 01:45 AM IST
17ಕೆಎಂಎನ್ ಡಿ25 | Kannada Prabha

ಸಾರಾಂಶ

ಹಾಲು ಉತ್ಪಾದಕರಿಗೆ 7 ರು. ಕೊಟ್ಟು ಒಕ್ಕೂಟಕ್ಕೆ 1 ರು. ಉಳಿಯಲೆಂದು ಹಾಲಿನ ದರವನ್ನು 8 ರು. ಹೆಚ್ಚಿಸಲಾಗಿದೆ. ಹಾಲು ಉತ್ಪಾದಿಸುವ ರೈತರಿಗೆ ಅನುಕೂಲವಾಗುವುದನ್ನು ಸಹಿಸದೆ ಹಾಲಿನ ದರ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ವಿರೋಧಿಸಿ ಪ್ರತಿಭಟನೆ ಮಾಡುವ ಬಿಜೆಪಿ ಜೆಡಿಎಸ್ ನಾಯಕರು, ಪಶು ಆಹಾರದ ದರ ಹೆಚ್ಚಿಸಿರುವ ಕೇಂದ್ರ ಸರ್ಕಾರದ ವಿರುದ್ಧ ತುಟಿಬಿಚ್ಚಿ ಮಾತನಾಡುತ್ತಿಲ್ಲ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಇಡೀ ದೇಶದಲ್ಲೇ ಗ್ಯಾರಂಟಿ ಯೋಜನೆ ಕೊಡುತ್ತಿರುವುದು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮಾತ್ರ. ಸರ್ಕಾರದ ಜನಪರ ಯೋಜನೆ ಮತ್ತು ಕಾರ್ಯಕ್ರಮಗಳ ಬಗ್ಗೆ ಪ್ರತಿ ಮನೆಗಳಿಗೂ ಖುದ್ದು ಭೇಟಿ ಕೊಟ್ಟು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.

ತಾಲೂಕಿನ ಚಿಕ್ಕಯಗಟಿ ಗ್ರಾಮದಲ್ಲಿ ಶ್ರೀಮಾರಮ್ಮದೇವಿ ದೇವಸ್ಥಾನ ಸಮಿತಿ ಟ್ರಸ್ಟ್‌ನಿಂದ ನೂತನವಾಗಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಮತ್ತು ಅಶ್ವತ್ಥಕಟ್ಟೆ ಉದ್ಘಾಟಿಸಿ, ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನಾನು ಶಾಸಕ, ಸಚಿವನಾಗಿದ್ದ ಅವಧಿಯಲ್ಲಿ ಶಾಶ್ವತವಾಗಿ ಉಳಿಯುವಂತಹ ಬಹಳಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದೇನೆ. 10 ವರ್ಷ ಕಾಲ ಬೇರೆಯವರು ಶಾಸಕರಾಗಿದ್ದ ಅವಧಿಯಲ್ಲಿ ಯಾವುದಾದರೊಂದು ಗುರುತಿಸುವಂತಹ ಅಭಿವೃದ್ಧಿ ಕೆಲಸ ಮಾಡಿದ್ದರೆ ಅಂತಹ ವ್ಯಕ್ತಿಗಳಿಗೆ ಒಂದಷ್ಟು ಮತ ನೀಡಿದರೆ ತಪ್ಪೇನಿಲ್ಲ. ಅವಕಾಶವಿದ್ದಾಗ ಯಾವೊಂದು ಅಭಿವೃದ್ಧಿ ಕೆಲಸ ಮಾಡದವರಿಗೆ ಹೆಚ್ಚು ಮತ ಕೊಟ್ಟು ಜನರ ನಿರೀಕ್ಷೆಗೂ ಮೀರಿ ಹೆಚ್ಚು ಅಭಿವೃದ್ಧಿ ಕೆಲಸ ಮಾಡಿದವರಿಗೆ ಕಡಿಮೆ ಮತ ಕೊಟ್ಟು ಪರೀಕ್ಷಿಸಿದರೆ ಅದನ್ನು ಯಾರೂ ಕೂಡ ಸಾಧನೆ ಎನ್ನುವುದಿಲ್ಲ ಎಂದರು.

ಹಾಲು ಉತ್ಪಾದಕರಿಗೆ 7 ರು. ಕೊಟ್ಟು ಒಕ್ಕೂಟಕ್ಕೆ 1 ರು. ಉಳಿಯಲೆಂದು ಹಾಲಿನ ದರವನ್ನು 8 ರು. ಹೆಚ್ಚಿಸಲಾಗಿದೆ. ಹಾಲು ಉತ್ಪಾದಿಸುವ ರೈತರಿಗೆ ಅನುಕೂಲವಾಗುವುದನ್ನು ಸಹಿಸದೆ ಹಾಲಿನ ದರ ಹೆಚ್ಚಳ ಮಾಡಿರುವುದು ಸರಿಯಲ್ಲ ಎಂದು ವಿರೋಧಿಸಿ ಪ್ರತಿಭಟನೆ ಮಾಡುವ ಬಿಜೆಪಿ ಜೆಡಿಎಸ್ ನಾಯಕರು, ಪಶು ಆಹಾರದ ದರ ಹೆಚ್ಚಿಸಿರುವ ಕೇಂದ್ರ ಸರ್ಕಾರದ ವಿರುದ್ಧ ತುಟಿಬಿಚ್ಚಿ ಮಾತನಾಡುತ್ತಿಲ್ಲ ಎಂದು ಬಿಜೆಪಿ ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದರು.

ಚುನಾವಣೆಯಲ್ಲಿ ಘೋಷಣೆ ಮಾಡಿದಂತೆ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆ ಕೊಡುತ್ತಿದೆ. ಆದರೆ, ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ ಆಂಧ್ರಪ್ರದೇಶ, ತಮಿಳುನಾಡು, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಮುಂದುವರೆಸಲಾಗಿದೆ ಸ್ಥಗಿತಗೊಳಿಸಲಾಯಿತು. ಇಡೀ ದೇಶದಲ್ಲಿ ಗ್ಯಾರಂಟಿ ಯೋಜನೆ ಕೊಡುತ್ತಿರುವುದು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾತ್ರ. ಜನರು ಇದನ್ನು ಅರ್ಥೈಸಿಕೊಳ್ಳಬೇಕು ಎಂದರು.

ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿ ಮನೆಗೆ ಭೇಟಿಕೊಟ್ಟು ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಕ್ರಮ ಮತ್ತು ಗ್ಯಾರಂಟಿ ಯೋಜನೆಗಳಿಂದ ಆಗುತ್ತಿರುವ ಅನುಕೂಲಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಬೇಕು. ಇಲ್ಲದಿದ್ದರೆ ವಿರೋಧ ಪಕ್ಷದವರು ಭಾವನಾನ್ಮಕವಾಗಿ ಮಾತಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಾರೆ ಎಂದು ಎಚ್ಚರಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಮುಖಂಡರಾದ ಸುನಿಲ್ ಲಕ್ಷ್ಮೀಕಾಂತ್, ಮಾವಿನಕೆರೆ ಸುರೇಶ್, ಎಂ.ಹುಚ್ಚೇಗೌಡ, ಡಿ.ಟಿ.ಕೃಷ್ಣೇಗೌಡ, ನರಸಿಂಹಮೂರ್ತಿ, ಟ್ರಸ್ಟ್‌ನ ಮುಖ್ಯಸ್ಥರಾದ ಜಗದೀಶ್, ರಮೇಶ್, ಪಶುಪತಿ, ರಾಮೇಗೌಡ, ಸಂತೋಷ್, ಮನೋಹರ್, ಚಿರಂಜೀವಿ ಸೇರಿದಂತೆ ಹಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಪ್ರತಿಭೆ ಅನಾವರಣಕ್ಕೆ ಕಲಾಶ್ರೀ ಉತ್ತಮ ವೇದಿಕೆ: ಜಿಪಂ ಸಿಇಒ
ತೋಂಟದ ಸಿದ್ಧಲಿಂಗ ಶ್ರೀಗೆ ಮಕ್ಕಳ ಬಗ್ಗೆ ಅಪಾರ ಕಾಳಜಿ ಇತ್ತು: ಈಶಣ್ಣ ಬೆಟಗೇರಿ