ಮಕ್ಕಳ ದಿನಾಚರಣೆಯು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಕಲಾಶ್ರೀ ಸ್ಪರ್ಧೆಯು ಉತ್ತಮ ವೇದಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಗದಗ

ಮಕ್ಕಳ ದಿನಾಚರಣೆಯು ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮವಾಗಿದ್ದು, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಕಲಾಶ್ರೀ ಸ್ಪರ್ಧೆಯು ಉತ್ತಮ ವೇದಿಕೆಯಾಗಿದೆ. ಮಕ್ಕಳಿಗೆ ಇಂತಹ ಉತ್ತಮ ವೇದಿಕೆ ಕಲ್ಪಿಸಿರುವ ಜಿಲ್ಲಾ ಬಾಲಭವನದ ಕಾರ್ಯ ಶ್ಲಾಘನೀಯ ಎಂದು ಜಿಪಂ ಸಿಇಒ ಮುಕುಲ್ ಜೈನ್ ಹೇಳಿದರು.

ನಗರದಲ್ಲಿ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನ ಗದಗ ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ರಾಜೇಂದ್ರ ಎಸ್. ಗಡಾದ ಮಾತನಾಡಿ, ಮಕ್ಕಳು ಅರಳುವ ಹೂವುಗಳಿದ್ದಂತೆ. ಅಂತಹ ಮಕ್ಕಳ ಬೌದ್ಧಿಕ ಮತ್ತು ಸಾಂಸ್ಕೃತಿಕ ವಿಕಾಸಕ್ಕೆ ಕಲಾಶ್ರೀ ಕಾರ್ಯಕ್ರಮ ಪೂರಕವಾಗಿದೆ. ಜಿಲ್ಲಾ ಬಾಲಭವನ ಮಕ್ಕಳಿಗಾಗಿ ಇಂತಹ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಗದಗ ಮುನ್ಸಿಪಲ್ ಕಾಲೇಜು ಪ್ರಾಚಾರ್ಯೆ ಎಸ್.ಬಿ. ಮಾಗಡಿ ಮಾತನಾಡಿ, ಮಕ್ಕಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿ ವಿಜೇತರಾಗುವ ಮೂಲಕ, ಮುಂದೆ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲೂ ಜಯಭೇರಿ ಬಾರಿಸಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರಾಧಾ ಮಣ್ಣೂರ ಮಾತನಾಡಿ, ಬಾಲಭವನವು ಮಕ್ಕಳ ಮನೋವಿಕಾಸಕ್ಕಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ಕಲಾಶ್ರೀ ಸ್ಪರ್ಧೆ ಅವುಗಳಲ್ಲಿ ಪ್ರಮುಖವಾಗಿದೆ. ಮಕ್ಕಳು ಸ್ಪರ್ಧೆಯಲ್ಲಿ ಸೋಲು ಮತ್ತು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜಯಶ್ರೀ ಆರ್. ಮುಂತಾದವರಿದ್ದರು. ಜಿಲ್ಲಾ ಬಾಲಭವನದ ಕಾರ್ಯಕ್ರಮ ಸಂಯೋಜಕ ರವಿ ಉಮಚಗಿ ನಿರೂಪಿಸಿದರು.