ಗಜೇಂದ್ರಗಡ: ಸಂವಿಧಾನಕ್ಕೆ ಬದ್ಧರಾಗಿ ಕೆಲಸ ನಿರ್ವಹಿಸುವ ಜತೆಗೆ ಸಂವಿಧಾನದ ಮಹತ್ವ ಹಾಗೂ ಕರ್ತವ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಮೂಲಕ ಸಶಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಡಿಡಿಪಿಐ ಎಂ.ಎ. ರಡ್ಡೇರ ಹೇಳಿದರು.
ಸ್ಥಳೀಯ ಸಿಬಿಎಸ್‌ಸಿ ಶಾಲೆಯಲ್ಲಿ ಜಿಲ್ಲಾ ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿಯಿಂದ ಶನಿವಾರ ನಡೆದ ತಾಲೂಕಿನ ಸರ್ಕಾರಿ, ಅನುದಾನಿತ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರಿಗೆ ಶಾಲೆ, ವಿದ್ಯಾರ್ಥಿ, ಶಿಕ್ಷಕರು ಸ್ವಾಸ್ಥ್ಯ ಸಮಾಜಕ್ಕೆ ಶಿಕ್ಷಣ ಇಲಾಖೆಯ ಕೊಡುಗೆ ಕುರಿತು ಪ್ರೇರಣಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಸಂವಿಧಾನವು ನಮಗೆ ಸ್ವತಂತ್ರ ಬದುಕನ್ನು ಕಟ್ಟಿಕೊಡುವ ಜತೆಗೆ ಲಕ್ಷ್ಮಣರೇಖೆಯನ್ನು ಸಹ ವಿಧಿಸುತ್ತದೆ. ಹೀಗಾಗಿ ಸಂವಿಧಾನಬದ್ಧವಾಗಿ ನಾವು ನಡೆದುಕೊಂಡರೆ ಯಾರಿಗೂ ಹೆದರುವ ಅಗತ್ಯವಿಲ್ಲ. ಹಕ್ಕುಗಳ ಜತೆಗೆ ಪಾಲಿಸಬೇಕಾದ ಕರ್ತವ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಜರೂರತ್ತಿದೆ ಎಂದು ಹೇಳಿದರು.ಒಂದು ಜೀವವನ್ನು ಸಂರಕ್ಷಿಸುವುದು ಹಾಗೂ ಪೋಷಿಸುವುದು ಕರ್ತವ್ಯ ಎಂದು ತಿಳಿಸುವ ಸಂವಿಧಾನವು, ಭ್ರೂಣಾವಸ್ಥೆಯಿಂದ ಹಿಡಿದು ಉಸಿರು ನಿಲ್ಲಿಸಿದ ಬಳಿಕವು ವ್ಯಕ್ತಿಯ ಜತೆಗಿರುತ್ತದೆ. ಶಿಕ್ಷಣ ಕಡ್ಡಾಯ ಎಂಬ ಮಹತ್ವರವಾದ ತತ್ವ ಹಾಗೂ ಸಿದ್ಧಾಂತವನ್ನು ನೀಡುವ ಸಂವಿಧಾನವು ಕೇವಲ ಬೋಧನೆಗೆ ಸೀಮಿತವಾಗಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡುವುದು ಅವಶ್ಯಕವಾಗಿದೆ ಎಂದು ಹೇಳಿದರು.
ಶಾಲೆ ಎಂದರೆ ಕೇವಲ ಶಿಕ್ಷಕರು, ಪಾಲಕರು ಹಾಗೂ ವಿದ್ಯಾರ್ಥಿಗಳ ತಾಣವಾಗಬಾರದು. ಅದೊಂದು ಪವಿತ್ರವಾದ ಸ್ಥಳವಾಗಿದ್ದು, ಅದರ ರಕ್ಷಣೆ ಜತೆಗೆ ಶಾಲಾ ಅಭಿವೃದ್ಧಿಗೆ ಸಮುದಾಯದ ಸಹಭಾಗಿತ್ವವೂ ಮುಖ್ಯವಾಗಿದೆ. ಶಿಕ್ಷಕರು ಮನಸ್ಸು ಮಾಡಿದರೆ ಎಲ್ಲವನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದ್ದಾರೆ ಎಂಬುದಕ್ಕೆ ಈಗಾಗಲೇ ಅನೇಕ ವರದಿಗಳು ನಮ್ಮೆದುರಿಗಿವೆ ಎಂದರು.ಹಿರಿಯ ಉಪನ್ಯಾಸಕ ಎಸ್.ಬಿ. ರಡ್ಡೇರ, ಬಿಇಒ ಆರ್.ಎನ್. ಹುರಳಿ, ಬಿಆರ್‌ಸಿಒ ಎಂ.ಎ. ಫನಿಬಂದ, ಎಚ್.ಆರ್. ರಡ್ಡೇರ, ಕವಿತಾ ಪಾಟೀಲ, ವಿ.ಎ. ಹಾದಿಮನಿ, ಎ.ಕೆ. ಒಂಟಿ, ಆರ್.ಜಿ. ಮ್ಯಾಕಲ್, ನಜೀರ ಸರಕಾವಸ್, ಪ್ರಕಾಶ ಅಂಬೋರೆ ಹಾಗೂ ನೂರಾರು ಶಿಕ್ಷಕರು ಇದ್ದರು.
ಶಾಲೆ ಎಂದರೆ ಸಮುದಾಯದ ಕೇಂದ್ರವಾಗಿದ್ದು, ಸಾಂಸ್ಥಿಕ ಹೊಣೆಗಾರಿಕೆಯನ್ನು ಹೊಂದಿದೆ. ಎಲ್ಲರನ್ನೂ ಸೇರಿಸಿ ಸಂವಿಧಾನಾತ್ಮಕ ಅವಕಾಶಗಳನ್ನು ತಿಳಿಸುವ ಜತೆಗೆ ಕರ್ತವ್ಯ ಹಾಗೂ ಹಕ್ಕುಗಳನ್ನು ತಿಳಿಸಿ ವ್ಯಕ್ತಿಯನ್ನು ಸಮಾಜದ ಉತ್ತಮ ಪ್ರಜೆಯನ್ನಾಗಿಸುವುದು ಶಿಕ್ಷಕರ ಕರ್ತವ್ಯವಾಗಿದೆ ಎಂದು ಡಿಡಿಪಿಐ ಎಂ.ಎ. ರಡ್ಡೇರ ಹೇಳಿದರು.