ಕಬ್ಬಿಣಕಂಥಿ ಮಠದ ಶ್ರೀಗಳಿಂದ ಕುರುಬರ ಶೋಷಣೆ: ಕಾಗಿನೆಲೆ ಶ್ರೀ

KannadaprabhaNewsNetwork |  
Published : Mar 28, 2025, 12:33 AM IST
ಕಾಗಿನೆಲೆ ಶ್ರೀ | Kannada Prabha

ಸಾರಾಂಶ

ಜಿಲ್ಲೆಯ ಎರಡು ಪ್ರಮುಖ ಸಮಾಜದ ಮಠಗಳ ಸ್ವಾಮೀಜಿಗಳ ನಡುವೆಯೇ ಪರಸ್ಪರ ಕಚ್ಚಾಟ ನಡೆದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹಾವೇರಿ: ರಟ್ಟಿಹಳ್ಳಿಯ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಯವರು 60 ವಸಂತಗಳನ್ನು ಪೂರ್ಣಗೊಳಿಸಿದ ನಿಮಿತ್ತ ಶ್ರೀಗಳ ಜನ್ಮದಿನದಂದು ಷಷ್ಠ್ಯಬ್ದಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬೀರಲಿಂಗೇಶ್ವರ ದೇವಸ್ಥಾನಗಳಿಂದ ಕಡ್ಡಾಯವಾಗಿ ₹25 ಸಾವಿರ ದೇಣಿಗೆ ನೀಡುವಂತೆ ಒತ್ತಾಯಿಸಿ ಕುರುಬ ಸಮಾಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಆರೋಪಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಬ್ಬಿಣಕಂಥಿ ಸ್ವಾಮೀಜಿಗಳ ಷಷ್ಠ್ಯಬ್ಧಿ ಕಾರ್ಯಕ್ರಮವನ್ನು ಮಠದಲ್ಲಿ ಆಯೋಜಿಸಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಹಾವೇರಿ, ದಾವಣಗೆರೆ ಜಿಲ್ಲೆಯ ಬೀರಲಿಂಗೇಶ್ವರ ದೇವರ ದೇವಸ್ಥಾನಗಳಿಗೆ ಭೇಟಿ ನೀಡಿ ರಟ್ಟಿಹಳ್ಳಿ ಶ್ರೀಗಳ ಆದೇಶವೆಂದು ಹೇಳುತ್ತಾ ಕಡ್ಡಾಯವಾಗಿ ಕನಿಷ್ಠ ₹25 ಸಾವಿರ ದೇಣಿಗೆ ನೀಡಿ ಮತ್ತು ದೇವರ ಪಲ್ಲಕ್ಕಿಯೊಂದಿಗೆ ಶ್ರೀಮಠಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದುಕೊಂಡು ಹೋಗಬೇಕೆಂದು ಒತ್ತಾಯಿಸುತ್ತಿರುವುದು ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತಾಗಿದೆ ಎಂದು ಕಿಡಿಕಾರಿದ್ದಾರೆ. ಇಂತಹ ಪಲ್ಲಕ್ಕಿ ಹೊರುವುದಕ್ಕಾಗಿ ನಮ್ಮ ಕುರುಬ ಸಮಾಜದ ಬಂಧುಗಳ ತನು, ಮನ, ಧನ ಬಳಸಿಕೊಂಡು ಲಿಂಗಪೂಜೆ, ಪಾದಪೂಜೆ ಎಂದು ಕಪೋಲಕಲ್ಪಿತ ಕತೆಗಳನ್ನು ಹೇಳುತ್ತಾ ನಿಮ್ಮನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಶೋಷಣೆ ಮಾಡುತ್ತಿರುವುದು ಖಂಡನೀಯ. ಈ ರೀತಿ ಕಂಡವರ ದುಡ್ಡಲ್ಲಿ ಮಜಾ ಮಾಡುವ ಇಂತಹ ಮಠ, ಸ್ವಾಮೀಜಿಗಳಿಂದ ದೂರವಿದ್ದು ತಮ್ಮ ಕುಟುಂಬವನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ ಸದೃಢಗೊಳಿಸಿಕೊಳ್ಳಲು ಕನಕ ಗುರುಪೀಠ ಅಪೇಕ್ಷಿಸುತ್ತದೆ ಎಂದು ಕಾಗಿನೆಲೆ ಶ್ರೀಗಳು ತಿಳಿಸಿದ್ದಾರೆ. ಅಲ್ಲದೇ ರಟ್ಟಿಹಳ್ಳಿ ಶ್ರೀಗಳು ಸ್ವಾಭಿಮಾನ ಬಿಟ್ಟು ಮುಗ್ಧ ಕುರುಬರನ್ನು ದುರ್ಬಳಕೆ ಮಾಡಿಕೊಳ್ಳುವ ಈ ಶೋಷಣೆ ನಡೆಯನ್ನು ಬದಲಾಯಿಸಿಕೊಳ್ಳಬೇಕೆಂದು ಕನಕ ಗುರುಪೀಠವು ಎಚ್ಚರಿಸುತ್ತಿದೆ ಎಂದೂ ಕಾಗಿನೆಲೆ ಶ್ರೀಗಳು ಹೇಳಿದ್ದಾರೆ.

ಕಾಗಿನೆಲೆ ಶ್ರೀಗಳ ಪ್ರಕಟಣೆ ಬಗ್ಗೆ ಪ್ರತಿಕ್ರಿಯಿಸಿದ ಕಬ್ಬಿಣಕಂಥಿ ಸ್ವಾಮೀಜಿ, ನನಗೀಗ 63 ವರ್ಷವಾಗಿದೆ. ನಾನು ಯಾರಿಗೂ ನನ್ನ ಷಷ್ಠ್ಯಬ್ಧಿ ಮಾಡುವಂತೆ ಹೇಳಿರಲಿಲ್ಲ. ಆದರೆ, ಮಠದ ಭಕ್ತರೇ ಸಮಿತಿ ರಚಿಸಿಕೊಂಡು ಏ. 19ರಿಂದ ಮೂರು ದಿನಗಳ ಕಾಲ ಕಾರ್ಯಕ್ರಮ ಆಯೋಜಿಸಿದ್ದಾರೆ. ನಾವು ಬೀರಲಿಂಗೇಶ್ವರ ದೇವಸ್ಥಾನಗಳಿಂದ ಕಡ್ಡಾಯವಾಗಿ ₹25 ಸಾವಿರ ಕೊಡುವಂತೆ ಹೇಳಿಲ್ಲ. ತುಲಾಭಾರ ಮಾಡುವ ಇಚ್ಛೆಯಿದ್ದರೆ ₹15 ಸಾವಿರ ಮಾಡಬಹುದು ಎಂದು ಹೇಳಿದ್ದೇವೆ. ಅದಕ್ಕೆ ರಸೀದಿ ನೀಡುತ್ತೇವೆ. ಕಾರ್ಯಕ್ರಮಕ್ಕೆ ಸಮಿತಿಯಿದೆ, ಪ್ರತಿಯೊಂದಕ್ಕೂ ಲೆಕ್ಕಪತ್ರ ಇರಲಿದೆ. ಯಾವುದೇ ವ್ಯಕ್ತಿಗೆ ಹಣ ಕೊಡಿ ಎಂದರೆ ಅದು ಅವರ ಭಕ್ತಿಯ ವಿಚಾರ. ನಮ್ಮ ಬಗ್ಗೆ ಭಕ್ತಿಯಿದ್ದರೆ ಮಾತ್ರ ಹಣ ಕೊಡುತ್ತಾರೆ. ನಾವು ಯಾರನ್ನೂ ಒತ್ತಾಯ ಮಾಡಿಲ್ಲ. ಕಾಗಿನೆಲೆ ಶ್ರೀಗಳು ತಮ್ಮ ಸಮಾಜದವರಿಗೆ ವೈಯಕ್ತಿಕವಾಗಿ ಕರೆ ಮಾಡಿ ದೇಣಿಗೆ ಕೊಡಬೇಡಿ ಎಂದು ಹೇಳಬಹುದು.

ಆದರೆ, ಹೀಗೆ ಸಾರ್ವಜನಿಕವಾಗಿ ಯಾಕೆ ಪ್ರಕಟಣೆ ನೀಡಿದ್ದಾರೋ ಗೊತ್ತಿಲ್ಲ. ಹಾಲುಮತ ಸಮಾಜದವರು ನಮ್ಮ ಮಠಕ್ಕೆ ಬಹಳ ಜನರು ನಡೆದುಕೊಳ್ಳುತ್ತಾರೆ. ಆಸಕ್ತಿ, ಭಕ್ತಿ ಇದ್ದವರು ತುಲಾಭಾರಕ್ಕೆ ದೇಣಿಗೆ ನೀಡಬಹುದು. ಇದರಲ್ಲಿ ಶೋಷಣೆ ಎಲ್ಲಿಂದ ಬಂತು? ಎಲ್ಲೂ ನಾವು ಒತ್ತಾಯವಾಗಿ ಕೇಳಿಲ್ಲ. ನಮ್ಮ ಮಠದಿಂದ ಹಾಲುಮತ ಸಮಾಜದ 70- 80 ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದೇವೆ ಎಂದು ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಎರಡೂ ಮಠಗಳ ಭಕ್ತರ ಬೇಸರ...

ಜಿಲ್ಲೆಯ ಎರಡು ಪ್ರಮುಖ ಸಮಾಜದ ಮಠಗಳ ಸ್ವಾಮೀಜಿಗಳ ನಡುವೆಯೇ ಪರಸ್ಪರ ಕಚ್ಚಾಟ ನಡೆದಿರುವುದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ರೀತಿ ಸಾರ್ವಜನಿಕವಾಗಿ ಒಂದು ಮಠದ ವಿರುದ್ಧ ಹೇಳಿಕೆ ನೀಡುವುದರಿಂದ ಎರಡು ಸಮಾಜಗಳ ನಡುವೆ ಕಂದಕ ಏರ್ಪಡುವಂತಾಗಿದೆ ಎಂದು ಎರಡೂ ಮಠಗಳ ಭಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ