ಧಾರವಾಡ:
ದೇಶದಲ್ಲಿ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಎಲ್ಲೆಡೆ ಮಕ್ಕಳು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಹೆಚ್ಚುತ್ತಿವೆ. ಅವರ ಮೇಲಿನ ಶೋಷಣೆ ತಪ್ಪುತ್ತಿಲ್ಲ. ಜನರ ಮನಸ್ಥಿತಿ ಬದಲು ಮಾಡುವುದೇ ಇದಕ್ಕೆ ಪರಿಹಾರ. ಪರಸ್ಪರ ಪ್ರೀತಿ, ವಿಶ್ವಾಸ, ಗೌರವ ಹೆಚ್ಚಿಸುವ ಕಾರ್ಯಚಟುವಟಿಕೆಗಳು ಸಮಾಜದಲ್ಲಿ ನಡೆಯಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು, ನ್ಯಾಯಾಧೀಶ ರಾಜಕುಮಾರ ಸಿ., ಹೇಳಿದರು.ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಇತರ ಇಲಾಖೆಗಳ ಸಹಯೋಗದಲ್ಲಿ ಪೋಕ್ಸೋ ಕಾಯ್ದೆ-2021, ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಹಾಗೂ ಕರ್ನಾಟಕ ರಾಜ್ಯ ತಿದ್ದುಪಡಿ ಕಾಯ್ದೆ-2019, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕುರಿತು ಅನುಷ್ಠಾನಾಧಿಕಾರಿಗಳಿಗೆ ಶುಕ್ರವಾರ ಆಯೋಜಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿನ ಪ್ರಕರಣ ನೋಡಿದಾಗ, ಈ ಅಮಾನವೀಯ ಘಟನೆಗಳು ಜರುಗಲು ಅವರಲ್ಲಿ ಕಾನೂನು ಅರಿವಿನ ಕೊರತೆ ಸಹ ಕಾಣುತ್ತದೆ. ಮಕ್ಕಳಲ್ಲಿ ಪೋಕ್ಸೋ ಮತ್ತು ಬಾಲ್ಯ ವಿವಾಹ ನಿಷೇಧ ಕಾನೂನುಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಅಸಹನೀಯ ಘಟನೆಗಳು ನಡೆದಾಗ ಯಾರನ್ನು, ಹೇಗೆ, ಎಲ್ಲಿ ಸಂಪರ್ಕಿಸಬೇಕು ಎಂಬ ತಿಳಿವಳಿಕೆ ಮಕ್ಕಳಲ್ಲಿ ಇರಬೇಕು. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಕಾರ್ಯಕ್ರಮ ರೂಪಿಸಿ, ಜಾರಿಗೊಳಿಸಬೇಕೆಂದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ಕಾನುನೂಗಳ ಉಚಿತ ನೆರವು ಮತ್ತು ಅರಿವು ಕಾರ್ಯಕ್ರಮಗಳನ್ನು ನಿರಂತರವಾಗಿ ಸಂಘಟಿಸುತ್ತಿದೆ. ಆದರೂ ಸಹ ವಿಶೇಷವಾಗಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆ ಆಗುತ್ತಿಲ್ಲ. ಸಮುದಾಯದ ಸಹಕಾರದಿಂದ ಇಂತಹ ಅನಿಷ್ಟಗಳನ್ನು ತಡೆಗಟ್ಟಬಹುದು. ಸರ್ಕಾರಿ ಇಲಾಖೆಗಳು ಹಾಗೂ ಸಮುದಾಯ ಸಂಘಟನೆಗಳು ಕೈ ಜೋಡಿಸಬೇಕೆಂದು ನ್ಯಾಯಾಧೀಶ ರಾಜಕುಮಾರ ಸಿ., ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಹಾಯಕ ಪೊಲೀಸ್ ಆಯುಕ್ತ ಎಸ್.ಟಿ. ಒಡೆಯರ, ವಿವಿಧ ಕಾನೂನುಗಳ ಅರಿವು ಅನುಷ್ಠಾನ ಅಧಿಕಾರಿಗಳಿಗೆ ಅಗತ್ಯವಿದೆ. ಪೋಕ್ಸೋ ಮತ್ತು ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಎಲ್ಲ ಇಲಾಖೆಗಳ ಸಹಕಾರ ಅಗತ್ಯ. ಶಾಲಾ-ಕಾಲೇಜುಗಳಲ್ಲಿ ಪೊಲೀಸ್ ಇಲಾಖೆಯಿಂದ ಕಾನೂನು ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ವೈದ್ಯಾಧಿಕಾರಿ ಡಾ. ಕೆ.ಎನ್. ತನುಜಾ, ನ್ಯಾಯಾಧೀಶ ಪರುಶರಾಮ ದೊಡ್ಡಮನಿ, ಮಕ್ಕಳ ರಕ್ಷಣಾ ಘಟಕದ ಮಹಮ್ಮದ್ ಅಲಿ ತಹಶೀಲ್ದಾರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನೀತಾ ವಾಡಕರ, ಸರ್ಕಾರಿ ಅಭಿಯೋಜಕಿ ಶೈಲಾ ಅಂಗಡಿ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಎಸ್.ಎಂ. ಹುಡೇದಮನಿ, ಪಿಯು ಇಲಾಖೆ ಉಪ ನಿರ್ದೇಶಕ ಕೆ.ಪಿ. ಸುರೇಶ ಇದ್ದರು. ಆಯಾ ವಿಷಯಗಳ ಪರಿಣಿತರು ವಿವಿಧ ಕಾಯ್ದೆಗಳ ಕುರಿತು ಉಪನ್ಯಾಸ ನೀಡಿದರು.