- ಶನಿವಾರ ರಾತ್ರಿ ನಡೆದ ಸ್ಫೋಟದಿಂದ ಬೆಚ್ಚಿಬಿದ್ದ ಜನತೆ । ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ, ಪರಿಶೀಲನೆ
ಕನ್ನಡಪ್ರಭ ವಾರ್ತೆ ಜಗಳೂರು
ಪಟ್ಟಣದ ತಾಲೂಕು ಕಚೇರಿ ಮುಂಭಾಗ ಚರಂಡಿ ನಿರ್ಮಾಣ ಕಾಮಗಾರಿ ಹಿನ್ನೆಲೆ ಸಿಡಿಮದ್ದು ಸ್ಫೋಟ ಸಂಭವಿಸಿ, ಜನರಲ್ಲಿ ಆತಂಕ ಮೂಡಿಸಿದ ಘಟನೆ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಸಂಭವಿಸಿದೆ.ದಾವಣಗೆರೆಯಿಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಘಟನೆಗೆ ಕಾರಣರಾದ ಬೆಂಗಳೂರು ಮೂಲದ ಗುತ್ತಿಗೆದಾರನ ವಿರುದ್ಧ ಪೊಲೀಸರು ಪ್ರಕರಣ ಸಹ ದಾಖಲಿಸಿದರು.
ಸಿಡಿಮದ್ದು ಸ್ಫೋಟದ ತೀವ್ರತೆಗೆ ಸ್ಥಳದಲ್ಲಿ ವಿದ್ಯುತ್ ಪೂರೈಕೆಯ ತಂತಿಗಳಿಗೆ ಬೆಂಕಿ ತಾಕಿದ್ದರಿಂದ ತಕ್ಷಣವೇ ಕರೆಂಟ್ ಹೋಯಿತು. ಅಲ್ಲದೇ, ಕೆಲವು ಮನೆಗಳಲ್ಲಿನ ಟಿವಿ, ಫ್ಯಾನ್, ಯುಪಿಎಸ್ ಇನ್ನಿತರೆ ಎಲೆಕ್ಟ್ರಾನಿಕ್ ವಸ್ತುಗಳು ಹಾನಿಯಾಗಿವೆ. ವಿದ್ಯುತ್ ಪೂರೈಕೆ ಇಲ್ಲದೇ ರಾತ್ರಿ ಕೆಲವೊತ್ತು ಬಡಾವಣೆಗಳ ಜನತೆ ಕತ್ತಲಲ್ಲೇ ಕಾಲ ಕಳೆಯುವಂತಾಯಿತು. ಬೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ವಿದ್ಯುತ್ ಸಮಸ್ಯೆ ಸರಿಪಡಿಸಿದರು.
- - -
(ಬಾಕ್ಸ್-1)* ಗುತ್ತಿಗೆದಾರನ ವಿರುದ್ದ ಕಿಡಿ
ಚರಂಡಿ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ಬಂಡೆಯನ್ನು ತೆರವುಗೊಳಿಸಲು ಸಿಡಿಮದ್ದು ಇಡುವ, ಸ್ಫೋಟಿಸುವ ಮುನ್ನ ಸಂಬಂಧಿಸಿದ ಅಧಿಕಾರಿಗಳು ಮತ್ತು ಶಾಸಕರ ಗಮನಕ್ಕೆ ವಿಷಯ ತಂದಿಲ್ಲ. ಜನವಸತಿಯ ಪ್ರದೇಶದಲ್ಲಿ, ಜನರು ಓಡಾಡುವ ಸಮಯದಲ್ಲೇ ಸ್ಫೋಟ ನಡೆಸಿದ್ದು ಖಂಡನಿಯ. ಗುತ್ತಿಗೆದಾರನ ಹುಚ್ಚಾಟಕ್ಕೆ ಜನರನ್ನು ಬಲಿ ಪಡೆದುಕೊಳ್ಳುತ್ತಿದ್ದರು. ದೇವರ ದಯೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ. ಗುತ್ತಿಗೆದಾರನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
- - -(ಬಾಕ್ಸ್-2)
ಸ್ಫೋಟ ಘಟನೆ ನಡೆದ ಬಳಿಕ ಪೊಲೀಸರ ಮಾಹಿತಿ ಮೇರೆಗೆ ದಾವಣಗೆರೆಯಿಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದರು. ಬಾಂಬ್ ನಿಷ್ಕ್ರಿಯ ದಳದ ಎಎಸ್ಐ ವೀರಭದ್ರಪ್ಪ ನೇತೃತ್ವದಲ್ಲಿ ಸಿಬ್ಬಂದಿ ಸಿಡಿಮದ್ದು ಸ್ಪೋಟಗೊಂಡ ಸ್ಥಳ ಮತ್ತು ಸ್ಫೋಟಕ್ಕೆ ಬಳಸಲಾದ ವಸ್ತುಗಳ ತಪಾಸಣೆ ನಡೆಸಿ, ಪರಿಶೀಲಿಸಿದರು. ಘಟನೆಗೆ ಕಾರಣರಾದ ಬೆಂಗಳೂರು ಮೂಲದ ಗುತ್ತಿಗೆದಾರನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.
ಜನನಿಬಿಡ ಸ್ಥಳಗಳಲ್ಲಿ ಏಕಾಏಕಿ ಸಿಡಿಮದ್ದು ಸ್ಫೋಟಿಸುವುದು ಕಾನೂನುಬಾಹಿರ. ಯಾವುದೇ ಪ್ರಾಣ ಹಾನಿಯಾಗಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ತಾಕೀತು ಮಾಡಿದರು.ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸಿದ್ರಾಮಯ್ಯ, ಪಿಎಸ್ಐ ಗಾದಿ ಲಿಂಗಪ್ಪ, ಬಾಂಬ್ ನಿಷ್ಕ್ರಿಯ ದಳದ ಎಎಸ್ಐ ವೀರಭದ್ರಪ್ಪ, ಸಿಬ್ಬಂದಿ ಸಿದ್ದೇಶ್, ರೇವಣಸಿದ್ದಪ್ಪ, ಮಲ್ಲಿಕಾರ್ಜುನ್, ಮುರುಡಪ್ಪ, ನಾಗರಾಜ್, ಅನಿಲ್ ರೆಡ್ಡಿ ಮತ್ತಿತರರಿದ್ದರು.
-09ಜೆಜಿಎಲ್1: ಜಗಳೂರಿನ ತಾಲೂಕು ಕಚೇರಿ ಮುಂಭಾಗದಲ್ಲಿ ಶನಿವಾರ ರಾತ್ರಿ ಸ್ಫೋಟಗೊಂಡ ರಭಸಕ್ಕೆ ಚೆಲ್ಲಾಪಿಲ್ಲಿಯಾಗಿರುವ ಕಲ್ಲುಗಳು.
-09ಜೆಎಲ್‌ಆರ್೧ಎ: ಜಗಳೂರಿನ ತಾಲೂಕು ಕಚೇರಿ ಮುಂಭಾಗದಲ್ಲಿ ಶನಿವಾರ ರಾತ್ರಿ ಸ್ಫೋಟ ನಡೆಸಿದ ಸ್ಥಳಕ್ಕೆ ಭಾನುವಾರ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿ-ಸಿಬ್ಬಂದಿ ಭೇಟಿ ನೀಡಿ, ತಪಾಸಣೆ ನಡೆಸಿದರು. ಪೊಲೀಸ್ ಇನ್ಸ್ಪೆಕ್ಟರ್ ಸಿದ್ರಾಮಯ್ಯ, ಪಿಎಸ್ಐ ಗಾದಿ ಲಿಂಗಪ್ಪ, ಬಾಂಬ್ ನಿಷ್ಕ್ರಿಯ ದಳದ ಎಎಸ್ಐ ವೀರಭದ್ರಪ್ಪ ಇದ್ದರು.