ಧಾರವಾಡದ ಆಪೂಸ್‌ ಮಾವು ಅಮೇರಿಕಾಗೆ ರಫ್ತು

KannadaprabhaNewsNetwork | Updated : May 13 2024, 01:01 PM IST

ಸಾರಾಂಶ

ಸಾಮಾನ್ಯವಾಗಿ ಧಾರವಾಡ ಮಾವು ಮುಂಬೈ ವರೆಗೂ ಹೋಗುತ್ತಿತ್ತು. ಎರಡ್ಮೂರು ವರ್ಷಗಳಿಂದ ಅದು ಸೌದಿ ರಾಷ್ಟ್ರಗಳಿಗೂ ರಫ್ತಾಗುತ್ತಿತ್ತು. ಇದೀಗ ಅಮೇರಿಕಾದ ಮಾವು ಪ್ರಿಯರಿಂದಲೂ ಬೇಡಿಕೆ ಬಂದಿದೆ.

 ಧಾರವಾಡ :  ಧಾರವಾಡ ಪೇಢಾ ಹೆಸರಿನ ಜೊತೆಗೆ ಇತ್ತೀಚಿನ ವರ್ಷಗಳಲ್ಲಿ ಧಾರವಾಡ ಆಪೂಸ್‌ ಮಾವು ಹೆಸರು ಸಹ ದೇಶ-ಹೊರದೇಶಗಳಲ್ಲಿ ಕೇಳಿ ಬರುತ್ತಿದೆ. ಧಾರವಾಡ ಭಾಗದಲ್ಲಿ ಬೆಳೆಯುವ ಮಾವು ಅಷ್ಟೊಂದು ಪ್ರಸಿದ್ಧಿಯಾಗಿದ್ದು, ಇದೀಗ ದೂರದ ಅಮೇರಿಕಾದಿಂದಲೂ ಆಪೂಸ್‌ ಹಣ್ಣಿಗೆ ಬೇಡಿಕೆ ಬಂದಿದೆ.

ಸಾಮಾನ್ಯವಾಗಿ ಧಾರವಾಡ ಮಾವು ಮುಂಬೈ ವರೆಗೂ ಹೋಗುತ್ತಿತ್ತು. ಎರಡ್ಮೂರು ವರ್ಷಗಳಿಂದ ಅದು ಸೌದಿ ರಾಷ್ಟ್ರಗಳಿಗೂ ರಫ್ತಾಗುತ್ತಿತ್ತು. ಇದೀಗ ಅಮೇರಿಕಾದ ಮಾವು ಪ್ರಿಯರಿಂದಲೂ ಬೇಡಿಕೆ ಬಂದಿದೆ. ಸಮೀಪದ ಕಲಕೇರಿಯ ಬೆಳೆಗಾರ ಪ್ರಮೋದ ಗಾಂವಕರ ಎಂಬುವರ ತೋಟದ ಮಾವನ್ನು ಅಮೇರಿಕಾಗೆ ಕಳುಹಿಸಲು ಸಿದ್ಧತೆ ನಡೆದಿದೆ. ಗಾಂವಕರ ಅವರ ತೋಟದಲ್ಲಿ ಗುಣಮಟ್ಟದ ಮಾವು ಇರುವ ಹಿನ್ನೆಲೆಯಲ್ಲಿ ಐದು ಟನ್‌ ಮಾವಿಗೆ ಬೇಡಿಕೆ ಬಂದಿದೆ. ಆದರೆ, ಅಷ್ಟೊಂದು ಪ್ರಮಾಣದ ಇಳುವರಿ ಇಲ್ಲದ ಹಿನ್ನೆಲೆಯಲ್ಲಿ ಮೂರು ಟನ್‌ ಮಾವು ನೀಡಲು ಗಾಂವಕರ ಒಪ್ಪಿದ್ದಾರೆ.

ಅಮೇರಿಕಾದ ಸ್ಯಾನ್‌ ಫ್ರಾನ್ಸಿಸ್ಕೋ ಮತ್ತು ಚಿಕಾಗೋದಿಂದ ಮಾವಿನ ಹಣ್ಣಿನ ಬೇಡಿಕೆ ಬಂದಿದೆ. ಇನ್ನೇನು ಹಣ್ಣಿಗೆ ಬಂದಿರುವ ಗುಣಮಟ್ಟದ ಮಾಗಿದ ಕಾಯಿಗಳನ್ನು ಮೊದಲಿಗೆ ಮುಂಬೈಗೆ ಕಳಿಸಲಾಗುತ್ತದೆ. ಮುಂಬೈವರೆಗೆ ಸಾಗಿಸಲು ವಿಶೇಷವಾದ ವಾಹನ ಬರಲಿದೆ. ಮುಂಬೈ ತಲುಪಿದ ಬಳಿಕ ಅಲ್ಲಿ ಮತ್ತೊಮ್ಮೆ ಗುಣಮಟ್ಟವನ್ನು ಪರೀಕ್ಷಿಸಿ, ಅಲ್ಲಿಂದ ನೇರವಾಗಿ ಅಮೇರಿಕಾಕ್ಕೆ ವಿಮಾನ ಮೂಲಕ ರಫ್ತು ಮಾಡಲಾಗುತ್ತೆದೆ. ಒಂದು ಕೆಜಿ ಮಾವಿಗೆ ₹175 ದರ ನಿಗದಿ ಮಾಡಲಾಗಿದೆ. ಸದ್ಯ ಹೋಲ್‌ಸೇಲ್‌ ಮಾರುಕಟ್ಟೆಯಲ್ಲಿ ಕೆಜಿಗೆ ₹40 ಇದೆ ಎಂದು ಪ್ರಮೋದ ಗಾಂವಕರ ಮಾಹಿತಿ ನೀಡಿದರು.

ಇನ್ನು ರೈತ ಪ್ರಮೋದ ಒಟ್ಟು 50 ಎಕರೆ ಪ್ರದೇಶದಲ್ಲಿ ಮಾವು ಬೆಳೆದಿದ್ದಾರೆ. ಆಪೂಸ್‌ ಮಾತ್ರವಲ್ಲದೇ ಬೇರೆ ಬೇರೆ ತಳಿಗಳನ್ನು ಬೆಳೆದಿರುವ ಪ್ರಮೋದ ಅವರ ತೋಟದಿಂದಲೇ ಇದೀಗ ಮಾವು ಅಮೇರಿಕಾಕ್ಕೆ ಹಾರುತ್ತಿರುವುದು ಸ್ಥಳೀಯರಿಗೂ ಖುಷಿ ತಂದಿದೆ. ಧಾರವಾಡ ಭಾಗದಲ್ಲಿ ಏಪ್ರಿಲ್‌-ಮೇ ತಿಂಗಳಲ್ಲಿ ಮಾವಿನ ಸುಗ್ಗಿ. ಈಗಾಗಲೇ ಮಾವು ಮಾಗಿದ್ದು ಮಳೆ ಬರುವ ಹೊತ್ತಿಗೆ ಅದರ ಹಂಗಾಮು ಮುಗಿಯಲಿದ್ದು, ಈಗ ನೈಸರ್ಗಿಕವಾಗಿ ಹಣ್ಣುಗಳಾಗುತ್ತಿದ್ದು ತಿನ್ನಲು ಬಲು ರುಚಿ. ಹೀಗಾಗಿ ಬೇರೆ ಬೇರೆ ಊರು, ದೇಶಗಳಿಂದ ಬೇಡಿಕೆ ಬಂದಿದೆ.

Share this article