ರಪ್ತು ಸ್ಥಗಿತ, ಗಿಡದಲ್ಲಿಯೇ ಕೊಳೆಯುತ್ತಿರುವ ಪಪ್ಪಾಯಿ ಹಣ್ಣು!

KannadaprabhaNewsNetwork |  
Published : Apr 03, 2026, 02:15 AM IST
ಪಪ್ಪಾಯಿ ಹಣ್ಣಿನ ಬೆಳೆ. | Kannada Prabha

ಸಾರಾಂಶ

ಇರಾನ್-ಇಸ್ರೇಲ್ (ಅಮೇರಿಕಾ) ನಡುವಿನ ಯುದ್ಧದ ಎಪೆಕ್ಟ್ ಈಗ ತೋಟಗಾರಿಕೆ ಬೆಳೆಯಾದ ಪಪ್ಪಾಯಿ ಬೆಳೆಗೂ ತಟ್ಟಿದೆ.

ಭಾರಿ ಪ್ರಮಾಣದ ನಷ್ಟದಿಂದ ಈಗ ದಿಕ್ಕು ತೋಚದಂತಾಗಿ ಕಂಗಾಲಾದ ರೈತರು

ಕನ್ನಡಪ್ರಭ ವಾರ್ತೆ ಮುಂಡಗೋಡ

ಇರಾನ್-ಇಸ್ರೇಲ್ (ಅಮೇರಿಕಾ) ನಡುವಿನ ಯುದ್ಧದ ಎಪೆಕ್ಟ್ ಈಗ ತೋಟಗಾರಿಕೆ ಬೆಳೆಯಾದ ಪಪ್ಪಾಯಿ ಬೆಳೆಗೂ ತಟ್ಟಿದೆ. ದಷ್ಟಪುಷ್ಟವಾಗಿ ಬೆಳೆದು ನಿಂತಿರುವ, ವಿದೇಶಕ್ಕೆ ರಪ್ತಾಗಬೇಕಿದ್ದ ಪಪ್ಪಾಯಿ ಹಣ್ಣನ್ನು ಈಗ ಕೇಳುವವರೇ ಇಲ್ಲದಂತಾಗಿದೆ. ವರ್ಷವಿಡೀ ಹಗಲಿರುಳು ಶ್ರಮಿಸಿ ಪಪ್ಪಾಯಿ ಬೆಳೆದ ರೈತರು ಭಾರಿ ಪ್ರಮಾಣದ ನಷ್ಟದಿಂದ ಕಂಗಾಲಾಗಿದ್ದಾರೆ.ಸಮಗ್ರ ಕೃಷಿಯಲ್ಲಿ ಅಪ್ರತಿಮ ಸಾಧನೆ ಮಾಡುವ ಮೂಲಕ ರಾಜ್ಯ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತರಾಗಿರುವ ಮುಂಡಗೋಡ ತಾಲೂಕಿನ ಉಗ್ಗಿನಕೇರಿ ಗ್ರಾಮದ ಪ್ರಗತಿ ಪರ ರೈತ ಬಸವರಾಜ ನಡುವಿನಮನಿ ಸುಮಾರು ೧೫ ಎಕರೆಯಲ್ಲಿ ಅಂತಾರಾಷ್ಟ್ರೀಯ ರಪ್ತು ಗುಣಮಟ್ಟದ "ತೈವಾನ್ ಲೇಡಿ ೭೮೬ " ತಳಿಯ ಪಪ್ಪಾಯಿ ಬೆಳೆದಿದ್ದಾರೆ. ಅದರಂತೆ ಫಸಲು ಕೂಡ ಉತ್ತಮವಾಗಿ ಬಂದಿದ್ದು, ಒಳ್ಳೆಯ ದರ ಸಿಕ್ಕರೆ ಉತ್ತಮ ಲಾಭ ಪಡೆಯಬಹುದು ಎಂಬ ಲೆಕ್ಕಾಚಾರದಲ್ಲಿದ್ದರು. ಆದರೆ ಈಗ ಯುದ್ಧದ ಕಾರಣ ವಿದೇಶ ರಪ್ತು ಸ್ಥಗಿತಗೊಂಡಿರುವುದರಿಂದ ಸಾಗಿಸಲಾಗದೆ ಗಿಡದಲ್ಲಿಯೇ ಹಣ್ಣಾಗಿ ಕೊಳೆಯುವ ಸ್ಥಿತಿ ಎದುರಾಗಿದೆ. ಈ ಹಣ್ಣಿಗೆ ಅರಬ್ ರಾಷ್ಟ್ರಗಳಲ್ಲಿ ಭಾರಿ ಬೇಡಿಕೆ ಇರುವ ಕಾರಣ ಪಪ್ಪಾಯಿ ಪೂರೈಸುವ ಬಗ್ಗೆ ಟ್ರೋಪಿಕೋಲಾ ಎಂಬ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು ಅದಕ್ಕನುಗುಣವಾಗಿಯೇ ಕಳೆದ ೫ ವರ್ಷಗಳಿಂದ ನಿರಂತರವಾಗಿ ಈ ವಿದೇಶಿ ತಳಿಯ ಪಪ್ಪಾಯಿ ಬೆಳೆದು ನಿರೀಕ್ಷೆಯಂತೆ ಲಾಭ ಗಳಿಸುತ್ತ ಬಂದಿದ್ದಾರೆ. ಬೆಳೆಯನ್ನು ಆ ಕಂಪನಿಯು ಅರಬ್ ರಾಷ್ಟ್ರಗಳಿಗೆ ರಪ್ತು ಮಾಡುತ್ತ ಬಂದಿದೆ. ಆದರೆ ಈ ಬಾರಿ ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಕದನದಿಂದಾಗಿ ರಪ್ತು ಸ್ಥಗಿತಗೊಂಡಿದ್ದರಿಂದ ತೋಟದಲ್ಲಿ ಬೆಳೆದ ಪಪ್ಪಾಯಿ ರಪ್ತು ಮಾಡಲಾಗದೆ ಗಿಡದಲ್ಲಿಯೇ ಹಣ್ಣಾಗಿ ಕೊಳೆಯುತ್ತಿದೆ. ಅನಿವಾರ್ಯವಾಗಿ ತೋಟಕ್ಕೆ ಬಂದವರಿಗೆಲ್ಲ ಉಚಿತವಾಗಿ ಹಂಚುತ್ತಿದ್ದಾರೆ ರೈತ ಬಸವರಾಜ ನಡುವಿನಮನಿ.ಪಪ್ಪಾಯಿ ಬೆಳೆ ವಿಸ್ತರಿಸುವ ದೃಷ್ಟಿಯಿಂದ ಮತ್ತೆ ೨೫ ಎಕರೆ ಪ್ರದೇಶದಲ್ಲಿ ತೈವಾನ್ ಲೇಡಿ ೭೮೬ ಪಪ್ಪಾಯಿ ಗಿಡಗಳನ್ನು ಬೆಳೆಸಲಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ ಎಂಬುವುದು ಈ ರೈತರ ಆತಂಕ.₹೮೦ ಲಕ್ಷ ನಷ್ಟ

ಟ್ರೋಪಿಕೋಲಾ ಕಂಪನಿಯವರು ಕೆಜಿಗೆ ₹೧೫ರಂತೆ ಪಪ್ಪಾಯಿ ಹಣ್ಣು ಖರೀದಿಸಿ ಸಂಸ್ಕರಿಸಿ ಸುಮಾರು ೬ ತಿಂಗಳು ಶೇಖರಣೆ ಮಾಡಿಟ್ಟು ಸೇವಿಸುವ ರೀತಿಯಲ್ಲಿ ಅರಬ್ ದೇಶಗಳಿಗೆ ರಪ್ತು ಮಾಡುತ್ತಿದ್ದರು. ಆದರೆ ಈಗ ಯುದ್ಧದ ಕಾರಣ ದಷ್ಟಪುಷ್ಟವಾಗಿ ಬೆಳೆದು ನಿಂತ ಪಪ್ಪಾಯಿ ಹಣ್ಣು ರಪ್ತು ಮಾಡಲಾಗದೆ ತೋಟದಲ್ಲಿಯೇ ಕೊಳೆಯುತ್ತಿದ್ದು, ಎಕರೆಗೆ ₹೫-೬ ಲಕ್ಷದಂತೆ ೧೫ ಎಕರೆ ಬೆಳೆಯಿಂದ ಸುಮಾರು ₹೮೦ ಲಕ್ಷ ನಷ್ಟವಾದಂತಾಗಿದೆ ಎನ್ನುತ್ತಾರೆ ಪಪ್ಪಾಯಿ ಬೆಳೆಗಾರ ಬಸವರಾಜ ನಡುವಿನಮನಿ.

ಅಂತಾರಾಷ್ಟ್ರೀಯ ಮಾರುಕಟೆ ಅವಲಂಬಿಸಿ ಪಪ್ಪಾಯಿ ಬೆಳೆದ ರೈತರಿಗೆ ರಪ್ತು ಮಾಡಲಾಗದೆ ತೊಂದರೆಯಾಗಿದೆ ವಿನಃ ಸ್ಥಳೀಯ ಮಾರುಕಟ್ಟೆ ಅವಲಂಬಿತ ಬೆಳೆಗಾರರಿಗೆ ಯಾವುದೇ ಸಮಸ್ಯೆ ಇಲ್ಲ. ಆದರೂ ಕೂಡ ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೃಷ್ಣ ಕುಳ್ಳೂರ ಹೇಳಿದ್ದಾರೆ.

ಮಧ್ಯ ಪ್ರಾಚ್ಯದಲ್ಲಿ ಯುದ್ದ ಆರಂಭ ಆಗಿರುವುದರಿಂದ ವಿದೇಶ ರಪ್ತು ಹಣ್ಣು ಬೆಳೆಗಾರರಿಗೆ ಆರ್ಥಿಕವಾಗಿ ತೀವ್ರ ತೊಂದರೆಯಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆಗೆ ಸರ್ಕಾರ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಮಾಡಿದೆ. ಅದರಂತೆ ಈ ಭಾಗದ ಪ್ರಧಾನ ಬೆಳೆಯಾಗಿರುವ ಬಾಳೆ ಮತ್ತು ಪಪ್ಪಾಯಿ ಬೆಳೆ ಸಂಸ್ಕರಣೆಗೆ ವ್ಯವಸ್ಥೆ ಮಾಡಿಕೊಡಬೇಕಿದೆ ಎನ್ನುತ್ತಾರೆ ಪಪ್ಪಾಯಿ ಬೆಳೆಗಾರ ಬಸವರಾಜ ನಡುವಿನಮನಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸನಾತನ ಧರ್ಮ ಜಗತ್ತಿಗೆ ಬೆಳಕು ನೀಡುವ ಧರ್ಮ: ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ
15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ